ಸಂಖ್ಯಾಶಾಸ್ತ್ರದ ಪ್ರಕಾರ ಲಕ್ಕಿ ನಂಬರ್‌ ‘9’ರಡಿ ಹೊಸ 5 ಪಾಲಿಕೆಗಳಿಗೆ ವಾರ್ಡ್‌ ವಿಂಗಡಣೆ?

| Published : Sep 23 2025, 02:08 AM IST

ಸಾರಾಂಶ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಡಿ (ಜಿಬಿಎ) ರಚನೆಯಾಗಿರುವ 5 ನಗರ ಪಾಲಿಕೆಯ ವಾರ್ಡ್‌ ವಿಂಗಡಣೆಗೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಐದು ನಗರ ಪಾಲಿಕೆಯ ವಾರ್ಡ್‌ ಸಂಖ್ಯೆ ಎಷ್ಟಿದ್ದರೂ ವಾರ್ಡ್‌ಗಳ ಸಂಖ್ಯೆಯ ನಿಗದಿಯಲ್ಲಿ ಲಕ್ಕಿ ನಂಬರ್‌ ‘9’ರ ರಹಸ್ಯ ಅಡಗಿರುವುದು ಪಕ್ಕಾ ಆಗಿದೆ.

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಬೆಂಗಳೂರು

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಡಿ (ಜಿಬಿಎ) ರಚನೆಯಾಗಿರುವ 5 ನಗರ ಪಾಲಿಕೆಯ ವಾರ್ಡ್‌ ವಿಂಗಡಣೆಗೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಐದು ನಗರ ಪಾಲಿಕೆಯ ವಾರ್ಡ್‌ ಸಂಖ್ಯೆ ಎಷ್ಟಿದ್ದರೂ ವಾರ್ಡ್‌ಗಳ ಸಂಖ್ಯೆಯ ನಿಗದಿಯಲ್ಲಿ ಲಕ್ಕಿ ನಂಬರ್‌ ‘9’ರ ರಹಸ್ಯ ಅಡಗಿರುವುದು ಪಕ್ಕಾ ಆಗಿದೆ.

ಹೌದು, ಈ ಹಿಂದೆ ಬಿಬಿಎಂಪಿಗೆ 2006-07 ಹಾಗೂ 2020 ಹಾಗೂ 2023 ಸೇರಿದಂತೆ ಒಟ್ಟು ಮೂರು ಬಾರಿ ವಾರ್ಡ್‌ ವಿಂಗಡಣೆ ಪ್ರಕ್ರಿಯೆ ನಡೆದಿತ್ತು. ಪ್ರತಿ ಬಾರಿಯೂ ಸಂಖ್ಯಾ ಶಾಸ್ತ್ರದ ಪ್ರಕಾರ ಅದೃಷ್ಟ ಸಂಖ್ಯೆ ಎಂದು ಪರಿಗಣಿಸಲಾದ ‘9’ಕ್ಕೆ ಮಣೆ ಹಾಕಲಾಗಿತ್ತು. ಇದೀಗ ಐದು ನಗರ ಪಾಲಿಕೆಯ ವಾರ್ಡ್‌ ವಿಂಗಡಣೆಯಲ್ಲಿ ಬಹುತೇಕ ಅದೇ ಫಾರ್ಮುಲಾ ಬಳಕೆ ಸಾಧ್ಯತೆ ಹೆಚ್ಚಾಗಿದೆ.

ನಗರ ಪಾಲಿಕೆ ವಿಂಗಡಣೆಗೆ ಮೊದಲು ಅಧಿಕಾರಿಗಳು ಸಿದ್ಧಪಡಿಸಿದ ಕರಡು ವರದಿಯಲ್ಲಿಯೂ ಇದೇ ಫಾರ್ಮುಲಾ ಬಳಕೆ ಮಾಡಿಕೊಂಡು 450 ವಾರ್ಡ್‌ ರಚನೆ ಮಾಡುವುದಕ್ಕೆ ತೀರ್ಮಾನಿಸಲಾಗಿತ್ತು. ಆದರೆ, ಐದು ನಗರ ಪಾಲಿಕೆಗೆ ವಾರ್ಡ್‌ ಸಂಖ್ಯೆ 450ಕ್ಕೆ ಹೆಚ್ಚಾಗಿದೆ. ಅಧಿಕಾರಿ ಸಿಬ್ಬಂದಿ, ಕಚೇರಿ ಕಟ್ಟಡ ಸೇರಿದಂತೆ ಮೊದಲಾದ ಮೂಲಸೌಲಭ್ಯ ಒದಗಿಸುವುದು ಕಷ್ಟ ಎಂಬ ಕಾರಣಕ್ಕೆ 360ರ ಆಸುಪಾಸಿನಲ್ಲಿ ವಾರ್ಡ್‌ ರಚನೆಗೆ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಾಗಾದರೆ ವಾರ್ಡ್‌ ಸಂಖ್ಯೆ ಎಷ್ಟು?:

ನಿರೀಕ್ಷೆಯಂತೆ ವಾರ್ಡ್‌ ಸಂಖ್ಯೆ ನಿಗದಿಯಾದರೆ, 5 ಪಾಲಿಕೆಗಳಿಗೆ ಒಟ್ಟು 360, 324, 342, 351, 333, 378, 387, 396, 369, 432 ಅಥವಾ 423 ವಾರ್ಡ್‌ಗಳು ರಚನೆಯಾಗಬಹುದು. ಈ ನಡುವೆ ಪ್ರತಿ ನಗರ ಪಾಲಿಕೆಯ ವಾರ್ಡ್‌ ಸಂಖ್ಯೆಯೂ 9ರ ಫಾರ್ಮುಲ ಬಳಕೆ ಮಾಡಬಹುದಾದ ಸಾಧ್ಯತೆಯೂ ಇದೆ. ಆದರೆ, ಪ್ರತಿ ನಗರ ಪಾಲಿಕೆಯ ಒಟ್ಟು ವಾರ್ಡ್‌ ಸಂಖ್ಯೆಯನ್ನು 150ಕ್ಕಿಂತ ಕಡಿಮೆ ಇರುವಂತೆ ಯೋಜನೆ ಮಾಡಲಾಗಿದೆ.

ತಂತ್ರಜ್ಞಾನ ಆಧಾರಿತ ವಾರ್ಡ್‌ ವಿಂಗಡಣೆ:

ಐದು ನಗರ ಪಾಲಿಕೆಗಳ ವಾರ್ಡ್‌ ವಿಂಗಡಣೆಗೆ ಪ್ರತ್ಯೇಕ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿದೆ. ಆ ತಂತ್ರಜ್ಞಾನ ಬಳಕೆ ಮಾಡಿಕೊಂಡು ಈಗಾಗಲೇ ವಾರ್ಡ್‌ ವಿಂಗಡಣೆ ಪ್ರಕ್ರಿಯೆ ಪೂರ್ಣಗೊಳಿಸಲಾಗಿದ್ದು, ಒಂದೆರಡು ದಿನದಲ್ಲಿ 5 ನಗರ ಪಾಲಿಕೆಯ ವಾರ್ಡ್‌ ವಿಂಗಡಣೆಗೆ ಸರ್ಕಾರ ರಚಿಸಲಾದ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಿ ನಿಗದಿತ ದಿನಾಂಕದಂತೆ ಸೆ.23ಕ್ಕೆ ಸರ್ಕಾರಕ್ಕೆ ಆಯೋಗ ವರದಿ ಸಲ್ಲಿಸಲಿದೆ.

2011ರ ಜನ ಗಣತಿ ಪ್ರಕಾರ ಬಿಬಿಎಂಪಿ ವ್ಯಾಪ್ತಿಯ ನಗರ ಸಂಖ್ಯೆ 85 ಲಕ್ಷವಾಗಿದ್ದು, 2023ರ ಅಂದಾಜು ಜನಸಂಖ್ಯೆ ಪ್ರಮಾಣ 1.44 ಕೋಟಿ ಆಗಿದೆ. ಐದು ನಗರ ಪಾಲಿಕೆಯ ಜನಸಂಖ್ಯೆ ಹಾಗೂ ಪ್ರತಿ ಚದರ ಕಿ.ಮೀ ವ್ಯಾಪ್ತಿ ಜನಸಾಂದ್ರತೆಯಲ್ಲಿಯೂ ಸಾಕಷ್ಟು ವ್ಯತ್ಯಾಸವಿರುವುದರಿಂದ 2011ರ ಜನಗಣತಿ ಪ್ರಕಾರ ಪ್ರತಿ ವಾರ್ಡ್‌ನ ಜನಸಂಖ್ಯೆಯನ್ನು ಸರಾಸರಿ 20 ಸಾವಿರ ಎಂದು ನಿರ್ಧರಿಸಲಾಗಿದೆ. ವಾರ್ಡ್‌ನಿಂದ ವಾರ್ಡ್‌ಗೆ ಶೇ.25 ರಷ್ಟು ಹೆಚ್ಚು ಅಥವಾ ಕಡಿಮೆ ಇರುವಂತೆ ವಾರ್ಡ್‌ ವಿಂಗಡಣೆ ಮಾಡುವಂತೆ ಸರ್ಕಾರ ಸೂಚಿಸಿದೆ.

ಪಶ್ಚಿಮ ನಗರ ಪಾಲಿಕೆ ದೊಡ್ಡ ಪಾಲಿಕೆ:

ಐದು ನಗರ ಪಾಲಿಕೆಗಳ ಪೈಕಿ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವುದರಿಂದ ದೊಡ್ಡ ಮತ್ತು ಹೆಚ್ಚಿನ ವಾರ್ಡ್‌ ಸಂಖ್ಯೆ ಹೊಂದುವ ಸಾಧ್ಯತೆ ಇದೆ. 2011ರ ಜನ ಗಣತಿ ಪ್ರಕಾರ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ 26 ಲಕ್ಷ ಜನಸಂಖ್ಯೆ ಇತ್ತು. 2025ರ ಅಂದಾಜು ಜನಸಂಖ್ಯೆ 45 ಲಕ್ಷ ದಷ್ಟು ಇರುವ ಸಾಧ್ಯತೆ ಇದೆ. ಪ್ರತಿ ಚದರ ಕಿ.ಮೀ ವ್ಯಾಪ್ತಿಯಲ್ಲಿ 27,950 ಸಾವಿರ ಮಂದಿ ವಾಸ ಮಾಡುತ್ತಿದ್ದಾರೆ.

-ಬಾಕ್ಸ್‌))

ಏನಿದು 9ರ ವಿಶೇಷ?ಸಂಖ್ಯಾಶಾಸ್ತ್ರದ ಪ್ರಕಾರ ‘9’ ಅಂಕಿ ಅತ್ಯಂತ ಶಕ್ತಿಶಾಲಿ ಮತ್ತು ಅದೃಷ್ಟದ ಸಂಖ್ಯೆ ಎಂದು ಪರಿಗಣಿಸಲಾಗಿದೆ. ನವಗ್ರಹ, ನವಧಾನ್ಯ, ನವಶಕ್ತಿಗಳು, ನವವಿಧ ಭಕ್ತಿಗಳು, ನವನಿಧಿಗಳು, ಮಹಾಭಾರತದಲ್ಲಿ 18 (1+8=9) ಪರ್ವಗಳು, ಭಗವದ್ಗೀತೆಯಲ್ಲಿ 18 ಅಧ್ಯಾಯಗಳಿವೆ. ಈ ಕಾರಣಕ್ಕೆ ಬಹುತೇಕ ವಾಹನ ಮಾಲಿಕರು ತಮ್ಮ ವಾಹನಗಳ ನೋಂದಣಿ ಸಂಖ್ಯೆ, ಬಳಕೆ ಮಾಡುವ ಮೊಬೈಲ್‌ ಸಂಖ್ಯೆ ಒಂದಲ್ಲ ಒಂದು ರೀತಿಯಲ್ಲಿ ‘9’ರ ಸಂಬಂಧ ಹೊಂದಬೇಕೆಂದು ಬಯಸುತ್ತಾರೆ. ಅದೇ ರೀತಿ ನಗರ ಪಾಲಿಕೆಯ ವಾರ್ಡ್‌ ಸಂಖ್ಯೆಗಳನ್ನು ಲಕ್ಕಿ ನಂಬರ್‌ಗೆ ಹೊಂದಿಕೊಳ್ಳುವಂತೆ ಮಾಡಲಾಗಿದೆ.

-ಬಾಕ್ಸ್‌))

ನಗರ ಪಾಲಿಕೆಗಳ ಜನಸಂಖ್ಯೆ ಅಂದಾಜುನಗರ ಪಾಲಿಕೆ2011ರ ಜನ ಗಣತಿ2023ರ ಚುನಾವಣೆಅಂದಾಜು ಜನ ಸಾಂದ್ರತೆಬೆಂ.ಪೂರ್ವ ನಗರ ಪಾಲಿಕೆ9 ಲಕ್ಷ13 ಲಕ್ಷ7,738ಬೆಂ.ಪಶ್ಚಿಮ ನಗರ ಪಾಲಿಕೆ26 ಲಕ್ಷ45 ಲಕ್ಷ27,950ಬೆಂ.ಕೇಂದ್ರ ನಗರ ಪಾಲಿಕೆ15 ಲಕ್ಷ25 ಲಕ್ಷ32,051

ಬೆಂ.ಉತ್ತರ ನಗರ ಪಾಲಿಕೆ18 ಲಕ್ಷ31 ಲಕ್ಷ19,620ಬೆಂ.ದಕ್ಷಿಣ ನಗರ ಪಾಲಿಕೆ17 ಲಕ್ಷ30 ಲಕ್ಷ20,408

-ಬಾಕ್ಸ್‌))

ವಾರ್ಡ್‌ ಕರಡು ಸೆ.29ಕ್ಕೆ ಪ್ರಕಟ

ವಾರ್ಡ್‌ ವಿಂಗಡಣೆಯ ಆಯೋಗದ ರಚನೆಯ ವೇಳೆಯಲ್ಲಿಯೇ ಸರ್ಕಾರ, ವೇಳಾಪಟ್ಟಿ ನೀಡಿದ್ದು, ಆ ಪ್ರಕಾರ ಸೆ.29ಕ್ಕೆ ಐದು ಪಾಲಿಕೆಯ ವಾರ್ಡ್‌ ವಿಂಗಡಣೆಯ ಕರಡು ಪ್ರಕಟಿಸಲಿದ್ದು, 2 ವಾರ ಸಾರ್ವಜನಿಕರ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಆಕ್ಷೇಪಣೆ ಮತ್ತು ಸಲಹೆಗಳನ್ನು ಪರಿಶೀಲಿಸಿ ನ.11ಕ್ಕೆ ಅಂತಿಮ ವಾರ್ಡ್‌ ಪಟ್ಟಿ ಸರ್ಕಾರ ಪ್ರಕಟಿಸಲಿದೆ.