ನಾಚಿಕೆಯಾಗಬೇಕು ನಿಮಗೆ : ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುವಲ್‌ ಮ್ಯಾಕ್ರಾನ್‌ ವಿರುದ್ಧ ನೆತನ್ಯಾಹು ಗುಡುಗು

| Published : Oct 07 2024, 01:32 AM IST / Updated: Oct 07 2024, 04:23 AM IST

ಸಾರಾಂಶ

ಹಿಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ಲೆಬನಾನ್‌ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿ, ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುವಲ್‌ ಮ್ಯಾಕ್ರಾನ್‌ ಮತ್ತು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ.

ಪ್ಯಾರಿಸ್‌: ಹಿಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ಲೆಬನಾನ್‌ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿ, ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುವಲ್‌ ಮ್ಯಾಕ್ರಾನ್‌ ಮತ್ತು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ. ಕೂಡಲೇ ಲೆಬನಾನ್‌ ದಾಳಿ ನಿಲ್ಲಿಸಿ ಎಂಬ ಮ್ಯಾಕ್ರಾನ್‌ ಆಗ್ರಹಕ್ಕೆ, ‘ನಿಮಗೆ ನಾಚಿಕೆಯಾಗಬೇಕು’ ಎಂದು ನೆತನ್ಯಾಹು ತಿರುಗೇಟು ನೀಡಿದ್ದಾರೆ.

‘ಫ್ರಾನ್ಸ್‌ ಇಂಟರ್‌’ ರೇಡಿಯೋಗೆ ಸಂದರ್ಶನ ನೀಡಿದ್ದ ಮ್ಯಾಕ್ರಾನ್‌, ‘ಗಾಜಾ ಮೇಲಿನ ದಾಳಿಗೆ ಬಳಸುವ ಶಸ್ತ್ರಾಸ್ತ್ರಗಳ ಪೂರೈಕೆಯನ್ನು ನಾವು ಸ್ಥಗಿತಗೊಳಿಸಬೇಕು, ಫ್ರಾನ್ಸ್‌ ಇಸ್ರೇಲ್‌ಗೆ ಯಾವುದೇ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿಲ್ಲ. ಗಾಜಾದಲ್ಲಿ ಕದನ ವಿರಾಮಕ್ಕೆ ಭಾರೀ ಆಗ್ರಹದ ಹೊರತಾಗಿಯೂ ಅಲ್ಲಿ ಸಂಘರ್ಷ ಮುಂದುವರೆದಿದೆ. ನಮ್ಮ ಮಾತನ್ನು ಯಾರೂ ಆಲಿಸುತ್ತಿಲ್ಲ, ಇದು ದೊಡ್ಡ ತಪ್ಪು. ಯುದ್ಧ ದ್ವೇಷದ ವಾತಾವರಣಕ್ಕೆ ಕಾರಣವಾಗುತ್ತಿದೆ. ಜೊತೆಗೆ ಲೆಬನಾನ್‌ ಅನ್ನು ನಾವು ಮತ್ತೊಂದು ಗಾಜಾ ಆಗಲು ಬಿಡಬಾರದು. ಲೆಬನಾನ್‌ ಮೇಲಿ ಭೂದಾಳಿ ತಪ್ಪು. ಲೆಬನಾನ್‌ ಸಂಘರ್ಷ ತಡೆಯುವುದು ನಮ್ಮ ಆದ್ಯತೆಯಾಗಬೇಕು’ ಎಂದು ಹೇಳಿದ್ದರು.

ಇದಕ್ಕೆ ತಿರುಗೇಟು ನೀಡಿರುವ ನೆತನ್ಯಾಹು, ‘ಇರಾನ್‌ ಬೆಂಬಲಿತ ಶಕ್ತಿಗಳ ಕ್ರೂರತೆ ವಿರುದ್ಧ ಇಸ್ರೇಲ್‌ ಹೋರಾಡುತ್ತಿರುವಾಗ, ನಾಗರಿಕ ದೇಶಗಳೆಲ್ಲಾ ಇಸ್ರೇಲ್‌ ಜೊತೆಗೂಡಬೇಕು. ಇದರ ಹೊರತಾಗಿಯೂ ಅಧ್ಯಕ್ಷ ಮ್ಯಾಕ್ರಾನ್‌ ಮತ್ತು ಇತರೆ ಪಾಶ್ಚಿಮಾತ್ಯ ನಾಯಕರು ಇಸ್ರೇಲ್‌ಗೆ ಶಸ್ತ್ರಾಸ್ತ ಪೂರೈಕೆ ನಿಷೇಧದ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆಲ್ಲಾ ನಾಚಿಕೆಯಾಗಬೇಕು’ ಎಂದು ಕಿಡಿಕಾರಿದ್ದಾರೆ.

ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿರುವ ಮ್ಯಾಕ್ರಾನ್‌, ‘ಫ್ರಾನ್ಸ್‌ ಈಗಲೂ ಇಸ್ರೇಲ್‌ನ ಅಚಲ ಸ್ನೇಹಿತ. ಆದರೆ ನೆತನ್ಯಾಹು ಅವರ ಅತಿಯಾದ ಹೇಳಿಕೆ ಎರಡೂ ದೇಶಗಳ ಸ್ನೇಹಕ್ಕಿಂತ ದೂರವಿದೆ’ ಎಂದಿದ್ದಾರೆ.