ಸಾರಾಂಶ
ಬೆಂಗಳೂರು : ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣ ಸಂಬಂಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಇದೀಗ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿಚಾರಣೆಯ ಭಾಗವಾಗಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೂ ನೋಟಿಸ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಮುಡಾ ನಿವೇಶನ ಹಂಚಿಕೆ ವಿಷಯ ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಅಧಿಕಾರಿಗಳ ವಿಚಾರಣೆಗಾಗಿ ನೋಟಿಸ್ ಜಾರಿಗೊಳಿಸಲಾಗಿದೆ. ಬೆಂಗಳೂರಿನ ಶಾಂತಿನಗರದಲ್ಲಿನ ಇ.ಡಿ. ಕಚೇರಿಗೆ ಮುಡಾ ಹಗರಣ ಸಂಬಂಧದ ದಾಖಲೆಗಳ ಸಮೇತ ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಇಲಾಖೆ ಕಾರ್ಯದರ್ಶಿಗೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
ಬೈರತಿಗೆ ವಿಚಾರಣೆ ಬಿಸಿ?:
ಬೈರತಿ ಸುರೇಶ್ ಅವರು ಮುಡಾ ಕಚೇರಿಯಿಂದ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆಂಬ ಆರೋಪಗಳು ಕೇಳಿಬಂದಿವೆ. ಇ.ಡಿ ದಾಳಿ ವೇಳೆ ಕೆಲ ದಾಖಲೆಗಳು ಪತ್ತೆಯಾಗದಿರುವ ಕಾರಣ ಈ ಬಗ್ಗೆ ಅವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎಂದು ಎಂದು ಹೇಳಲಾಗಿದೆ.
ಸಿಎಂ ಆಪ್ತಗೂ ನೋಟಿಸ್:
ಈ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಎಂದು ಹೇಳಲಾದ ರವಿಕುಮಾರ್ ಅವರಿಗೆ ಮತ್ತೊಮ್ಮೆ ಇ.ಡಿ ನೋಟಿಸ್ ಜಾರಿಗೊಳಿಸಿದೆ ಎನ್ನಲಾಗಿದೆ. ಈ ಹಿಂದೆಯೂ ರವಿಕುಮಾರ್ ರನ್ನು ಸುದೀರ್ಘವಾಗಿ ವಿಚಾರಣೆ ನಡೆಸಲಾಗಿತ್ತು. ಇದೀಗ ಮತ್ತೊಮ್ಮೆ ವಿಚಾರಣೆ ನಡೆಸಬೇಕಾಗಿರುವ ಕಾರಣ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ.
ಈಗಾಗಲೇ ಪ್ರಕರಣದ ಮೂರನೇ ಆರೋಪಿ ಮಲ್ಲಿಕಾರ್ಜುನ ಸ್ವಾಮಿ ಮತ್ತು ಜಮೀನು ಮಾಲೀಕ ದೇವರಾಜು ಅವರ ವಿಚಾರಣೆ ನಡೆಸಲಾಗಿದೆ. ಅಲ್ಲದೆ, ಮಾಜಿ ಮುಡಾ ಆಯುಕ್ತರು ಸೇರಿ ಹಲವರನ್ನು ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಳ್ಳಲಾಗಿದೆ.