ಬೇಲೇಕೇರಿ ಅದಿರು ಕೇಸಲ್ಲಿ ಕೈ ಶಾಸಕ ಸೈಲ್‌ ಅರೆಸ್ಟ್‌

| N/A | Published : Sep 10 2025, 02:04 AM IST / Updated: Sep 10 2025, 05:25 AM IST

ಸಾರಾಂಶ

ಬೇಲೇಕೇರಿ ಬಂದರಿನಿಂದ ಕಬ್ಬಿಣದ ಅದಿರು ಅಕ್ರಮವಾಗಿ ಸಾಗಿಸಿದ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ಕಾರವಾರದ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಅವರನ್ನು ಮಂಗಳವಾರ ಬಂಧಿಸಿದ್ದಾರೆ.

  ಬೆಂಗಳೂರು :  ಬೇಲೇಕೇರಿ ಬಂದರಿನಿಂದ ಕಬ್ಬಿಣದ ಅದಿರು ಅಕ್ರಮವಾಗಿ ಸಾಗಿಸಿದ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ಕಾರವಾರದ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಅವರನ್ನು ಮಂಗಳವಾರ ಬಂಧಿಸಿದ್ದಾರೆ.

ಕಳೆದ ಆ.13 ಮತ್ತು 14ರಂದು ಶಾಸಕ ಸತೀಶ್ ಸೈಲ್ ಮನೆ ಹಾಗೂ ಕಂಪನಿಗಳ ಮೇಲೆ ದಾಳಿ ಮಾಡಿ ಶೋಧಿಸಿದ್ದ ಇ.ಡಿ. ಅಧಿಕಾರಿಗಳು ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿಗೊಳಿಸಿದ್ದರು. ಅದರಂತೆ ಮಂಗಳವಾರ ವಿಚಾರಣೆಗೆ ಹಾಜರಾಗಿದ್ದ ಸತೀಶ್‌ ಸೈಲ್‌ ಅವರನ್ನು ಕೆಲ ಕಾಲ ವಿಚಾರಣೆ ನಡೆಸಿ ಬಳಿಕ ಬಂಧಿಸಲಾಗಿದೆ.

ರಾತ್ರಿ ಸತೀಶ್‌ ಸೈಲ್‌ ಅವರನ್ನು ಬೌರಿಂಗ್‌ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ಮಾಡಿಸಿದ ಇ.ಡಿ.ಅಧಿಕಾರಿಗಳು ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿದ್ದಾರೆ. ಹೆಚ್ಚಿನ ವಿಚಾರಣೆ ಸಂಬಂಧ ವಶಕ್ಕೆ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಲ್ಲಿಕಾರ್ಜುನ್ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ ಪ್ರಕರಣದಲ್ಲಿ ಸತೀಶ್ ಸೈಲ್‌ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಳೆದ ಅಕ್ಟೋಬರ್‌ನಲ್ಲಿ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿತ್ತು. ಈ ಪ್ರಕರಣ ಸಂಬಂಧ ಇಸಿಐಆರ್‌ ದಾಖಲಿಸಿ ಇ.ಡಿ. ತನಿಖೆ ಆರಂಭಿಸಿತ್ತು.

ಪ್ರಕರಣದ ಹಿನ್ನೆಲೆ:

ಬೇಲೇಕೇರಿ ಬಂದರಿನಿಂದ ಕಬ್ಬಿಣದ ಅದಿರು ಅಕ್ರಮ ಸಾಗಣೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಇ.ಡಿ.ಅಧಿಕಾರಿಗಳು ಕಳೆದ ಆ.13 ಮತ್ತು 14ರಂದು ಶಾಸಕ ಸತೀಶ್‌ ಸೈಲ್‌ ಅವರ ಕಾರವಾರದ ಮನೆ ಹಾಗೂ ಅವರಿಗೆ ಸೇರಿದ ಕಾರವಾರ, ಗೋವಾ, ಮುಂಬೈ ಮತ್ತು ದೆಹಲಿಯ ವಿವಿಧ ಮನೆಗಳು, ಕಂಪನಿಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಶೋಧದ ವೇಳೆ ಮನೆ ಹಾಗೂ ಕಚೇರಿಗಳಲ್ಲಿ 1.68 ಕೋಟಿ ರು. ನಗದು, ಮನೆ ಹಾಗೂ ಬ್ಯಾಂಕ್‌ ಲಾಕರ್‌ನಲ್ಲಿದ್ದ 6.75 ಕೆ.ಜಿ.ಚಿನ್ನ ಸೇರಿ ಕೆಲ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದರು. ಸತೀಶ್‌ ಸೈಲ್‌ ಅವರ ಬ್ಯಾಂಕ್ ಖಾತೆಗಳು ಹಾಗೂ ಅವರ ಕಂಪನಿಗಳ ಖಾತೆಗಳಲ್ಲಿದ್ದ 14.13 ಕೋಟಿ ರು. ಫ್ರೀಜ್‌ ಮಾಡಿದ್ದರು.

ಸತೀಶ್‌ ಸೈಲ್‌ ಅವರ ಆಶಾಪುರ ಮಿನೆಕೆಮ್ ಲಿಮಿಟೆಡ್, ಶ್ರೀ ಲಾಲ್ ಮಹಲ್ ಲಿಮಿಟೆಡ್, ಸ್ವಸ್ತಿಕ್ ಸ್ಟೀಲ್ಸ್ (ಹೊಸೆಪೇಟೆ) ಪ್ರೈವೇಟ್ ಲಿಮಿಟೆಡ್, ಐಎಲ್‌ಸಿ ಇಂಡಸ್ಟ್ರೀಸ್ ಲಿಮಿಟೆಡ್, ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್ ಲಿಮಿಟೆಡ್ ಕಂಪನಿಗಳ ಮೇಲೂ ಇ.ಡಿ.ಅಧಿಕಾರಿಗಳು ಈ ದಾಳಿ ನಡೆಸಿದ್ದರು.

ಸತೀಶ್‌ ಸೈಲ್‌ ಅವರು ಬೇಲೆಕೇರಿ ಬಂದರು ಅಧಿಕಾರಿಗಳೊಂದಿಗೆ ಶಾಮೀಲಾಗಿ 2010ರ ಏ.19ರಿಂದ ಜೂನ್‌ 10ರ ಅವಧಿಯಲ್ಲಿ ಸುಮಾರು 86.78 ಕೋಟಿ ರು. ಮೌಲ್ಯದ 1.25 ಲಕ್ಷ ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿರುವುದು ಇ.ಡಿ.ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಇ.ಡಿ. ತಿಳಿಸಿದೆ.

2010ರಲ್ಲಿ ಬೇಲೇಕೇರಿ ಅದಿರಿನಿಂದ 87 ಕೋಟಿ ರು. ಮೌಲ್ಯದ 1.25 ಲಕ್ಷ ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರು ಅಕ್ರಮವಾಗಿ ರಫ್ತು ಮಾಡಿದ ಆರೋಪಈ ಸಂಬಂಧ ಇತ್ತೀಚೆಗೆ ಸೈಲ್‌ ಮನೆ, ಕಚೇರಿ ಮೇಲೆ ದಾಳಿ ವೇಳೆ ₹1.68 ಕೋಟಿ ನಗದು, 6.75 ಕೆ.ಜಿ.ಚಿನ್ನ, ಬ್ಯಾಂಕಲ್ಲಿ ₹14 ಕೋಟಿ ನಗದು ಪತ್ತೆಈ ಕುರಿತು ಮಂಗಳವಾರ ವಿಚಾರಣೆಗೆ ಆಗಮಿಸಿದ್ದ ಸತೀಶ್ ಸೈಲ್‌. ವಿಚಾರಣೆ ಬಳಿಕ ಅಕ್ರಮ ಹಣ ವರ್ಗಾವಣೆ ಕೇಸಲ್ಲಿ ಕಾಂಗ್ರೆಸ್‌ ಶಾಸಕ ಅರೆಸ್ಟ್‌

Read more Articles on