ಸಿದ್ದರಾಮಯ್ಯ ನಂತರ ಯಾರು ಅಂತ ಮುಂದೆ ತಿಳಿಯುತ್ತೆ: ಸತೀಶ್‌

| N/A | Published : Oct 24 2025, 06:41 AM IST

satish jarkiholi
ಸಿದ್ದರಾಮಯ್ಯ ನಂತರ ಯಾರು ಅಂತ ಮುಂದೆ ತಿಳಿಯುತ್ತೆ: ಸತೀಶ್‌
Share this Article
  • FB
  • TW
  • Linkdin
  • Email

ಸಾರಾಂಶ

‘ಕಾಂಗ್ರೆಸ್‌ನಲ್ಲಿ ಹಿಂದೆ ದೇವರಾಜ ಅರಸು, ಬಂಗಾರಪ್ಪ ಅವರಂತಹ ನಾಯಕರು ಅಹಿಂದ ವರ್ಗಕ್ಕೆ ಶಕ್ತಿ ತುಂಬಿದ್ದರು. ನಂತರ ಸಿದ್ದರಾಮಯ್ಯ ಆ ಕೆಲಸ ಮಾಡಿದ್ದಾರೆ. ಕಾಂಗ್ರೆಸ್‌ಗೆ ಅಹಿಂದ ನಾಯಕತ್ವ ಅನಿವಾರ್ಯ. ಆದರೆ, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯನವರ ನಂತರ ಯಾರು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ’

ಬೆಳಗಾವಿ : ‘ಕಾಂಗ್ರೆಸ್‌ನಲ್ಲಿ ಹಿಂದೆ ದೇವರಾಜ ಅರಸು, ಬಂಗಾರಪ್ಪ ಅವರಂತಹ ನಾಯಕರು ಅಹಿಂದ ವರ್ಗಕ್ಕೆ ಶಕ್ತಿ ತುಂಬಿದ್ದರು. ಅವರ ನಂತರ ಸಿದ್ದರಾಮಯ್ಯ ಆ ಕೆಲಸ ಮಾಡಿದ್ದಾರೆ. ಕಾಂಗ್ರೆಸ್‌ಗೆ ಅಹಿಂದ ನಾಯಕತ್ವ ಅನಿವಾರ್ಯ. ಆದರೆ, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯನವರ ನಂತರ ಯಾರು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ’ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಪ್ರತಿಪಾದಿಸಿದ್ದಾರೆ. ಅಲ್ಲದೆ, ‘ನಾನು, 2028ರ ವಿಧಾನಸಭಾ ಚುನಾವಣೆ ವೇಳೆ ಸಿಎಂ ಸ್ಥಾನಕ್ಕೆ ಹಕ್ಕು ಮಂಡಿಸುತ್ತೇನೆ’ ಎಂದು ಪುನರುಚ್ಚರಿಸಿದ್ದಾರೆ.

ಜಿಲ್ಲೆಯ ಕಾಕತಿಯಲ್ಲಿ ಗುರುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಸಿದ್ದು ನಂತರ ಸತೀಶ್‌ ಜಾರಕಿಹೊಳಿ ಲೀಡ್‌ ಮಾಡಬೇಕು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು 2028ಕ್ಕೆ ಸಿಎಂ ಹುದ್ದೆಗೆ ಹಕ್ಕು ಮಂಡಿಸುವುದಾಗಿ ಈಗಾಗಲೇ ಬಹಿರಂಗವಾಗಿಯೇ ಹೇಳಿದ್ದೇನೆ. ಆದರೆ, ಅದನ್ನು ಪಕ್ಷದ ಹೈಕಮಾಂಡ್‌ ತೀರ್ಮಾನ ಮಾಡಬೇಕು. ಇನ್ನು, ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಅವರ ವೈಯಕ್ತಿಕ. ಎಲ್ಲವನ್ನೂ ಕಾಕತಿಯಲ್ಲಿ ನಿಂತು ನಿರ್ಧಾರ ಮಾಡಲು ಆಗಲ್ಲ. ಅಂತಿಮವಾಗಿ ಯಾರು ನಾಯಕ ಎಂಬುದನ್ನು ಪಕ್ಷ, ಶಾಸಕರು ನಿರ್ಧಾರ ಮಾಡಬೇಕು. ಎಲ್ಲರನ್ನೂ ಜೊತೆಗೆ ಒಯ್ಯುವ ಪ್ರಯತ್ನ ಮಾಡುತ್ತಿದ್ದೇವೆ. ಅಂತಿಮವಾಗಿ ಪಕ್ಷವೇ ನಿರ್ಧಾರ ಮಾಡಬೇಕು ಎಂದರು.

ರಾಜ್ಯದಲ್ಲಿ ಅಹಿಂದ ನಾಯಕತ್ವ ಇದ್ದೇ ಇದೆ. ಅದು ಇಲ್ಲದೇ ಪಕ್ಷದ ಸಂಘಟನೆ ಮಾಡಲು ಸಾಧ್ಯವೇ ಇಲ್ಲ. ರಾಜ್ಯ ಕಾಂಗ್ರೆಸ್‌ಗೆ ಅಹಿಂದ ನಾಯಕತ್ವ ಅನಿವಾರ್ಯ. ಕಾಂಗ್ರೆಸ್‌ನಲ್ಲಿ ಹಿಂದೆ ದೇವರಾಜ ಅರಸು, ಬಂಗಾರಪ್ಪ ಅವರಂತಹ ನಾಯಕರು ಅಹಿಂದ ವರ್ಗಕ್ಕೆ ಶಕ್ತಿ ತುಂಬಿದ್ದರು. ಅವರ ನಂತರ ಸಿದ್ದರಾಮಯ್ಯ ಆ ಕೆಲಸ ಮಾಡುತ್ತಿದ್ದಾರೆ. ಮುಂದೆ, ಅಹಿಂದ ನಾಯಕನಾಗಿ ನಾನು ಬರಬಹುದು ಅಥವಾ ಬೇರೆ ಯಾರಾದರೂ ಆಗಬಹುದು. ಅದನ್ನು ಪಕ್ಷ ತೀರ್ಮಾನ ಮಾಡುತ್ತೆ. ಕಳೆದ 10 ವರ್ಷಗಳಿಂದ ಅಹಿಂದ ವರ್ಗವನ್ನು ಮುನ್ನಡೆಸುತ್ತಿದ್ದೇನೆ. ಸಿದ್ದರಾಮಯ್ಯನವರ ಜೊತೆಗೆ 20 ವರ್ಷಗಳಿಂದ ಇದ್ದೇನೆ. ಜೆಡಿಎಸ್‌ನಿಂದ ಹೊರ ಬಂದ ಬಳಿಕ, ಅಹಿಂದ ಕಟ್ಟಿದ್ದೇವೆ. ನಂತರ ಕಾಂಗ್ರೆಸ್ ಗೆ ಬಂದಿದ್ದೇವೆ ಎಂದರು.

ನವೆಂಬರ್‌ ಕ್ರಾಂತಿ ಬಗ್ಗೆ ಪ್ರತಿಕ್ರಿಯಿಸಿ, ನವೆಂಬರ್‌-ಡಿಸೆಂಬರ್ ಕ್ರಾಂತಿ ಬಗ್ಗೆ ನಮಗೆ ಗೊತ್ತೇ ಇಲ್ಲ. ಸಿದ್ದರಾಮಯ್ಯನವರ ನಂತರ ಪಕ್ಷ ನಡೆಸುವ ವಿಚಾರ ಕುರಿತಷ್ಟೇ ಕಾದು ನೋಡೋಣ ಎಂದರು.

Read more Articles on