ಪ್ರಮಾಣ ವಚನ ದಿನಾಂಕ ಘೋಷಿಸಿದ ತೇಜಸ್ವಿ!

| N/A | Published : Nov 03 2025, 01:45 AM IST / Updated: Nov 03 2025, 07:03 AM IST

Tejasvi Yadav

ಸಾರಾಂಶ

ಬಿಹಾರದಲ್ಲಿ ಅಧಿಕಾರದ ಚುಕ್ಕಾಣಿ ಯಾರ ಪಾಲಾಗಲಿದೆ ಎನ್ನುವ ಕುತೂಹಲ ಗರಿಗೆದರಿರುವ ನಡುವೆಯೇ ಇಂಡಿಯಾ ಕೂಟದ ಸಿಎಂ ಅಭ್ಯರ್ಥಿ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರು, ನ.14ರಂದು ನಾವೇ ಗೆಲ್ಲುತ್ತೇವೆ. 18 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ ಎಂದು ಘೋಷಿಸಿದ್ದಾರೆ.

  ಪಟನಾ :  ಬಿಹಾರದಲ್ಲಿ ಅಧಿಕಾರದ ಚುಕ್ಕಾಣಿ ಯಾರ ಪಾಲಾಗಲಿದೆ ಎನ್ನುವ ಕುತೂಹಲ ಗರಿಗೆದರಿರುವ ನಡುವೆಯೇ ಇಂಡಿಯಾ ಕೂಟದ ಸಿಎಂ ಅಭ್ಯರ್ಥಿ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರು, ನ.14ರಂದು ನಾವೇ ಗೆಲ್ಲುತ್ತೇವೆ. 18 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ ಎಂದು ಘೋಷಿಸಿದ್ದಾರೆ.

ಕೊಲೆ ಕೇಸ್‌ನಲ್ಲಿ ಜೆಡಿಯು ಅಭ್ಯರ್ಥಿ ಅನಂತ್‌ ಸಿಂಗ್ ಬಂಧನವಾದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ತೇಜಸ್ವಿ, ‘ಇಂದು ಪ್ರಧಾನಿ ನರೇಂದ್ರ ಮೋದಿ ಬಿಹಾರದಲ್ಲಿ ಪ್ರಚಾರ ನಿರತರಾಗಿದ್ದಾರೆ. ರಾಜ್ಯದಲ್ಲಿ ಅಪರಾಧ ರಹಿತವಾದ ಒಂದೂ ದಿನ ಇಲ್ಲ ಎಂಬುದನ್ನು ಅವರು ಗಮನಿಸಬೇಕು. ಆದರೆ ನಮ್ಮ ಮಹಾಘಟಬಂಧನ್‌ ಸರ್ಕಾರ ರಚನೆ ಬಳಿಕ ಅದೆಲ್ಲವೂ ನಿಲ್ಲಲಿದೆ. ನ.14ಕ್ಕೆ ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ನ.18ಕ್ಕೆ ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ’ ಎಂದರು.

ಇದಲ್ಲದೆ, ‘ನ.26 ರಿಂದ ಜ.26ರ ಅವಧಿಯು ಖಾರ್‌ಮಾಸದ ಸಮಯ (ಶುಭ ಕಾರ್ಯಗಳು ನಡೆಯದ ಮಾಸ). ಜಾತಿ, ಧರ್ಮ ಎನ್ನುವ ಯಾವುದೇ ಬೇಧವಿಲ್ಲದೆ ರಾಜ್ಯದ ಎಲ್ಲ ಕ್ರಿಮಿನಲ್‌ಗಳನ್ನು ಜೈಲಿಗೆ ಹಾಕುತ್ತೇನೆ’ ಎಂದರು.

ತೇಜಸ್ವಿ ಸಿಎಂ ಆಗೋದು ಕಾಂಗ್ರೆಸ್‌ಗೆ ಇಷ್ಟವಿಲ್ಲ: ಮೋದಿ 

 ಆರ್ರಾ/ ನಾವಾಡ :  ‘ಕಾಂಗ್ರೆಸ್‌ನವರಿಗೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರನ್ನು ಕಂಡರಾಗಲ್ಲ. ಆದರೆ ಲಾಲು ಪಕ್ಷವು ಕಾಂಗ್ರೆಸ್‌ ನಾಯಕರ ಹಣೆಗೆ ಬಂದೂಕಿಟ್ಟು ಸಿಎಂ ಅಭ್ಯರ್ಥಿ ಪಟ್ಟ ಪಡೆದುಕೊಂಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಬಿಹಾರದ ವಿವಿಧೆಡೆ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಮೋದಿ, ‘ಆರ್‌ಜೆಡಿಗೆ ಸಿಎಂ ಸ್ಥಾನವನ್ನು ಬಿಟ್ಟುಕೊಡುವುದು ಕಾಂಗ್ರೆಸ್‌ಗೆ ಎಂದಿಗೂ ಇಷ್ಟವಿರಲಿಲ್ಲ. ಆದರೆ ಆರ್‌ಜೆಡಿ ಹಣೆಗೆ ಗುಂಡಿಟ್ಟು ಸಿಎಂ ಸ್ಥಾನವನ್ನು ಪಡೆದುಕೊಂಡಿತು. ಇದನ್ನು ಅವರು ಜಂಗಲ್ ರಾಜ್ಯದ ಶಾಲೆಯಲ್ಲಿ ಕಲಿತಿದ್ದಾರೆ. ಇದು ಬಿಹಾರಕ್ಕೆ ಖಂಡಿತವಾಗಿಯೂ ಒಳ್ಳೆಯದಲ್ಲ’ ಎಂದರು.

‘ಜಂಗಲ್‌ ರಾಜ್ಯದ ಯುವರಾಜನು ಮತ್ತೊಬ್ಬ ಯುವರಾಜ ನಡೆಸಿದ ಮತ ಅಧಿಕಾರ ಯಾತ್ರೆಯು ತನಗೆ ಧಕ್ಕೆ ತರಬಹುದು ಎಂದು ತಲೆ ಕೆಡಿಸಿಕೊಂಡಿದ್ದಾನೆ. ಆದ್ದರಿಂದ ಆರ್‌ಜೆಡಿ ಕಾಂಗ್ರೆಸ್‌ ರಾಜ್ಯಾಧ್ಯಕ್ಷರ ವಿರುದ್ಧವೇ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಆರ್‌ಜೆಡಿಯನ್ನು ಸೋಲಿಸಲು ಕಾಂಗ್ರೆಸ್‌ ಬಯಸುತ್ತಿದೆ. ಚುನಾವಣೆಯ ಬಳಿಕ ಎರಡೂ ಪಕ್ಷಗಳ ನಾಯಕರು ಪರಸ್ಪರ ಕಿತ್ತಾಡುತ್ತಾರೆ’ ಎಂದು ಭವಿಷ್ಯ ನುಡಿದರು.ಜತೆಗೆ ‘ಆರ್‌ಜೆಡಿ ಇತಿಹಾಸದಲ್ಲಿ ಅತಿ ಭೀಕರ ಸೋಲು ಅನುಭವಿಸಲಿದೆ. ಬಿಹಾರದ ಜನರು ಜಂಗಲ್‌ ರಾಜ್ಯವನ್ನು ಇಂದಿಗೂ ಮರೆತಿಲ್ಲ. ಜಂಗಲ್‌ ರಾಜ್ಯದವರು ಅತ್ಯಂತ ಕೆಟ್ಟ ಉದ್ದೇಶವನ್ನು ಹೊಂದಿದ್ದಾರೆ, ಅವರಿಂದ ಎಚ್ಚರವಾಗಿರಿ’ ಎಂದು ಕರೆ ನೀಡಿದರು.

ಕಾಂಗ್ರೆಸ್‌ ಪಾಕ್‌ ಪರ ನಿಲುವನ್ನು ಹೊಂದಿದೆ ಎಂದ ಪ್ರಧಾನಿ, ‘ಪಾಕಿಸ್ತಾನದಲ್ಲಿ ಭಯೋತ್ಪಾದಕ ಅಡಗುತಾಣಗಳ ಮೇಲೆ ದಾಳಿ ನಡೆದಾಗ ಕಾಂಗ್ರೆಸ್‌ ನಾಯಕರ ನಿದ್ದೆ ಹಾಳಾಗಿತ್ತು, ಆಪರೇಷನ್ ಸಿಂದೂರದ ಆಘಾತದಿಂದ ಪಾಕಿಸ್ತಾನ ಮಾತ್ರವಲ್ಲ, ಕಾಂಗ್ರೆಸ್‌ ಕೂಡ ಇಂದಿಗೂ ಚೇತರಿಸಿಕೊಂಡಿಲ್ಲ’ ಎಂದು ಚಾಟಿ ಬೀಸಿದರು.

ಟ್ರಂಪ್ ಎಂದರೆ ಮೋದಿಗೆ ಭಯ: ರಾಹುಲ್‌ 

 ಬೇಗುಸರೈ :  ಬಿಹಾರ ಮತಕಣದಲ್ಲಿ ನಾಯಕರ ವಾಕ್ಸಮರ ಜೋರಾಗಿದ್ದು, ‘ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಹೆದರುವುದು ಮಾತ್ರವಲ್ಲದೇ, ದೊಡ್ಡ ಉದ್ಯಮಿಗಳಿಗೆ ರಿಮೋಟ್‌ ಕಂಟ್ರೋಲ್‌ ರೀತಿ ಆಗಿದ್ದಾರೆ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ವ್ಯಂಗ್ಯವಾಡಿದ್ದಾರೆ.ಇಲ್ಲಿನ ನಡೆದ ಚುನಾವಣಾ ರ್‍ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ 56 ಇಂಚಿನ ಎದೆಯವರು ಎಂದು ಹೇಳಲಾಗುತ್ತದೆ. ಆದರೆ ಅವರು ಆಪರೇಷನ್‌ ಸಿಂದೂರ ಸಮಯದಲ್ಲಿ ಟ್ರಂಪ್‌ ಕರೆ ಮಾಡಿದಾಗ ಹೆದರಿದರು. ಪಾಕಿಸ್ತಾನದೊಂದಿಗಿನ ಸಂಘರ್ಷವನ್ನು ಎರಡೇ ದಿನದಲ್ಲಿ ಕೊನೆಗೊಳಿಸಿದರು. ಅವರು ಟ್ರಂಪ್‌ಗೆ ಹೆದರುವುದು ಮಾತ್ರವಲ್ಲದೇ ಅದಾನಿ, ಅಂಬಾನಿಯಿಂದ ರಿಮೋಟ್‌ ಕಂಟ್ರೋಲ್ ಕೂಡ ಆಗಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಅವರು, ‘56 ಇಂಚಿನ ದೊಡ್ಡ ಎದೆಯನ್ನು ಹೊಂದಿದ ಮಾತ್ರಕ್ಕೆ ಬಲಿಷ್ಠರಾಗುವುದಿಲ್ಲ. ತೆಳ್ಳಗಿದ್ದ ಮಹಾತ್ಮಗಾಂಧಿ ಬ್ರಿಟಿಷರನ್ನೇ ಹೆದರಿಸಿದ್ದರು’ ಮೋದಿಗೆ ಕುಟುಕಿದರು.

ತೇಜಸ್ವಿ ಗೆದ್ರೆ ಅಪಹರಣ, ಕೊಲೆ, ಸುಲಿಗೆ ಖಾತೆ ಸೃಷ್ಟಿ: ಶಾ

ಪಿಟಿಐ ಮುಜಫ್ಫರ್‌ಪುರ‘ಬಿಹಾರದಲ್ಲಿ ಲಾಲು ಪ್ರಸಾದ್‌ ಯಾದವ್‌ ಮಗ ತೇಜಸ್ವಿ ಮುಖ್ಯಮಂತ್ರಿಯಾದರೆ ರಾಜ್ಯದ ಸಚಿವ ಸಂಪುಟದಲ್ಲಿ ಕೊಲೆ, ಅಪಹರಣ, ಸುಲಿಗೆ ಎನ್ನುವ ಹೊಸ 3 ಖಾತೆಗಳು ಸೇರ್ಪಡೆಯಾಗಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಾಗ್ದಾಳಿ ನಡೆಸಿದ್ದಾರೆ.

ಭಾನುವಾರ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಒಂದು ವೇಳೆ ಲಾಲು ಪುತ್ರ ಬಿಹಾರದ ಮುಖ್ಯಮಂತ್ರಿಯಾದರೆ ಕೊಲೆ, ಅಪಹರಣ, ಸುಲಿಗೆ ಎನ್ನುವ ಮೂರು ಹೊಸ ಖಾತೆಗಳು ಮಂತ್ರಿಗಳು ಮಂಡಲಕ್ಕೆ ಸೇರ್ಪಡೆಯಾಗಲಿದ್ದಾರೆ. ಆರ್‌ಜೆಡಿ ಹೊಸ ಮುಖಗಳೊಂದಿಗೆ ರಾಜ್ಯದಲ್ಲಿ ಜಂಗಲ್‌ ರಾಜ್ಯವನ್ನು ತರಲು ಪ್ರಯತ್ನಿಸುತ್ತಿದೆ. ಆದರೆ ನೀವು ಎನ್‌ಡಿಎಗೆ ಮತ ನೀಡಿದರೆ ಆರ್‌ಜೆಡಿಯ ಜಂಗಲ್‌ ರಾಜ್ಯದಿಂದ ಪಕ್ಷವನ್ನು ರಕ್ಷಿಸಬಹುದು’ ಎಂದು ಜನರಿಗೆ ಕರೆ ನೀಡಿದರು.

ಬಿಹಾರದಲ್ಲಿ ಇದು ಬದಲಾವಣೆಯ ಸಮಯ: ಖರ್ಗೆ 

ನವದೆಹಲಿ : ‘ಕಳೆದ 20 ವರ್ಷಗಳಲ್ಲಿ ಬಿಹಾರದಲ್ಲಿ ಬಿಜೆಪಿ- ಜೆಡಿಯು ಯುವ ಜನತೆಯ ಅವಕಾಶ, ಕನಸುಗಳನ್ನು ಕಸಿದುಕೊಂಡಿದೆ. ಆದರೆ ಇದೀಗ ರಾಜ್ಯದ ಸ್ವಾಭಿಮಾನ ಮರುಸ್ಥಾಪಿಸುವ ಸಮಯ ಬಂದಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿರಿಕಾರಿದ್ದಾರೆ.ಭಾನುವಾರ ಟ್ವೀಟ್‌ ಮಾಡಿರುವ ಖರ್ಗೆ, ‘ಬಿಹಾರದ ಜನ ಎಲ್ಲಿಗೂ ಹೋದರೂ ತಮ್ಮ ಪ್ರತಿಭೆ, ಶ್ರಮದಿಂದ ಅಲ್ಲಿನ ಅದೃಷ್ಟ ಬದಲಾಯಿಸುತ್ತಾರೆ. ಆದರೆ ಅವರಿಗೆ ತಮ್ಮದೇ ನೆಲದ ಅದೃಷ್ಟವನ್ನು ಇಂದಿಗೂ ಬದಲಿಸಲು ಸಾಧ್ಯವಾಗಿಲ್ಲ ಏಕೆ? ಅದಕ್ಕೆ ಕಾರಣ ಬಿಜೆಪಿ- ಜೆಡಿಯು ಕಳೆದ 20 ವರ್ಷಗಳಲ್ಲಿ ಇಲ್ಲಿನ ಯುವಕರ ಅವಕಾಶ, ಕನಸುಗಳನ್ನು ಕಸಿದಿದೆ. ಅವರನ್ನು ಕಾರ್ಮಿಕರಾಗಲು ಒತ್ತಾಯಿಸಿದೆ. ಆದರೆ ಈಗ ರಾಜ್ಯದ ಸ್ವಾಭಿಮಾನ ಮರುಸ್ಥಾಪಿಸಲು, ಬದಲಾವಣೆಯ ಸಮಯ ಬಂದಿದೆ’ ಎಂದಿದ್ದಾರೆ.

Read more Articles on