‘ನನಗೆ ಅಧಿಕಾರ ಇದ್ದಿದ್ದರೆ  ಆರೆಸ್ಸೆಸ್ಸನ್ನೇ ನಿಷೇಧಿಸುತ್ತಿದ್ದೆ. ಆದರೆ ಆ ಅಧಿಕಾರ ಇಲ್ಲ. ಕನಿಷ್ಠ ಕರ್ನಾಟಕದಲ್ಲಿ ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್‌ ಚಟುವಟಿಕೆ  ನಿಷೇಧಿಸಬೇಕು’ ಎಂದು  ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ಕೂಡ ಸಂಘದ ನಿಷೇಧಕ್ಕೆ ದನಿಗೂಡಿಸಿದ್ದಾರೆ.

 ನವದೆಹಲಿ

‘ನನಗೆ ಅಧಿಕಾರ ಇದ್ದಿದ್ದರೆ ಇಡೀ ಆರೆಸ್ಸೆಸ್ಸನ್ನೇ ನಿಷೇಧಿಸುತ್ತಿದ್ದೆ. ಆದರೆ ಆ ಅಧಿಕಾರ ಇಲ್ಲ. ಕನಿಷ್ಠ ಪಕ್ಷ ಕರ್ನಾಟಕದಲ್ಲಿ ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್‌ ಚಟುವಟಿಕೆಗಳನ್ನು ನಿಷೇಧಿಸಬೇಕು’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಆಗ್ರಹಿಸಿ ಸುದ್ದಿಯಾದ ಬೆನ್ನಲ್ಲೇ ಅವರ ತಂದೆ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಸಂಘದ ನಿಷೇಧಕ್ಕೆ ದನಿಗೂಡಿಸಿದ್ದಾರೆ. ‘ಆರ್‌ಎಸ್‌ಎಸ್‌ ನಿಷೇಧಿಸಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂಬ ಸಂಚಲನಾತ್ಮಕ ಹೇಳಿಕೆ ನೀಡಿದ್ದಾರೆ.

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ದೇಶದಲ್ಲಿನ ಬಹುತೇಕ ಕಾನೂನು ಸುವ್ಯವಸ್ಥೆ ಸಮಸ್ಯೆಗಳ ಸೃಷ್ಟಿಗೆ ಬಿಜೆಪಿ ಮತ್ತು ಆರೆಸ್ಸೆಸ್ಸೇ ಮೂಲ ಕಾರಣ. ಹೀಗಾಗಿ ಆರೆಸ್ಸೆಸ್‌ ಅನ್ನು ನಿಷೇಧಿಸಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದರು.

‘ಆರೆಸ್ಸೆಸ್‌ ಅನ್ನು ಮತ್ತೊಮ್ಮೆ ನಿಷೇಧ ಮಾಡಲು ದೇಶದಲ್ಲಿ ಸರ್ದಾರ್‌ ಪಟೇಲ್‌ರಂಥ ನಾಯಕ ಬೇಕು’ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಖ್‌ ಯಾದವ್‌ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ‘ಆರೆಸ್ಸೆಸ್‌ ನಿಷೇಧಿಸಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಇದನ್ನು ನಾನು ಬಹಿರಂಗವಾಗಿಯೇ ಹೇಳುತ್ತೇನೆ. ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಪಟೇಲ್‌ ಅವರನ್ನು ಗೌರವಿಸುವುದೇ ಆಗಿದ್ದರೆ ಆರೆಸ್ಸೆಸ್‌ ಅನ್ನು ನಿಷೇಧಿಸಬೇಕು. ಏಕೆಂದರೆ ದೇಶದ ಬಹುತೇಕ ಕಾನೂನು ಸುವ್ಯವಸ್ಥೆ ಸಮಸ್ಯೆಗೆ ಬಿಜೆಪಿ-ಆರೆಸ್ಸೆಸ್‌ ಸಂಘಟನೆಯೇ ಕಾರಣ’ ಎಂದು ಆರೋಪಿಸಿದರು.

‘ಸರ್ದಾರ್‌ ಪಟೇಲ್‌ ಅವರು ಸರ್ಕಾರಿ ಸೇವೆಯಲ್ಲಿರುವವರು ಆರೆಸ್ಸೆಸ್‌ ಮತ್ತು ಜಮಾತ್‌ -ಎ-ಇಸ್ಲಾಮಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ನಿಷೇಧಿಸಿದ್ದರು. ಆದರೆ, ಮೋದಿ ಅವರು ಈ ನಿಷೇಧ ತೆಗೆದುಹಾಕುವ ಮೂಲಕ ಪಟೇಲ್‌ ಅವರಿಗೆ ಅಗೌರವ ತೋರಿದ್ದಾರೆ. ಈ ನಿಷೇಧ ಮುಂದುವರಿಯಬೇಕೆಂಬುದು ನಮ್ಮ ಬೇಡಿಕೆಯಾಗಿದೆ’ ಎಂದರು.

‘ದೇಶದಲ್ಲಿ ಏಕತೆ ಮತ್ತು ಶಾಂತಿ ಸ್ಥಾಪನೆಗಾಗಿ ಪಟೇಲ್‌ ಬಯಸಿದ್ದರು. ಇದಕ್ಕಾಗಿ ಅವರು ಹೋರಾಟವನ್ನೂ ನಡೆಸಿದರು. ಆದರೆ, ಈಗ ದೇಶವನ್ನು ಯಾರು ಒಡೆಯಲೆತ್ನಿಸುತ್ತಿದ್ದಾರೆಯೋ ಅವರಿಗೆ ತಕ್ಕ ಪಾಠ ಕಲಿಸಬೇಕಿದೆ. ಅವರು ಯಾರು ಎಂಬುದು ನಿಮಗೆ ಚೆನ್ನಾಗಿ ಗೊತ್ತಿದೆ’ ಎಂದು ಮಾರ್ಮಿಕವಾಗಿ ನುಡಿದರು.

ಆರೆಸ್ಸೆಸ್‌ ಸಿದ್ಧಾಂತವನ್ನು ವಿಷಕ್ಕೆ ಹೋಲಿಸಿದ ಖರ್ಗೆ ಅವರು, ‘ನೀವು ಹಾವನ್ನು ಕೊಲ್ಲುತ್ತೀರಿ. ಆ ಹಾವಿನಿಂದ ವಿಷ ಹೊರಬಂದು ಯಾರೋ ಒಬ್ಬರು ಹೋಗಿ ಆ ವಿಷವನ್ನು ನೆಕ್ಕಿದರೂ ಸಾವು ಖಚಿತ. ನಾವು ಮತ್ತೊಮ್ಮೆ ವಿಷದ ರುಚಿ ನೋಡುವ ಅಗತ್ಯವಿಲ್ಲ. ಆರೆಸ್ಸೆಸ್‌ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಸರ್ಕಾರಿ ನೌಕರರ ಮೇಲೆ ಹೇರಿದ್ದ ನಿಷೇಧ ತೆಗೆದುಹಾಕಿರುವುದು ಸರಿಯಲ್ಲ. ಮೋದಿ ಅವರು ಮಾಡಿದ ಕೆಲಸ ದೇಶದ ಪಾಲಿಗೆ ಒಳ್ಳೆಯದಲ್ಲ’ ಎಂದರು.

ಭಿನ್ನಾಭಿಪ್ರಾಯದ ಸುಳ್ಳು ಸೃಷ್ಟಿ:

ಇದೇ ವೇಳೆ ಪಟೇಲ್‌ ಅವರು ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರಿಗೆ ಬರೆದಿದ್ದ ಪತ್ರದ ಕುರಿತೂ ಪ್ರಸ್ತಾಪಿಸಿದ ಖರ್ಗೆ, ‘ಆರೆಸ್ಸೆಸ್‌ ಸೃಷ್ಟಿಸಿದ ವಾತಾವರಣವು ಮಹಾತ್ಮ ಗಾಂಧಿ ಅವರ ಹತ್ಯೆಯಂಥ ಸನ್ನಿವೇಶಕ್ಕೆ ದಾರಿ ಮಾಡಿಕೊಟ್ಟಿತು ಎಂದು ಪಟೇಲ್‌ ಅವರು ಪತ್ರದಲ್ಲಿ ಆ ಪತ್ರದಲ್ಲಿ ಹೇಳಿದ್ದರು. ಬಿಜೆಪಿಗರು ಯಾವತ್ತಿಗೂ ನೆಹರು ಮತ್ತು ಪಟೇಲ್‌ ಅವರ ನಡುವೆ ಭಿನ್ನಾಭಿಪ್ರಾಯ ಇತ್ತು ಎಂದು ಬಿಂಬಿಸಲು ಯತ್ನಿಸಿದ್ದಾರೆ. ಆದರೆ, ಅವರಿಬ್ಬರೂ ಯಾವತ್ತಿಗೂ ಉತ್ತಮ ಬಾಂಧವ್ಯ ಹೊಂದಿದ್ದರು’ ಎಂದು ಖರ್ಗೆ ತಿಳಿಸಿದರು.