ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ/ಮದ್ದೂರು
ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ಆಡಳಿತದಲ್ಲಿದೆ. ಅದರಿಂದಲೇ ಇವರು (ಮುಸ್ಲಿಮರು) ಬಾಲ ಬಿಚ್ಚಿದ್ದಾರೆ. ಇವರನ್ನು ಸಿದ್ದರಾಮಯ್ಯನವರು ಶಾಂತಿ ಪ್ರಿಯರು ಎನ್ನುತ್ತಾರೆ. ನೋಡಿ ಸ್ವಾಮಿ ನಿಮ್ಮ ಶಾಂತಿ ಪ್ರಿಯರು ಹೇಗೆ ಕಲ್ಲು ಬೀಸಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಟೀಕಿಸಿದರು.ಪಟ್ಟಣದ ತಾಲೂಕು ಆಡಳಿತ ಸೌಧದ ಎದುರು ನಡೆಸಿದ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿ, ಡಿ.ಜೆ.ಹಳ್ಳಿ ಕೆ.ಜೆ.ಹಳ್ಳಿ ಗಲಭೆಕೋರರ ಮೇಲಿನ ಕೇಸ್ ವಾಪಸ್ ತೆಗೆದಿದ್ದಾರೆ. ತಾಲಿಬಾನ್ ಸರ್ಕಾರದ ಗೃಹಸಚಿವರು ಇಲ್ಲಿರೋದು. ಹಿಂದೆ ನಾಗಮಂಗಲ ಗಲಭೆ ಆದಾಗ ಗೃಹ ಸಚಿವರು ಸ್ಥಳಕ್ಕೆ ಬರಲಿಲ್ಲ. ಅದೊಂದು ಸಣ್ಣ ಘಟನೆ ಎಂದು ಗೃಹ ಸಚಿವರು ಹೇಳಿದ್ದನ್ನು ಉಲ್ಲೇಖಿಸಿ ಕಿಡಿಕಾರಿದರು.
ಈ ಹೋರಾಟಕ್ಕೆ ನಿಖಿಲ್ ಕುಮಾರಸ್ವಾಮಿ ಸೇರಿ ಸಾಕಷ್ಟು ಬಿಜೆಪಿ-ಜೆಡಿಎಸ್ ನಾಯಕರು ಬರುತ್ತಾರೆ. ಹಿಂದೂ ಹುಲಿ ಬಸವರಾಜ ಪಾಟೀಲ್ ಯತ್ನಾಳ್ ಅವರನ್ನೂ ಕರೆಸೋಣ. ಹಿಂದೆ ತಾಯಿ ಶ್ರೀಚಾಮುಂಡೇಶ್ವರಿಗೆ ಅಪಮಾನ ಮಾಡಲು ಮಹಿಷಿ ದಸರಾ ಮಾಡಿದರು. ಈಗ ಅದನ್ನು ತಡೆದು ನಿಲ್ಲಿಸಿದ್ದೇವೆ. ಈಗಲೂ ಹಿಂದೂಗಳ ರಕ್ಷಣೆಗೆ ನಾವು ಬಂದಿದ್ದೇವೆ ಎಂದು ಹೇಳಿದರು.ಬಿಜೆಪಿ-ಜೆಡಿಎಸ್ ನಾಯಕರನ್ನು ಬಿಟ್ಟು ಜೂಜಾಡುವ ವ್ಯಕ್ತಿ ಇಲ್ಲಿ ಗೆಲ್ಲಿಸಿದ್ದೀರಿ. ಅವರ ಕುಮ್ಮಕ್ಕಿನಿಂದ ಇಲ್ಲಿ ಕೆಲವರು ಬಾಲಬಿಚ್ಚಿದ್ದಾರೆ ಎಂದು ಪರೋಕ್ಷವಾಗಿ ಶಾಸಕ ಕದಲೂರು ಉದಯ್ ವಿರುದ್ಧ ಕಿಡಿಕಾರಿದರು.ರಾಮನಭಕ್ತರಿಂದ ಕಾಂಗ್ರೆಸ್ ನಾಶ: ಸಿ.ಎಸ್.ಪುಟ್ಟರಾಜು
ಬಿಜೆಪಿ-ಜೆಡಿಎಸ್‌ನವರಿಗೆ ಮಾಡಲು ಕೆಲಸವಿಲ್ಲ ಎನ್ನುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ನಾಚಿಕೆಯಾಗಬೇಕು. ಹಿಂದೂಗಳ ಮೇಲೆ ಹಲ್ಲೆಯಾಗುತ್ತಿದ್ದರೂ ನೋಡಿಕೊಂಡು ಸುಮ್ಮನಿರಬೇಕಾ. ಗಣೇಶ ವಿಸರ್ಜನೆ ಮೆರವಣಿಗೆ ಸಮಯದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಘಟನೆಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಇದಕ್ಕೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನರೇ ತಕ್ಕಪಾಠ ಕಲಿಸಲಿದ್ದಾರೆ. ರಾಮನ ಭಕ್ತರು ಬೀದಿ ಬೀದಿಯಲ್ಲಿ ಕಾಂಗ್ರೆಸ್ ವಿರುದ್ಧ ರೊಚ್ಚಿಗೆದ್ದು ಸರ್ವನಾಶ ಮಾಡಲಿದ್ದಾರೆ. ಕಾಂಗ್ರೆಸ್ ಓಲೈಕೆ ರಾಜಕಾರಣ ಬಿಟ್ಟು ಶಾಂತಿ-ಸೌಹಾರ್ದತೆ ನೆಲೆಸುವಂತೆ ಕ್ರಮಗಳನ್ನು ಕೈಗೊಳ್ಳಬೇಕು.- ಸಿ.ಎಸ್.ಪುಟ್ಟರಾಜು, ಮಾಜಿ ಸಚಿವಅಹಿತಕರ ಘಟನೆಗೆ ವಿಷಾದ: ಡಾ.ಕುಮಾರ
ಮದ್ದೂರು ಪಟ್ಟಣದಲ್ಲಿ ಭಾನುವಾರ ಗಣೇಶ ವಿಸರ್ಜನಾ ಮೆರವಣಿಗೆ ನಡೆಯುವ ಸಮಯದಲ್ಲಿ ನಡೆದಿರುವ ಅಹಿತಕರ ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇವೆ. ನಿನ್ನೆಯಿಂದ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ೨೧ ಜನರನ್ನು ಬಂಧಿಸಿದ್ದೇವೆ. ಇನ್ನೂ ಪರಿಶೀಲನೆ ಮಾಡುತ್ತಿರುವುದಾಗಿ ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.ಗಲಭೆ ಸೃಷ್ಟಿಸುವ ಕಿಡಿಗೇಡಿಗಳನ್ನು ನಾವು ಎಂದಿಗೂ ಸಹಿಸುವುದಿಲ್ಲ. ಅವರು ಯಾರೇ ಆಗಿರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮುಂದಿನ ದಿನಗಳಲ್ಲೂ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.ಪ್ರಮುಖ ಆರೋಪಿಗಳ ಬಂಧನ: ಎಸ್‌ಪಿ
ಮದ್ದೂರಿನಲ್ಲಿ ಗುಂಪು ಘರ್ಷಣೆ ನಡೆದ ತಕ್ಷಣದಲ್ಲೇ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದೇವೆ. ಸಿಸಿ ಟಿವಿ ದೃಶ್ಯ, ಮೊಬೈಲ್ ವಿಡಿಯೋ ಆಧರಿಸಿ ಬಂಧಿಸಲಾಗಿದೆ. ಘಟನೆಗೆ ಕಾರಣರಾಗಿರುವ ಇನ್ನೂ ಹಲವು ಆರೋಪಿಗಳನ್ನ ಬಂಧಿಸುತ್ತೇವೆ ಎಂದು ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.ಆರೋಪಿಗಳಿಗೆ ಜಾಮೀನು ಸಿಗದಂತೆ ಸೆಕ್ಷನ್‌ಗಳನ್ನು ಹಾಕಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು. ಕುಮ್ಮಕ್ಕು ನೀಡಿದವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನಮಗೆ ಸಹಕಾರ ಕೊಟ್ಟು ಶಾಂತ ರೀತಿಯಿಂದ ವರ್ತಿಸುವಂತೆ ಮನವಿ ಮಾಡಿದರು.