ಗ್ಯಾರಂಟಿ ಯೋಜನೆ ಜಾರಿಗೊಳಿಸುವಾಗ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಗರೆಲ್ಲರೂ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದರು. ಈಗಲೂ ಟೀಕಿಸುತ್ತಲೇ ಇದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಹುಬ್ಬಳ್ಳಿ:

ಗ್ಯಾರಂಟಿ ಯೋಜನೆಯಿಂದ ಖಜಾನೆ ಖಾಲಿಯಾಗಿಲ್ಲ. ದೇಶದಲ್ಲೇ ಕರ್ನಾಟಕ ತಲಾ ಆದಾಯದಲ್ಲಿ ಅಗ್ರಸ್ಥಾನ ತಲುಪಿದೆ. ಗ್ಯಾರಂಟಿ ಯೋಜನೆ ಲಾಭ ಇದು. ಖಜಾನೆ ಖಾಲಿಯಾಗಿದ್ದರೆ ಇಷ್ಟೊಂದು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನವನ್ನೇ ಕೊಡುತ್ತಿಲ್ಲ ಎಂದು ಮತ್ತೆ ಆರೋಪಿಸಿದರು.

ಇಲ್ಲಿನ ಮಂಟೂರ ರಸ್ತೆಯಲ್ಲಿ ವಸತಿ ಇಲಾಖೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸಿರುವ ಮನೆಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಕಿಕ್ಕಿರಿದು ತುಂಬಿದ್ದ ಜನಸ್ತೋಮವನ್ನುದ್ದೇಶಿಸಿ ಬರೋಬ್ಬರಿ 24 ನಿಮಿಷಗಳ ಕಾಲ ಮಾತನಾಡಿದ ಅವರು, ಭಾಷಣದುದ್ದಕ್ಕೂ ಬಿಜೆಪಿ ವಿರುದ್ಧ ಹರಿಹಾಯ್ದರು.ಗ್ಯಾರಂಟಿ ಯೋಜನೆ ಜಾರಿಗೊಳಿಸುವಾಗ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಗರೆಲ್ಲರೂ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದರು. ಈಗಲೂ ಟೀಕಿಸುತ್ತಲೇ ಇದ್ದಾರೆ. ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸುವ ಉದ್ದೇಶದಿಂದ ಗ್ಯಾರಂಟಿ ಯೋಜನೆಯನ್ನು ಅಧಿಕಾರಕ್ಕೆ ಬಂದ ಮೊದಲ ವರ್ಷವೇ ಜಾರಿಗೊಳಿಸಿದೆವು. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ತಲಾ ಆದಾಯದಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ತಲಾ ಆದಾಯದಲ್ಲೇ ದೇಶದಲ್ಲೇ ನಾವು ನಂಬರ್‌ ಒನ್‌ ಸ್ಥಾನದಲ್ಲಿದ್ದೇವೆ. ಇದು ಹೆಮ್ಮೆಯ ವಿಷಯವಲ್ಲವೇ? ಎಂದು ಪ್ರಶ್ನಿಸಿದರು.ವಸತಿ ಯೋಜನೆಗಾಗಿ ಸಾಕಷ್ಟು ಅನುದಾನ ಖರ್ಚು ಮಾಡುತ್ತಿದ್ದೇವೆ. 36789 ಮನೆಗಳನ್ನು ಕಳೆದ ವರ್ಷವೇ ಹಸ್ತಾಂತರಿಸಿದ್ದೇವೆ. ಇದೀಗ 42345 ಮನೆಗಳನ್ನು ಲೋಕಾರ್ಪಣೆ ಮಾಡಿದ್ದೇವೆ. ವಸತಿ ರಹಿತರಿಗೆ ಮನೆ ಕಟ್ಟಿ ಕೊಡುವುದೇ ನಮ್ಮ ಗುರಿ. ಹಿಂದೆ ನಾನೇ ಮುಖ್ಯಮಂತ್ರಿಯಾಗಿದ್ದಾಗ ಮಂಜೂರು ಮಾಡಿದ್ದ ಮನೆಗಳಿವು. ಅವುಗಳನ್ನು ನಾನೇ ಲೋಕಾರ್ಪಣೆ ಮಾಡಿದ್ದೇನೆ. ಇನ್ನುಳಿದ ಮನೆಗಳನ್ನು ಬೇಗನೆ ನಿರ್ಮಿಸಿ ಹಸ್ತಾಂತರ ಮಾಡುತ್ತೇವೆ ಎಂದರು.

ರಾಜ್ಯ ಸರ್ಕಾರ ದಿವಾಳಿಯಾಗಿದ್ದರೆ ಇದು ಸಾಧ್ಯವಿತ್ತಾ? ಅಭಿವೃದ್ಧಿ ಕೆಲಸಗಳ್ಯಾವವು ನಿಂತಿಲ್ಲ. ಗ್ಯಾರಂಟಿ ಯೋಜನೆಯಿಂದ ಹಣಕಾಸಿನ ತೊಂದರೆಯಾಗಿಲ್ಲ. ಬದಲಿಗೆ ಜನರ ಜೀವನ ಮಟ್ಟ ಸುಧಾರಿಸಿದೆ ಎಂದು ತಿರುಗೇಟು ನೀಡಿದರು.ಇನ್ನು ಜನಪರವಾದ ಹಲವು ಕಾರ್ಯಕ್ರಮಗಳನ್ನು ಮಾಡುತ್ತೇವೆ. ಗ್ಯಾರಂಟಿ ಯೋಜನೆಗಳಿಗೆ 1.16 ಲಕ್ಷ ಕೋಟಿ ಖರ್ಚು ಮಾಡುತ್ತಿದ್ದೇವೆ ಎಂದು ವಿವರಿಸಿದರು.

ರಾಜ್ಯಕ್ಕೆ ಅನುದಾನ ಕೊಡ್ತಿಲ್ಲ:

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಯಾವುದೇ ಅನುದಾನವನ್ನು ಕೊಡುತ್ತಿಲ್ಲ. ನಿರಂತರವಾಗಿ ಅನ್ಯಾಯ ಮಾಡುತ್ತಲೇ ಬಂದಿದೆ ಎಂದು ಟೀಕಿಸಿದ ಅವರು, ನಮ್ಮದು ನುಡಿದಂತೆ ನಡೆಯುವ ಸರ್ಕಾರ. ಬಡವರ, ಶೋಷಿತರ, ದಲಿತರ ಪರವಾದ ಸರ್ಕಾರ. ಆದರೆ ಬಿಜೆಪಿ ಬರೀ ಜಾತಿ ಧರ್ಮದ ಹೆಸರಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದರು

ಗಾಂಧೀಜಿ ಹೆಸರಲ್ಲಿದ್ದ ಮನರೇಗಾ ಯೋಜನೆಯನ್ನು ಬದಲಿಸುವ ಮೂಲಕ ಮತ್ತೊಮ್ಮೆ ಗಾಂಧೀಜಿ ಹತ್ಯೆ ಮಾಡಿದ್ದಾರೆ. ಇದೇ ಅವರ ಸಾಧನೆ ಎಂದು ಕಿಡಿಕಾರಿದ ಅವರು, ಬಡವರ ಕೈಗೆ ಕೆಲಸ ಕೊಡಬೇಕೆಂಬ ಉದ್ದೇಶದಿಂದ ಜಾರಿಗೊಳಿಸಿದ್ದ ಮನರೇಗಾ ಯೋಜನೆ ಬದಲಿಸಿರುವುದು ಖಂಡನೀಯ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು.ನಾವು ವಿಧವಾ, ವೃದ್ಧಾಪ್ಯ ಸೇರಿದಂತೆ ವಿವಿಧ ಪಿಂಚಣಿಗಾಗಿಯೇ 10800 ಕೋಟಿ ರೂ. ಖರ್ಚು ಮಾಡುತ್ತಿದ್ದೇವೆ. ಆದರೆ ಕೇಂದ್ರ ಸರ್ಕಾರ ಕೊಡುವುದು ಬರೀ 500 ಕೋಟಿ. ರೈತರ ಪಂಪ್ ಸೆಟ್‌ಗಳಿಗೆ ಸುಮಾರು 20,000 ಕೋಟಿ ರೂಪಾಯಿ ಕೊಡುತ್ತಿದ್ದೇವೆ ಎಂದು ರಾಜ್ಯ ಸರ್ಕಾರದ ಸಾಧನೆಗಳನ್ನು ವಿವರಿಸಿದರು. ಇದನ್ನೆಲ್ಲ ಯೋಚನೆ ಮಾಡಬೇಕು. ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ನುಡಿದರು.ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಜಮೀರ್‌ ಅಹ್ಮದಖಾನ್‌, ಎಚ್‌.ಕೆ.ಪಾಟೀಲ, ಸತೀಶ ಜಾರಕಿಹೊಳಿ, ಕೆ.ಎಚ್‌.ಮುನಿಯಪ್ಪ, ಎಂ.ಸಿ.ಸುಧಾಕರ, ಎಚ್‌.ಸಿ.ಮಹಾದೇವಪ್ಪ, ಶಾಸಕರಾದ ಪ್ರಸಾದ ಅಬ್ಬಯ್ಯ, ಬಿ.ಕೆ.ಹರಿಪ್ರಸಾದ ಸೇರಿದಂತೆ ಹಲವರಿದ್ದರು.