ಸಾರಾಂಶ
ಭಾರತ, ಚೀನಾ ಹಾಗೂ ರಷ್ಯಾ ದೇಶಗಳ ಮುಖ್ಯಸ್ಥರು ಇತ್ತೀಚೆಗೆ ಚೀನಾದಲ್ಲಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದಂತೆಯೇ ವಿಚಲಿತರಾದಂತೆ ಕಂಡುಬಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ನಾವು ಭಾರತ ಮತ್ತು ರಷ್ಯಾವನ್ನು ಕರಾಳ ಚೀನಾದಿಂದಾಗಿ ಕಳೆದುಕೊಂಡಂತೆ ಕಾಣುತ್ತಿದೆ.
ವಾಷಿಂಗ್ಟನ್ : ಭಾರತ, ಚೀನಾ ಹಾಗೂ ರಷ್ಯಾ ದೇಶಗಳ ಮುಖ್ಯಸ್ಥರು ಇತ್ತೀಚೆಗೆ ಚೀನಾದಲ್ಲಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದಂತೆಯೇ ವಿಚಲಿತರಾದಂತೆ ಕಂಡುಬಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ನಾವು ಭಾರತ ಮತ್ತು ರಷ್ಯಾವನ್ನು ಕರಾಳ ಚೀನಾದಿಂದಾಗಿ ಕಳೆದುಕೊಂಡಂತೆ ಕಾಣುತ್ತಿದೆ. ಅವರಿಗೆ ಸುದೀರ್ಘ ಹಾಗೂ ಸಮೃದ್ಧವಾದ ಭವಿಷ್ಯ ಸಿಗುವಂತಾಗಲಿ’ ಎಂದಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣ ಟ್ರುಥ್ ಸೋಷಿಯಲ್‌ನಲ್ಲಿ ಶುಕ್ರವಾರ ಇಂಥದ್ದೊಂದು ಪೋಸ್ಟ್ ಹಾಕಿದ್ದಾರೆ.
ಇದರ ಜತೆಗೆ ಅವರು ಇತ್ತೀಚೆಗೆ ನಡೆದ ಶಾಂಘೈ ಕೋ ಆಪರೇಷನ್ ಆರ್ಗನೈಸೇಷನ್ (ಎಸ್‌ಸಿಒ) ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಶಕ್ತಿ ಪ್ರದರ್ಶನ ಮಾಡಿದ್ದರ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಮೂರೂ ದೇಶಗಳ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಷ್ಯಾದಿಂದ ತೈಲ ಖರೀದಿ ಮತ್ತು ಶೇ.50ರಷ್ಟು ತೆರಿಗೆ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಭಾರತದ ನಡುವಿನ 20 ವರ್ಷಗಳ ಆತ್ಮೀಯ ಸಂಬಂಧ ಬಹುತೇಕ ಹದಗೆಟ್ಟಿದೆ. ಆ ಬಳಿಕ ಭಾರತವು ಚೀನಾ ಜತೆಗಿನ ವಿವಾದ ಪರಿಹಾರಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಅಲ್ಲದೆ, ಅಮೆರಿಕ ಬೆದರಿಕೆ ಹೊರತಾಗಿಯೂ ರಷ್ಯಾ ಜತೆಗಿನ ಸಂಬಂಧ ಕಡಿದುಕೊಳ್ಳದೇ ಇರಲು ನಿರ್ಧರಿಸಿದೆ. ಇದರ ಬೆನ್ನಲ್ಲೇ ಎಸ್‌ಸಿಒ ಶೃಂಗದಲ್ಲಿ ಪುಟಿನ್ ಕ್ಸಿ ಮತ್ತು ಮೋದಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಶಕ್ತಿ ಪ್ರದರ್ಶನ ಮಾಡಿದ್ದರು. ವಿರೋಧಿಗಳ ಒಗ್ಗಟ್ಟು ಟ್ರಂಪ್‌ರನ್ನು ವಿಚಲಿತ ಮಾಡಿದೆ ಎನ್ನಲಾಗಿದೆ.