ಸಾರಾಂಶ
ರಷ್ಯಾ ತೈಲ ಖರೀದಿ ವಿಷಯದಲ್ಲಿ ಹಾಗೂ ಶೇ.50 ಪ್ರತೀಕಾರ ತೆರಿಗೆ ಹೇರಿಕೆ ವಿಚಾರದಲ್ಲಿ ಕಳೆದ 3 ತಿಂಗಳಿನಿಂದ ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸತತ ವಾಗ್ದಾಳಿ ನಡೆಸುತ್ತಲೇ ಬಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಿಢೀರ್ ಮೆತ್ತಗಾಗಿದ್ದಾರೆ.
ನ್ಯೂಯಾರ್ಕ್/ವಾಷಿಂಗ್ಟನ್ : ರಷ್ಯಾ ತೈಲ ಖರೀದಿ ವಿಷಯದಲ್ಲಿ ಹಾಗೂ ಶೇ.50 ಪ್ರತೀಕಾರ ತೆರಿಗೆ ಹೇರಿಕೆ ವಿಚಾರದಲ್ಲಿ ಕಳೆದ 3 ತಿಂಗಳಿನಿಂದ ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸತತ ವಾಗ್ದಾಳಿ ನಡೆಸುತ್ತಲೇ ಬಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಿಢೀರ್ ಮೆತ್ತಗಾಗಿದ್ದಾರೆ.
‘ನರೇಂದ್ರ ಮೋದಿ ಅವರೊಬ್ಬ ಅತ್ಯುತ್ತಮ ಪ್ರಧಾನಿ. ನಾನು ಯಾವತ್ತಿಗೂ ಅವರ ಗೆಳೆಯನಾಗಿಯೇ ಇರುತ್ತೇನೆ. ಭಾರತ ಮತ್ತು ಅಮೆರಿಕ ನಡುವೆ ವಿಶೇಷ ಬಾಂಧವ್ಯವಿದೆ. ಆ ಕುರಿತು ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕೆಲವೊಮ್ಮೆ ಎರಡೂ ದೇಶಗಳ ನಡುವೆ ಕೆಲ ಕ್ಷಣಗಳು ಬಂದು ಹೋಗುತ್ತವೆ’ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಶಾಂಘೈ ಶೃಂಗದಲ್ಲಿ ಭಾರತ- ರಷ್ಯಾ- ಚೀನಾ ಅಪರೂಪದ ಮೈತ್ರಿ ಜಾಗತಿಕ ಗಮನ ಸೆಳೆದ ಬೆನ್ನಲ್ಲೇ, ‘ಚೀನಾದಿಂದಾಗಿ ಭಾರತ ನಮ್ಮ ಕೈತಪ್ಪಿದಂತಿದೆ’ ಎಂಬ ಹೇಳಿಕೆ ಬೆನ್ನಲ್ಲೇ ಅವರೀಗ ಮೋದಿಯ ಬಗ್ಗೆ ಹಾಗೂ ತಮ್ಮಿಬ್ಬರ ನಡುವಣ ಸ್ನೇಹದ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ.
ಇದರ ಬೆನ್ನಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ, ‘ಟ್ರಂಪ್ ಭಾವನೆ ಗೌರವಿಸುವೆ’ ಎನ್ನುವ ಮೂಲಕ ಹಳಸಿದ್ದ ಸಂಬಂಧ ಮತ್ತೆ ಬೆಸೆವ ಮುನ್ಸೂಚನೆ ನೀಡಿದ್ದಾರೆ.
ಟ್ರಂಪ್ ಹೇಳಿದ್ದೇನು?
ತಮ್ಮ ಓವಲ್ ಕಚೇರಿಯಲ್ಲಿ ಸುದ್ದಿಗಾರರ ಜತೆಗೆ ಶನಿವಾರ ಮಾತನಾಡಿದ ಅವರು, ‘ನಾನು ಯಾವತ್ತಿಗೂ ಮೋದಿ ಅವರ ಗೆಳೆಯನಾಗಿರುತ್ತೇನೆ. ಅವರೊಬ್ಬ ಅತ್ಯುತ್ತಮ ಪ್ರಧಾನಿ, ಅವರೊಬ್ಬ ಮಹಾನ್ ವ್ಯಕ್ತಿ. ಆದರೆ, ಅವರು ಈ ಕ್ಷಣದಲ್ಲಿ ಅವರು ನಡೆದುಕೊಳ್ಳುತ್ತಿರುವ ರೀತಿ ನನಗೆ ಇಷ್ಟವಾಗುತ್ತಿಲ್ಲ ಅಷ್ಟೆ. ಆದರೆ, ಭಾರತ ಮತ್ತು ಅಮೆರಿಕ ಎರಡೂ ದೇಶಗಳು ವಿಶೇಷ ಬಾಂಧವ್ಯ ಹೊಂದಿವೆ. ಹೀಗಾಗಿ ಆ ಕುರಿತು ಚಿಂತಿಸುವ ಅಗತ್ಯವಿಲ್ಲ. ಇಂಥ ಕೆಲ ಕ್ಷಣಗಳು ಎರಡೂ ದೇಶಗಳ ನಡುವೆ ಬರುತ್ತವೆ’ ಎಂದು ಶೇ.50ರಷ್ಟು ತೆರಿಗೆ ಬಳಿಕದ ಹದಗೆಟ್ಟ ಸಂಬಂಧದ ವಿಚಾರವಾಗಿ ನಗುತ್ತಲೇ ಪ್ರತಿಕ್ರಿಯಿಸಿದರು.
‘ಭಾರತದ ಜತೆಗಿನ ಸಂಬಂಧ ಸುಧಾರಣೆಗೆ ಸಿದ್ಧರಿದ್ದೀರಾ?’ ಎಂಬ ಪ್ರಶ್ನೆಗೆ, ‘ಭಾರತವು ರಷ್ಯಾದಿಂದ ತೈಲ ಖರೀದಿಸುತ್ತಿರುವುದಿಂದ ನನಗೆ ತೀವ್ರ ನಿರಾಶೆಯಾಗಿದೆ. ಇದು ಅವರಿಗೆ ಅರ್ಥವಾಗಬೇಕು’ ಎಂದರು.
‘ನಾವು ಭಾರತದ ಮೇಲೆ ಅತೀ ಹೆಚ್ಚು ಅಂದರೆ ಶೇ.50ರಷ್ಟು ತೆರಿಗೆ ವಿಧಿಸಿದ್ದೇವೆ. ನಾನು ಮೋದಿ ಅವರ ಜತೆಗೆ ಒಳ್ಳೆಯ ಬಾಂಧವ್ಯ ಹೊಂದಿದ್ದೇನೆ. ಕೆಲ ತಿಂಗಳ ಹಿಂದೆ ಅವರು ಅಮೆರಿಕಕ್ಕೂ ಆಗಮಿಸಿದ್ದರು ಎಂದು ನಾವು ಭಾರತ ಮತ್ತು ರಷ್ಯಾವನ್ನು ಕಳೆದುಕೊಂಡಿದ್ದೇವೆ’ ಎಂಬ ತಮ್ಮ ಇತ್ತೀಚಿನ ಪೋಸ್ಟ್ ಕುರಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಟ್ರಂಪ್ ಭಾವನೆ ಗೌರವಿಸುವೆ
ಭಾರತ-ಅಮೆರಿಕ ನಡುವೆ ಧನಾತ್ಮಕ ಮತ್ತು ದೂರಾಲೋಚನೆ ಸಹಭಾಗಿತ್ವ ಇದೆ. ಎರಡೂ ದೇಶಗಳ ನಡುವಿನ ಸಂಬಂಧ ಕುರಿತ ಟ್ರಂಪ್ ಭಾವನೆ ಗೌರವಿಸುವೆ ಮತ್ತು ನನ್ನ ಭಾವನೆಯೂ ಇದೇ ಆಗಿದೆ.
- ನರೇಂದ್ರ ಮೋದಿ, ಪ್ರಧಾನಿ