ಡೊನಾಲ್ಡ್ ಟ್ರಂಪ್‌ ಭಾರತ ದೇಶಕ್ಕೂ ಕಂಟಕ

| Published : Jul 23 2025, 04:19 AM IST

ಸಾರಾಂಶ

ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜಗತ್ತಿಗೇ ನಾನೇ ದೊಡ್ಡಣ್ಣ ಎಂದು ಹೇಳುತ್ತಾ ನಾನೊಬ್ಬ ವ್ಯಾಪಾರಿ ಎನ್ನುತ್ತಾ ದೇಶ ದೇಶಗಳ ನಡುವೆ ಎತ್ತಿಕಟ್ಟಿ ತನ್ನ ವ್ಯಾಪಾರಿ ಜಾಣ್ಮೆಯನ್ನು ಮೆರೆಸುತ್ತಿದ್ದು, ಜಗತ್ತಿಗಷ್ಟೇ ಅಲ್ಲ ನಮ್ಮ ಭಾರತ ದೇಶಕ್ಕೂ ಕಂಟಕವಾಗಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಶಿವಮೊಗ್ಗ: ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜಗತ್ತಿಗೇ ನಾನೇ ದೊಡ್ಡಣ್ಣ ಎಂದು ಹೇಳುತ್ತಾ ನಾನೊಬ್ಬ ವ್ಯಾಪಾರಿ ಎನ್ನುತ್ತಾ ದೇಶ ದೇಶಗಳ ನಡುವೆ ಎತ್ತಿಕಟ್ಟಿ ತನ್ನ ವ್ಯಾಪಾರಿ ಜಾಣ್ಮೆಯನ್ನು ಮೆರೆಸುತ್ತಿದ್ದು, ಜಗತ್ತಿಗಷ್ಟೇ ಅಲ್ಲ ನಮ್ಮ ಭಾರತ ದೇಶಕ್ಕೂ ಕಂಟಕವಾಗಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೆರಿಕಾ ದೇಶದಲ್ಲಿ ನಮ್ಮ ದೇಶಗಳ ಸರಕುಗಳ ಮೇಲೆ ಸುಂಕ ಶೇ.25ರಿಂದ 200ರವರೆಗೆ ತೆರಿಗೆಯನ್ನು ಏರಿಸಿದ್ದಾರೆ. ನಮ್ಮ ದೇಶದ ಒಳಗೆ ಅವರ ಸರಕುಗಳ ಪ್ರವೇಶಕ್ಕೆ ಅಷ್ಟೇ ತೆರಿಗೆ ವಿಧಿಸಬೇಕು. ಮೋದಿ ಮತ್ತು ಟ್ರಂಪ್ ಸ್ನೇಹಿತರೆಂದು ಹೇಳುತ್ತಾ ಭಾರತ ದೇಶದ ಮೇಲೆ ಬ್ಲಾಕ್‌ಮೇಲ್ ತಂತ್ರ ಉಪಯೋಗಿಸಿ ನಮ್ಮ ದೇಶದ ಮಾರುಕಟ್ಟೆಯನ್ನು ಪ್ರವೇಶಿಸುವ ಹುನ್ನಾರ ನಡೆಸುತ್ತಿದ್ದಾರೆ. ನಮ್ಮ ದೇಶದ ಆರ್ಥಿಕ ವ್ಯವಸ್ಥೆಯನ್ನು ಅಸಹಾಯಕ ಸ್ಥಿತಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ. ಟ್ರಂಪ್ ಸ್ನೇಹಕ್ಕಾಗಿ ನಮ್ಮ ಪ್ರಧಾನಿ ಮೋದಿಯವರು ಯಾವುದೇ ಕಾರಣಕ್ಕೂ ಅವಸರದ ತೀರ್ಮಾನ ಮಾಡಬಾರದು ಎಂದು ಒತ್ತಾಯಿಸಿದರು.

ಹೈನುಗಾರಿಕೆಯಲ್ಲಿ ವಿಶ್ವದಲ್ಲೇ ಭಾರತ ನಂಬರ್ ಒನ್ ಸ್ಥಾನದಲ್ಲಿದ್ದು, ನಮ್ಮ ಇಡೀ ಹೈನು ಉದ್ಯಮವನ್ನು ನಾಶಮಾಡುವ ಪ್ರಯತ್ನವನ್ನು ಟ್ರಂಪ್ ಮಾಡುತ್ತಿದ್ದಾರೆ. ಹೈನು ಉತ್ಪನ್ನಗಳು ಭಾರತಕ್ಕೆ 11 ವರ್ಷಕ್ಕಾಗುವಷ್ಟು ಅಮೇರಿಕಾದಲ್ಲಿ ಉತ್ಪತ್ತಿಯಾಗುತ್ತಿದ್ದು, ಅದನ್ನು ಸುಂಕರಹಿತವಾಗಿ ಭಾರತದೊಳಗೆ ಪ್ರವೇಶಿಸಿ, ಇಲ್ಲಿ ಮಾರುಕಟ್ಟೆ ಕಲ್ಪಿಸುವ ಪ್ರಯತ್ನವನ್ನು ಟ್ರಂಪ್ ಮಾಡುತ್ತಿದ್ದಾರೆ. ಹಾಗೇನಾದರೂ ಆದಲ್ಲಿ ಭಾರತೀಯ ರೈತರು ನೇಣುಹಾಕಿಕೊಳ್ಳುವ ಪರಿಸ್ಥಿತಿ ಬರುತ್ತದೆ. ಯಾವುದೇ ಕಾರಣಕ್ಕೂ ಕೃಷಿ ಮತ್ತು ಆರೋಗ್ಯ ಎರಡೂ ವಿಷಯಗಳಲ್ಲಿ ಅಮೆರಿಕಾ ಇಲ್ಲಿಗೆ ಕಾಲಿಡಬಾರದು ಎಂದರು.

ಅದೇ ರೀತಿ ಅಲ್ಲಿ ನಿಷೇಧ ಮಾಡಿದ ಕುಲಾಂತರಿ ಆಹಾರ ಪದಾರ್ಥಗಳನ್ನೂ ಭಾರತದ ಮಾರುಕಟ್ಟೆಯಲ್ಲಿ ಮಾರುವ ಪ್ರಯತ್ನ ಮಾಡಲಾಗುತ್ತಿದ್ದು, ಸುಂಕಮುಕ್ತ ಪ್ರವೇಶಕ್ಕೆ ಸಿದ್ಧತೆ ಮಾಡುತ್ತಿದೆ. ಇಲ್ಲಿಯ ಮಾರುಕಟ್ಟೆಯನ್ನು ಭದ್ರವಾಗಿ ಆಕ್ರಮಣ ಮಾಡುವ ತಂತ್ರಗಾರಿಕೆ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ವಿದೇಶಗಳಿಂದ ಅಲ್ಲಿ ನಿಷೇಧಿಸಲ್ಪಟ್ಟ ಆಹಾರ ಉತ್ಪನ್ನಗಳನ್ನು ಇಲ್ಲಿ ಮಾರುಕಟ್ಟೆ ಪ್ರವೇಶ ಮಾಡದಂತೆ ತಡೆಹಿಡಿಯಬೇಕು. ಡೊನಾಲ್ಡ್‌ಟ್ರಂಪ್ ತಂತ್ರಕ್ಕೆ ನಮ್ಮ ದೇಶದ ರೈತರನ್ನು ಮತ್ತು ಉದ್ಯಮಿಗಳನ್ನು ಬಲಿಕೊಡಬೇಡಿ ಎಂದು ಆಗ್ರಹಿಸಿದರು.ಕೆಎಸ್‌ಆರ್‌ಟಿಸಿ ನೌಕರರ ಬೇಡಿಕೆಗಳನ್ನು ಈಡೇರಿಸಿ:

ಕೆಎಸ್‌ಆರ್‌ಟಿಸಿ ನೌಕರರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಒಪ್ಪಿ ಜಾರಿಗೊಳಿಸಬೇಕು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ ಪ್ರಕಾರ ಸಾರಿಗೆ ನೌಕರರ ಬೇಡಿಕೆಯನ್ನು ಈಡೇರಿಸಿ, ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ ಅವರಿಗೆ ಸೌಲಭ್ಯ ನೀಡಬೇಕು. ಯಾವುದೇ ಕಾರಣಕ್ಕೂ ನೌಕರರ ಮೇಲೆ ಎಸ್ಮಾ ಜಾರಿಗೊಳಿಸಬಾರದು, ಕೊಟ್ಟ ಮಾತಿಗೆ ಸರಕಾರ ಬದ್ಧವಾಗಿರಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಪ್ರಮುಖರಾದ ಮಂಜುನಾಥ್, ಈಶ್ವರಪ್ಪ, ಸಂತೋಷ್, ಬಸವರಾಜ್ ಮಲ್ಲನಗೌಡ, ದೇವಪ್ಪ, ಶೇಖರಪ್ಪ, ಬಸವಗೌಡ ಪಾಟೀಲ್, ಹಾರ್‍ನಹಳ್ಳಿ ಕೃಷ್ಣಪ್ಪ, ಗಣೇಶ್, ಸಿದ್ದೇಶ್ ಮತ್ತಿತರರಿದ್ದರು.

ಎಚ್‌.ಎಸ್‌.ರುದ್ರಪ್ಪ ನೆನಪಿನ ದಿನ

ಆಗಸ್ಟ್‌ 19ರಂದು ನಗರದ ಅಂಬೇಡ್ಕರ್ ಭವನದಲ್ಲಿ ರಾಜ್ಯದ ಉದ್ದಗಲಕ್ಕೂ ರೈತರ ಸಂಘಟನೆಗಳನ್ನು ಸಂಘಟಿಸುವಲ್ಲಿ ರೈತರ ಹಿತರಕ್ಷಣೆಗೆ ನಿರಂತರವಾಗಿ ಶ್ರಮಿಸಿದ್ದ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಎಚ್.ಎಸ್.ರುದ್ರಪ್ಪ ಅವರ ನೆನಪಿನ ಕಾರ್ಯಕ್ರಮ ಆಯೊಜಿಸಲಾಗಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದರು.

ಅಂದು ನಗರದ ಪ್ರವಾಸಿ ಮಂದಿರದಿಂದ ರುದ್ರಪ್ಪನವರ ಭಾವಚಿತ್ರದೊಂದಿಗೆ ಮೆರವಣಿಗೆ ಮೂಲಕ ಅಂಬೇಡ್ಕರ್ ಭವನಕ್ಕೆ ಆಗಮಿಸಿ ಅಲ್ಲಿ ನೆನಪಿನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.