ಇಂದು ಲಖನೌ ವಿರುದ್ಧ ಗೆದ್ರೆ ಆರ್‌ಸಿಬಿ ಪ್ಲೇ-ಆಫ್‌ಗೆ

| N/A | Published : May 09 2025, 04:53 AM IST

RCB 5 Game changers

ಸಾರಾಂಶ

11 ಪಂದ್ಯದಲ್ಲಿ 8 ಗೆದ್ದು ಸುಭದ್ರ ಸ್ಥಿತಿಯಲ್ಲಿರುವ ಆರ್‌ಸಿಬಿ । ಮತ್ತೊಂದು ಜಯದ ಮೂಲಕ ಪ್ಲೇ-ಆಫ್‌ಗೆ ಅಧಿಕೃತ ಪ್ರವೇಶಕ್ಕೆ ಕಾತರ - ತವರಿನಾಚೆ ಸತತ 7ನೇ ಜಯ ಗುರಿ । ಲಖನೌಗೆ ಇದು ಡು ಆರ್‌ ಡೈ ಪಂದ್ಯ । ಸೋತರೆ ಪ್ಲೇ-ಆಫ್‌ ಬಾಗಿಲು ಅಧಿಕೃತವಾಗಿ ಬಂದ್‌

ಲಖನೌ: ಈ ಬಾರಿ ಐಪಿಎಲ್‌ನಲ್ಲಿ ತವರಿನಾಚೆ ಕೊನೆ ಪಂದ್ಯ ಆಡಲಿರುವ ಸಜ್ಜಾಗಿರುವ ಆರ್‌ಸಿಬಿ, ಶುಕ್ರವಾರ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಸೆಣಸಾಡಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿಗೆ ಇರುವುದು 2 ಗುರಿ. ಒಂದು, ತವರಿನಾಚೆ ಎಲ್ಲಾ 7 ಪಂದ್ಯ ಗೆದ್ದ ಸಾಧನೆ ಮಾಡುವುದು. ಮತ್ತೊಂದು, 18ನೇ ಆವೃತ್ತಿಯಲ್ಲಿ ಪ್ಲೇ-ಆಫ್‌ಗೆ ಅಧಿಕೃತ ಪ್ರವೇಶ ಪಡೆದ ಮೊದಲ ತಂಡ ಎನಿಸಿಕೊಳ್ಳುವುದು.

ರಜತ್‌ ಪಾಟೀದಾರ್‌ ಸಾರಥ್ಯದ ಆರ್‌ಸಿಬಿ ಈ ಸಲ ಅಭೂತಪೂರ್ವ ಪ್ರದರ್ಶನ ನೀಡುತ್ತಿದೆ. ಆಡಿರುವ 11 ಪಂದ್ಯಗಳ ಪೈಕಿ 8ರಲ್ಲಿ ಗೆದ್ದಿರುವ ತಂಡ, ಸುಭದ್ರ ಸ್ಥಿತಿಯಲ್ಲಿದೆ. ಇನ್ನುಳಿದ 3 ಪಂದ್ಯಗಳ ಪೈಕಿ ಒಂದರಲ್ಲಿ ಗೆದ್ದರೂ ತಂಡದ ಪ್ಲೇ-ಆಫ್‌ ಸ್ಥಾನ ಅಧಿಕೃತಗೊಳ್ಳಲಿದೆ. ಜೊತೆಗೆ ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನ ಭದ್ರಪಡಿಸಿಕೊಳ್ಳಲಿದೆ.

ತಂಡ ಪ್ಲೇ-ಆಫ್‌ ಸನಿಹದಲ್ಲಿರುವಾಗಲೇ ಆಟಗಾರರ ಗಾಯದ ಸಮಸ್ಯೆ ತಲೆದೋರಿದೆ. ಫಿಲ್‌ ಸಾಲ್ಟ್‌ ಹಾಗೂ ಹೇಜಲ್‌ವುಡ್‌ ಕಳೆದ ಪಂದ್ಯದಲ್ಲಿ ಆಡಿರಲಿಲ್ಲ. ಇವರಿಬ್ಬರು ಲಖನೌ ವಿರುದ್ಧ ಆಡುವ ಬಗ್ಗೆ ಖಚಿತತೆಯಿಲ್ಲ. ಇನ್ನು, ಗಾಯಗೊಂಡು ಹೊರಬಿದ್ದಿರುವ ದೇವದತ್‌ ಪಡಿಕ್ಕಲ್‌ ಬದಲು ತಂಡಕ್ಕೆ ಸೇರ್ಪಡೆಗೊಂಡಿರುವ ಮಯಾಂಕ್‌ ಅಗರ್‌ವಾಲ್‌ಗೆ ಅವಕಾಶ ಸಿಗಲಿದೆಯೇ ಅಥವಾ ಫ್ರಾಂಚೈಸಿಯು ಮನೋಜ್‌ಗೆ ಮಣೆ ಹಾಕಲಿದೆಯೇ ಕಾದು ನೋಡಬೇಕಿದೆ.

ಕೊಹ್ಲಿ ಮೇಲೆ ಕಣ್ಣು: ಅಭೂತಪೂರ್ವ ಲಯದಲ್ಲಿರುವ ವಿರಾಟ್‌ ಕೊಹ್ಲಿ ಮತ್ತೊಂದು ಅಬ್ಬರದ ಇನ್ನಿಂಗ್ಸ್‌ ಕಟ್ಟುವ ನಿರೀಕ್ಷೆಯಲ್ಲಿದ್ದಾರೆ. ರಜತ್‌ ನಾಕೌಟ್‌ಗೂ ಮುನ್ನ ಲಯಕ್ಕೆ ಮರಳಬೇಕಿದೆ. ಕೃನಾಲ್‌ ಪಾಂಡ್ಯ ಆಲ್ರೌಂಡ್‌ ತಂಡಕ್ಕೆ ನಿರ್ಣಾಯಕ. ಸ್ಪಿನ್ನರ್‌ ಸುಯಶ್‌ ಶರ್ಮಾ, ವೇಗಿ ಯಶ್‌ ದಯಾಳ್‌, ಭುವನೇಶ್ವರ್‌ ತಂಡವನ್ನು ಪ್ಲೇ-ಆಫ್‌ಗೇರಿಸಲು ಕಾಯುತ್ತಿದ್ದಾರೆ.

ಲಖನೌಗೆ ನಿರ್ಣಾಯಕ: ಆರಂಭಿಕ 6 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದ್ದ ಲಖನೌ, ಕೊನೆ 5 ಪಂದ್ಯಗಳ ಪೈಕಿ 4ರಲ್ಲಿ ಸೋತಿದೆ. 11 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿರುವ ತಂಡಕ್ಕೆ ಈ ಪಂದ್ಯವೇ ನಿರ್ಣಾಯಕ. ಇದರಲ್ಲಿ ಗೆದ್ದರೆ ಪ್ಲೇ-ಆಫ್‌ ಆಸೆ ಜೀವಂತವಾಗಿರಲಿದ್ದು, ಸೋತರೆ ಅಧಿಕೃತವಾಗಿ ಹೊರಬೀಳಲಿದೆ.

ಆರಂಭಿಕ 5 ಪಂದ್ಯದಲ್ಲಿ 265 ರನ್‌ ಸಿಡಿಸಿದ್ದ ಮಿಚೆಲ್‌ ಮಾರ್ಷ್‌ ಕೊನೆ 5 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 113 ರನ್‌. ನಿಕೋಲಸ್‌ ಪೂರನ್‌ ಕೂಡಾ ಕಳೆದ 5 ಪಂದ್ಯಗಳಲ್ಲಿ ಒಂದೂ ಅರ್ಧಶತಕ ಸಿಡಿಸಿಲ್ಲ. ರಿಷಭ್‌ ಪಂತ್‌ ತೀರಾ ಕಳಪೆ ಪ್ರದರ್ಶನ ನೀಡುತ್ತಿದ್ದು, ನಿರ್ಣಾಯಕ ಪಂದ್ಯದಲ್ಲಾದರೂ ಮಿಂಚಬಲ್ಲರೇ ಎಂಬ ಕುತೂಹಲವಿದೆ.

ಪಂದ್ಯ: ಸಂಜೆ 7.30ಕ್ಕೆ

ಗೆದ್ದರೆ ಆರ್‌ಸಿಬಿ

ಹೊಸ ಇತಿಹಾಸ

ಆರ್‌ಸಿಬಿ ಈ ಪಂದ್ಯದಲ್ಲಿ ಗೆದ್ದರೆ ಹೊಸ ದಾಖಲೆ ಬರೆಯಲಿದೆ. ಆವೃತ್ತಿಯೊಂದರಲ್ಲಿ ತವರಿನಾಚೆ ಎಲ್ಲಾ 7 ಪಂದ್ಯಗಳಲ್ಲೂ ಗೆದ್ದ ಮೊದಲ ತಂಡ ಎಂಬ ವಿಶೇಷ ಸಾಧನೆ ಮಾಡಲಿದೆ. ಆರ್‌ಸಿಬಿ ಈ ಸಲ ಕೋಲ್ಕತಾ, ಚೆನ್ನೈ, ಮುಂಬೈ, ಜೈಪುರ, ಚಂಡೀಗಢ ಹಾಗೂ ನವದೆಹಲಿ ಕ್ರೀಡಾಂಗಣಗಳಲ್ಲಿ ಗೆದ್ದಿದೆ.