ಒತ್ತಡಕ್ಕೆ ಮಣಿದ್ರೆ ನಾವು ಕೈಕಟ್ಟಿ ಕೂರಲ್ಲ: ನಿಖಿಲ್

| Published : Sep 09 2025, 01:00 AM IST

ಸಾರಾಂಶ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಇಂತಹ ಘಟನೆಗಳು ಮರುಕಳಿಸುತ್ತಿವೆ. ಪೊಲೀಸರೇ ಇವತ್ತು ಅಸಹಾಯಕರಾಗಿದ್ದಾರೆ. ರಾಜ್ಯ ಸರ್ಕಾರ, ಗೃಹ ಸಚಿವರು ಅಸಮರ್ಥರಾಗಿದ್ದಾರೆ. ಅವರು ಘಟನೆಯ ನೇರ ಹೊಣೆ ಹೊತ್ತು ರಾಜೀನಾಮೆ ನೀಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ/ಮದ್ದೂರು

ಪಟ್ಟಣದಲ್ಲಿ ಭಾನುವಾರದಿಂದ ಅಶಾಂತಿಯುತ ವಾತಾವರಣ ನಿರ್ಮಾಣವಾಗಿದೆ. ಎರಡು ವರ್ಷದಲ್ಲಿ ಮೂರು ಬಾರಿ ಈ ರೀತಿಯಾಗಿದೆ. ಕೆರಗೋಡು, ನಾಗಮಂಗಲ ಬಳಿಕ ಮದ್ದೂರಿನಲ್ಲಿ ನಡೆದಿದೆ. ಗಣೇಶೋತ್ಸವ ಸಮಯದಲ್ಲಿ ಕಿಡಿಗೇಡಿಗಳು ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿ ಘರ್ಷಣೆಗೆ ಕಾರಣರಾಗಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಇಂತಹ ಘಟನೆಗಳು ಮರುಕಳಿಸುತ್ತಿವೆ. ಪೊಲೀಸರೇ ಇವತ್ತು ಅಸಹಾಯಕರಾಗಿದ್ದಾರೆ. ರಾಜ್ಯ ಸರ್ಕಾರ, ಗೃಹ ಸಚಿವರು ಅಸಮರ್ಥರಾಗಿದ್ದಾರೆ. ಅವರು ಘಟನೆಯ ನೇರ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ನಾವು ಹಿಂದೆ ಕರಾವಳಿ ಭಾಗದಲ್ಲಿ ಈ ರೀತಿ ಘಟನೆ ನೋಡುತ್ತಿದ್ದೆವು. ಈಗ ನಮ್ಮಲ್ಲಿಗೇ ಬಂದು ನಿಂತಿದೆ. ಒಂದು ವರ್ಗದ ಮತ ಗಟ್ಟಿ ಮಾಡಿಕೊಳ್ಳೋಕೆ ರಾಜ್ಯ ಸರ್ಕಾರ ಈ ರೀತಿ ಮಾಡುತ್ತಿದೆ. ಮದ್ದೂರಿನ ಘಟನೆ ರಾಜ್ಯವ್ಯಾಪಿ ಚರ್ಚೆ ಆಗುತ್ತಿದೆ. ಕೆರಗೋಡು, ನಾಗಮಂಗಲ ಬಿಟ್ಟು ಈಗ ಮದ್ದೂರಿಗೆ ಬಂದು ನಿಂತಿದೆ. ಆದರೂ ಸರ್ಕಾರ ಏನೂ ಆಗಿಲ್ಲವೇನೋ ಎಂದು ಸುಮ್ಮನೆ ಕುಳಿತಿದೆ ಎಂದು ಟೀಕಿಸಿದರು.

ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮುಂದೆ ಹಲವು ಬೇಡಿಕೆ ಇಟ್ಟ ನಿಖಿಲ್, ಕೋಮುಗಲಭೆ ಮಾಡಿದವರ ಬಂಧನ ಆಗಬೇಕು. ಪ್ರಕರಣದಲ್ಲಿ ಭಾಗಿಯಾದವರನ್ನು ಕೈ ಬಿಟ್ಟರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಒತ್ತಡಕ್ಕೆ ಮಣಿದ್ರೆ ನಾವು ಕೈಕಟ್ಟಿ ಕೂರಲ್ಲ. ಮಚ್ಚು, ಲಾಂಗ್ ಸಂಸ್ಕೃತಿಯ ಕಿಡಿಗೇಡಿಗಳನ್ನ ಬಲಿ ಹಾಕಬೇಕು ಎಂದು ಆಗ್ರಹಪಡಿಸಿದರು.

ಮದ್ದೂರು ಪೊಲೀಸರು ಜನಪ್ರತಿನಿಧಿಗಳ ಏಜೆಂಟರಂತೆ ವರ್ತಿಸುತ್ತಾರೆ. ಇವರನ್ನು ಸಾಮೂಹಿಕವಾಗಿ ಬೇರೆಡೆ ವರ್ಗಾವಣೆ ಮಾಡಬೇಕು. ಮದ್ದೂರು ಪಟ್ಟಣ ಠಾಣೆಯ ಸಿಪಿಐ ಒಬ್ಬ ಅರೆಹುಚ್ಚ. ಆತನ ಮೇಲೆ ಕ್ರಮ ಆಗಬೇಕು. ನನ್ನ ೨೫ ವರ್ಷಗಳ ರಾಜಕೀಯದಲ್ಲಿ ಯಾವೊಂದು ಕೋಮು ಗಲಭೆಗಳಿಗೆ ಆಸ್ಪದ ನೀಡಿರಲಿಲ್ಲ.

- ಡಿ.ಸಿ. ತಮ್ಮಣ್ಣ, ಮಾಜಿ ಸಚಿವ