ಕನ್ನಡಪ್ರಭ ವಾರ್ತೆ ಮಂಡ್ಯ

ಬಿಡದಿ ಬಳಿ ಟೌನ್‌ಶಿಪ್ ನಿರ್ಮಾಣ ವಿಚಾರವಾಗಿ ರಾಜ್ಯ ಸರ್ಕಾರ ರಿಯಲ್ ಎಸ್ಟೇಟ್ ಏಜೆಂಟ್ ರೀತಿ ವರ್ತಿಸುತ್ತಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ಟೌನ್ ಶಿಪ್ ಮಾಡುವುದಕ್ಕೆ ನನ್ನ ವಿರೋಧವಿಲ್ಲ. ಅದಕ್ಕೆ ಬರಡು ಭೂಮಿಯನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಟೌನ್‌ಶಿಪ್ ಮಾಡಲಿ. ಸರ್ಕಾರ ಟೌನ್‌ಶಿಪ್‌ಗೆ ಆಯ್ಕೆ ಮಾಡಿರುವುದು ಫಲವತ್ತಾದ ಕೃಷಿ ಭೂಮಿ ಇರುವ ಜಾಗ. ಅಲ್ಲಿ ಸಾವಿರಾರು ರೈತರು ಬೆಳೆ ಬೆಳೆದುಕೊಂಡು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಅವರನ್ನೇಕೆ ಬೀದಿಗೆ ತರುತ್ತೀರಿ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಶ್ನಿಸಿದರು.

ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಖಾಸಗಿಯವರಿಗೆ ನೀಡುವುದು. ಇದಕ್ಕೆ ರಾಜ್ಯ ಸರ್ಕಾರ ಹುಡ್ಕೋದಿಂದ ೧೨ ಸಾವಿರ ಕೋಟಿ ರು. ಸಾಲ ಮಾಡಿದೆ. ಆ ಭೂಮಿಯನ್ನು ಡೆವೆಲಪ್ ಮಾಡಲು ಖಾಸಗಿ ಡೆವಲಪರ್‌ಗೆ ನೀಡುವುದು. ಸರ್ಕಾರವೇ ರಿಯಲ್ ಎಸ್ಟೇಟ್ ಏಜೆಂಟ್ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಗುಜರಾತ್‌ನಲ್ಲಿ ಟೌನ್‌ಶಿಪ್ ಮಾಡಿಲ್ಲವೇ ಎಂಬ ಸಿಎಂ ಪ್ರಶ್ನೆಗೆ, ಮೋದಿ ಅವರು ಗುಜರಾತ್‌ನಲ್ಲಿ ಟೌನ್‌ಶಿಪ್ ಮಾಡಿರಬಹುದು. ಅದನ್ನು ಮಾಡುವುದಕ್ಕೆ ಮೋದಿ ಆಯ್ಕೆ ಮಾಡಿಕೊಂಡ ಜಾಗ ಯಾವುದು, ನೀವು ಆಯ್ಕೆ ಮಾಡಿಕೊಂಡಿರುವ ಜಾಗ ಯಾವುದು ಎನ್ನುವುದು ಪ್ರಶ್ನೆ ಎಂದರು.


ಸತ್ಯಶೋಧನಾ ವರದಿ ಏನಾಯ್ತು?

೨೦೦೬ರಲ್ಲಿ ನಾನು ಐದು ಟೌನ್‌ಶಿಪ್‌ಗಳನ್ನು ಮಾಡಲು ಹೊರಟಾಗ ಇತ್ತೀಚಿನ ದಿನಗಳವರೆಗೂ ಕಾನೂನು ಮಂತ್ರಿ ಆಗಿದ್ದ ಎಚ್.ಕೆ.ಪಾಟೀಲ್ ಅಧ್ಯಕ್ಷತೆಯಲ್ಲಿ ಸತ್ಯಶೋಧನಾ ಸಮಿತಿ ರಚನೆ ಮಾಡಿ ಐದೂ ಸ್ಥಳಗಳಲ್ಲಿ ಸತ್ಯಶೋಧನೆ ಮಾಡಿದ್ದರಲ್ಲಾ..?, ಆ ಸತ್ಯಶೋಧನಾ ವರದಿ ಎಲ್ಲಿ ಹೋಯಿತು?. ಅದನ್ನು ಜನರ ಮುಂದೆ ಇಡಿ. ಯಾವ ಉದ್ದೇಶಕ್ಕೆ ಅಂದು ಈ ಯೋಜನೆಯನ್ನು ಕಾಂಗ್ರೆಸ್ ಪಕ್ಷದ ನಾಯಕರು ವಿರೋಧ ಮಾಡಿದರು ಎಂಬುದನ್ನು ಸಾರ್ವಜನಿಕವಾಗಿ ಜನರ ಮುಂದೆ ಹೇಳಲಿ ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

ಮೂರು ಬಾರಿ ರೈತರ ಜೊತೆ ಮಾತನಾಡಿದ್ದೆ:

ಅಂದು ನಾನು ಆ ವಿಷಯವಾಗಿ ಮೂರು ಬಾರಿ ಕೃಷ್ಣ ಕಚೇರಿಗೆ ಕರೆಸಿ ರೈತರೊಂದಿಗೆ ಮಾತನಾಡಿದ್ದೇನೆ. ಸಾಧಕ-ಬಾಧಕಗಳ ಕುರಿತು ಚರ್ಚಿಸಿದ್ದೇನೆ. ಈಗ ಕಳೆದ ೨೦ ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕೃಷಿ ಭೂಮಿ ವಿಸ್ತರಣೆಯಾಗಿದೆ, ನೀರಾವರಿ ಸೌಲಭ್ಯ ಬಂದಿದೆ. ಈ ಹಂತದಲ್ಲಿ ರೈತರ ವಿರೋಧದ ನಡುವೆಯೂ ತರಾತುರಿಯಲ್ಲಿ ಟೌನ್‌ಶಿಪ್ ಮಾಡಲು ಹೊರಟಿದ್ದೀರಿ. ಇದರಿಂದ ನೀವು ಮಾಡುವ ಸಾಧನೆಯಾದರೂ ಏನು ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಿಯಲ್ ಎಸ್ಟೇಟ್ ದೊರೆ. ೧೯೯೯ರಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡೆವಿಟ್‌ನಲ್ಲಿ ಕೇವಲ ೩ ಎಕರೆ ಭೂಮಿ ತೋರಿಸಿದ್ದಾರೆ. ೨೦೧೮ರಲ್ಲಿ ೧೪೦೦ ಕೋಟಿ ರು. ತೋರಿಸಿದ್ದಾರೆ. ಮೂರು ಎಕರೆ ಜಮೀನು ಇದ್ದವರು ೨೦ ವರ್ಷದಲ್ಲಿ ೧೪೦೦ ಕೋಟಿ ರು. ಶ್ರೀಮಂತರಾಗಿದ್ದೇಗೆ ಎಂಬುದನ್ನು ರೈತರಿಗೆ ತಿಳಿಸಿಕೊಡಲಿ ಎಂದು ವ್ಯಂಗ್ಯವಾಡಿದರು.

ರೈತರನ್ನು ಬೀದಿಗೆ ತಳ್ಳಿ ಮಾಡುವ ಸಾಧನೆ ಏನು?:

ಟೌನ್‌ಶಿಪ್ ಮಾಡುತ್ತಿರುವುದಕ್ಕೆ ಮೋದಿ ಬೆನ್ನುತಟ್ಟಿದ್ದಾರೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಟೌನ್‌ಶಿಪ್‌ಗೆ ಯಾವುದೋ ಬರಡು ಭೂಮಿಯನ್ನು ಆಯ್ಕೆ ಮಾಡಿಕೊಂಡಿರಬಹುದೆಂದು ನಂಬಿ ಬೆನ್ನುತಟ್ಟಿರಬಹುದು. ಲಕ್ಷಾಂತರ ಸಂಖ್ಯೆಯಲ್ಲಿರುವ ತೆಂಗು, ಅಡಿಕೆ, ಬಾಳೆ, ರೇಷ್ಮೆ ಬೆಳೆಯುವ ಜಾಗದಲ್ಲಿ ಟೌನ್‌ಶಿಪ್ ಮಾಡಲು ಹೊರಟಿದ್ದಾರೆ. ಅದು ನೀರಾವರಿ ಸೌಲಭ್ಯ ಹೊಂದಿರುವ ಜಾಗ. ಅಲ್ಲಿ ಟೌನ್‌ಶಿಪ್ ಮಾಡುವ ಹಠ ಏಕೆ, ಅದರಿಂದ ಯಾರಿಗೆ ಪ್ರಯೋಜನ ಎಂದು ಕಟುವಾಗಿ ನುಡಿದರು.

ಅನಾಹುತದ ಬಗ್ಗೆ ಯೋಚಿಸಲಿಲ್ಲ:

ಗೃಹಲಕ್ಷ್ಮೀ ಮತ್ತು ಗೃಹಜ್ಯೋತಿ ಯೋಜನೆಗಳಿಗೆ ಮತ್ತೆ ಅರ್ಜಿ ಕರೆದಿರುವ ಬಗ್ಗೆ ಕೇಳಿದಾಗ, ಎರಡೂ ಯೋಜನೆಗಳಲ್ಲಿರುವ ಲೋಪಗಳನ್ನು ಸರಿಪಡಿಸಲು ಮುಂದಾಗಿದ್ದಾರೆ. ಯೋಜನೆಗಳನ್ನು ಜಾರಿಗೊಳಿಸುವ ಸಮಯದಲ್ಲೇ ಇದನ್ನು ಆಲೋಚಿಸಬೇಕಿತ್ತು. ಆಗ ಮುಂದಾಗುವ ಅನಾಹುತದ ಯೋಚನೆ ಮಾಡಲಿಲ್ಲ. ಈಗ ಅನುಭವವಾಗಿದೆ. ಹೊಡೆತದ ಮೇಲೆ ಹೊಡೆತ ಬಿದ್ದ ನಂತರ ಎಚ್ಚೆತ್ತುಕೊಂಡು ಪರಿಷ್ಕರಣೆಗೆ ಇಳಿದಿದ್ದಾರೆ ಎಂದು ಕುಟುಕಿದರು.

ಎರಡು ತಿಂಗಳ ಗೃಹಲಕ್ಷ್ಮೀ ಹಣವನ್ನು ನೀಡದಿರುವ ಬಗ್ಗೆ ಸರ್ಕಾರ ಜಾಣಮೌನ ತಳೆದಿದೆ. ಈ ಬಗ್ಗೆ ಮಾತನಾಡುತ್ತಲೇ ಇಲ್ಲ ೫೦೦೦ ಕೋಟಿ ರು. ಹಣ ಏನಾಯಿತು, ಎಲ್ಲಿಗೆ ಹೋಯಿತು ಎಂಬುದಕ್ಕೆ ಯಾರೂ ಉತ್ತರ ನೀಡದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.