ಅಪೆಕ್ಸ್ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳಾದ ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್.ರಾಜಣ್ಣ ಹಾಗೂ ಪರಿಷತ್ ಸದಸ್ಯ ಎಸ್.ರವಿ ಸೇರಿ ಬ್ಯಾಂಕ್ ನಿರ್ದೇಶಕರೊಂದಿಗೆ ಸೋಮವಾರ ಸಭೆ ನಡೆಸಿದರು.

ಬೆಂಗಳೂರು : ಅಪೆಕ್ಸ್ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳಾದ ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್.ರಾಜಣ್ಣ ಹಾಗೂ ಪರಿಷತ್ ಸದಸ್ಯ ಎಸ್.ರವಿ ಸೇರಿ ಬ್ಯಾಂಕ್ ನಿರ್ದೇಶಕರೊಂದಿಗೆ ಸೋಮವಾರ ಸಭೆ ನಡೆಸಿದರು.

ಸಂಜೆ ಚಹಾಕೂಟದ ಹೆಸರಿನಲ್ಲಿ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕರೊಂದಿಗೆ ಚರ್ಚೆ ನಡೆಸಿರುವ ಸಿದ್ದರಾಮಯ್ಯ, ‘ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಪಕ್ಷ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಬದ್ಧವಾಗಿರಬೇಕು’ ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

29ರಂದು ಚುನಾವಣೆ:

ಜ.29 ರಂದು ಬೆಳಗ್ಗೆ 11ಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆದು, 12.30ಕ್ಕೆ ಚುನಾವಣೆ ನಡೆಯಲಿದೆ. ಒಟ್ಟು 21 ನಿರ್ದೇಶಕರ ಪೈಕಿ, ಮೈಸೂರು-ಚಾಮರಾಜನಗರ, ಬಾಗಲಕೋಟೆ ಮತ್ತು ಕೋಲಾರ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕುಗಳನ್ನು ಹೊರತುಪಡಿಸಿ, ಉಳಿದ 18 ‌ಡಿಸಿಸಿ ‌ಬ್ಯಾಂಕುಗಳು‌ ನಾಮನಿರ್ದೇಶಿತರನ್ನು ಈಗಾಗಲೇ ನಿಯೋಜಿಸಿವೆ.

18 ನಿರ್ದೇಶಕರಲ್ಲಿ 15 ಮಂದಿ ಕಾಂಗ್ರೆಸ್‌ ಬೆಂಬಲಿಗರಾಗಿದ್ದು, ಇಬ್ಬರು ಬಿಜೆಪಿ (ಕೊಡಗು-ಕೊಡಂದೇರ ಪಿ.ಗಣಪತಿ ಮತ್ತು ಚಿಕ್ಕಮಗಳೂರು-ಬೆಳ್ಳಿಪ್ರಕಾಶ್) ಮತ್ತು ಒಬ್ಬ ಜೆಡಿಎಸ್‌ (ಹಾಸನ-ಆರ್‌. ಸೂರಜ್‌) ಬೆಂಬಲಿತರಿದ್ದಾರೆ.

ಹೀಗಾಗಿ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ ಖಚಿತವಾಗಿದೆ. ಆದರೆ, ಅಧ್ಯಕ್ಷ ಸ್ಥಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣದಲ್ಲಿ ಗುರುತಿಸಿಕೊಂಡಿರುವ ರಾಜಣ್ಣ ಹಾಗೂ ಉಪ ಮುಖ್ಯಮಂತ್ರಿ ಶಿವಕುಮಾರ್ ಬಣದ ಎಸ್.ರವಿ ಆಕಾಂಕ್ಷಿಯಾಗಿರುವ ಹಿನ್ನೆಲೆಯಲ್ಲಿ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಅಪೆಕ್ಸ್ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ಬೆಂಬಲಿಗರಾದ ಕೆ.ಎನ್‌.ರಾಜಣ್ಣ ಆಕಾಂಕ್ಷಿಯಾಗಿದ್ದು, 2001 ರಿಂದ 2005 ಹಾಗೂ 2015 ರಿಂದ 2020ರ ಅವಧಿಗೆ ಎರಡು ಬಾರಿ ಅಧ್ಯಕ್ಷರಾಗಿದ್ದರು. ಇದೀಗ ಮೂರನೇ ಬಾರಿಗೆ ಅಧ್ಯಕ್ಷರಾಗಲು ಪಟ್ಟು ಹಿಡಿದಿದ್ದು ನಾಮಪತ್ರವನ್ನೂ ಸಲ್ಲಿಸಿದ್ದಾರೆ.

ಜತೆಗೆ ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಡಿಸಿಸಿ ಬ್ಯಾಂಕ್‌ನಿಂದ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿರುವ ಎಸ್‌.ರವಿ ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ಕಾಂಗ್ರೆಸ್‌ನ ನಿರ್ದೇಶಕರು:

ಸಚಿವರಾದ ಶಿವಾನಂದ ಪಾಟೀಲ್, ಡಿ.ಸುಧಾಕರ್, ಶಾಸಕರಾದ ನರೇಂದ್ರ ಸ್ವಾಮಿ, ಶಿವರಾಮ ಹೆಬ್ಬಾರ್, ಪರಿಷತ್‌ ಸದಸ್ಯರಾದ ಎಸ್‌.ರವಿ, ಮಾಜಿ ಶಾಸಕ ನರೇಂದ್ರ ಈ ಬಾರಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿದ್ದಾರೆ.

ಸಚಿವ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಬೆಳಗಾವಿ ಡಿಸಿಸಿ ಬ್ಯಾಂಕ್ ನಿಂದ ಅಪೆಕ್ಸ್ ಬ್ಯಾಂಕ್‌ಗೆ ನಿರ್ದೇಶಕರಾಗಿ ಆಯ್ಕೆಯಾಗಿ ಬಂದಿದ್ದಾರೆ. ಬೀದರ್‌ನಿಂದ ಸಚಿವ ಈಶ್ವರ್ ಖಂಡ್ರೆ ಸೋದರ ಅಮರ್ ಕುಮಾರ್ ಖಂಡ್ರೆ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿದ್ದಾರೆ. ಇನ್ನೂ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್‌.ಎಂ.ಮಂಜುನಾಥ್ ಗೌಡ ಕೂಡ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿದ್ದಾರೆ.