ಇರಾನ್‌ ಮತ್ತು ಇಸ್ರೇಲ್ ನಡುವೆ ಯುದ್ಧ ಭೀತಿ ಸೃಷ್ಟಿ : ಭಾರತದ ಮಧ್ಯಸ್ಥಿಕೆಗೆ ಇರಾನ್‌ ಕರೆ

| Published : Oct 03 2024, 01:22 AM IST / Updated: Oct 03 2024, 04:42 AM IST

ಸಾರಾಂಶ

ಇರಾನ್‌ ಮತ್ತು ಇಸ್ರೇಲ್ ನಡುವೆ ಯುದ್ಧ ಭೀತಿ ಸೃಷ್ಟಿಯಾಗಿರುವ ನಡುವೆಯೇ, ಬಿಕ್ಕಟ್ಟು ಕೊನೆಗಾಣಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂದು ಇರಾನ್ ಅಭಿಪ್ರಾಯಪಟ್ಟಿದೆ.

ನವದೆಹಲಿ: ಇರಾನ್‌ ಮತ್ತು ಇಸ್ರೇಲ್ ನಡುವೆ ಯುದ್ಧ ಭೀತಿ ಸೃಷ್ಟಿಯಾಗಿರುವ ನಡುವೆಯೇ, ಬಿಕ್ಕಟ್ಟು ಕೊನೆಗಾಣಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂದು ಇರಾನ್ ಅಭಿಪ್ರಾಯಪಟ್ಟಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತದಲ್ಲಿನ ಇರಾನ್‌ ರಾಯಭಾರಿ ಇರಾಜ್‌ ಎಲಾಹಿ, ‘ಇಡೀ ವಲಯದಲ್ಲಿ ಭಾರತ ಪ್ರಮುಖ ದೇಶ. ಇರಾನ್ ಮತ್ತು ಇಸ್ರೇಲ್ ಎರಡೂ ದೇಶಗಳೊಂದಿಗೆ ಭಾರತ ಉತ್ತಮ ಸಂಬಂಧ ಹೊಂದಿದೆ. ಪ್ರಧಾನಿ ಮೋದಿ ಈಗಾಗಲೇ ಹಲವು ಬಾರಿ ಇದು ಯುದ್ಧದ ಸಮಯವಲ್ಲ ಎಂದು ಹೇಳಿದ್ದಾರೆ. ನಾವು ಇರಾನ್‌ ಕೂಡಾ ಇದೇ ನಂಬಿಕೆಯನ್ನು ಹೊಂದಿದ್ದೇವೆ. ಆದರೆ ಯಾವುದೇ ದೇಶವೊಂದು ಇನ್ನೊಂದು ದೇಶದ ಸಮಗ್ರತೆಗೆ ಧಕ್ಕೆ ತಂದರೆ ಆ ದೇಶವಾದರೂ ಏನು ಮಾಡಲು ಸಾಧ್ಯ’ ಎಂದು ಇಸ್ರೇಲ್‌ ಮೇಲಿನ ಇರಾನ್‌ ದಾಳಿಯನ್ನು ಸಮರ್ಥಿಸಿದರು. ಆದರೆ ಇದರ ನಡುವೆಯೇ ದಾಳಿ ನಿಲ್ಲಿಸುವಂತೆ ಇಸ್ರೇಲ್‌ ಅನ್ನು ಭಾರತ ಮನವೊಲಿಸುವ ಸಾಮರ್ಥ್ಯ ಹೊಂದಿದೆ ಎಂದು ಎಲಾಹಿ ಹೇಳಿದ್ದಾರೆ.

==

ಗಾಜಾ ಮೇಲೆ ಮತ್ತೆ ಇಸ್ರೇಲ್‌ ದಾಳಿ: ಮಕ್ಕಳು ಸೇರಿ 51 ಬಲಿ

ದೇರ್ ಆಲ್‌- ಬಾಲಹ್: ಹಮಾಸ್‌ ವಶದಲ್ಲಿರುವ ಗಾಜಾ ಪಟ್ಟಿ ಪ್ರದೇಶದ ಮೇಲೆ ಇಸ್ರೇಲ್‌ ಮಂಗಳವಾರ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ಮಕ್ಕಳು, ಮಹಿಳೆಯರೂ ಸೇರಿದಂತೆ ಕನಿಷ್ಠ 51 ಮಂದಿ ಮೃತಪಟ್ಟಿದ್ದಾರೆ. 82 ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಸಚಿವಾಲಯ, ರಾತ್ರಿಯಿಡಿ ಇಸ್ರೇಲ್‌ ಮಿಲಿಟರಿ ಪಡೆಗಳು ಗಾಜಾದ ಖಾನ್‌ ಯೂನಸ್‌ ನಗರದಲ್ಲಿ ಭೂ ಕಾರ್ಯಾಚರಣೆ ಆರಂಭಿಸಿದ್ದು, ದಾಳಿ ನಡೆಸಿದೆ ಎಂದು ಹೇಳಿದೆ. ಹಿಂದಿನ ವರ್ಷ ಆ.7 ರಂದು ಹಮಾಸ್‌ ಉಗ್ರರು ಹಾಗೂ ಇಸ್ರೇಲ್‌ ನಡುವೆ ಆರಂಭವಾದ ಯುದ್ಧ ಮುಂದುವರೆಯುತ್ತಲೇ ಇದೆ. ಇದುವರೆಗೆ ಇಸ್ರೇಲ್‌ ದಾಳಿಗೆ 41000 ಪ್ಯಾಲೆಸ್ತೀನಿಯರನ್ನು ಸಾವನ್ನಪ್ಪಿರುವ ವರದಿಗಳಿವೆ.

==

ಲೆಬನಾನ್‌ನಲ್ಲಿ ಇಸ್ರೇಲ್‌ನ 8 ಯೋಧರ ಸಾವು

ಟೆಲ್ ಅವಿವ್/ಬೈರೂತ್‌: ಲೆಬನಾನ್‌ ಮೇಲೆ ನಡೆಸುತ್ತಿರುವ ಭೂದಾಳಿ ವೇಳೆಯ ವೇಳೆ ತನ್ನ 8 ಯೋಧರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್‌ ಸೇನೆ ಹೇಳಿದೆ. ಹಿಜ್ಬುಲ್ಲಾ ಉಗ್ರರ ಗುರಿಯಾಗಿಸಿ ಭಾರೀ ಪ್ರಮಾಣದ ವೈಮಾನಿಕ ದಾಳಿ ನಡೆಸಿದ್ದ ಇಸ್ರೇಲ್‌, ಬಳಿಕ ಸೀಮಿತ ಪ್ರಮಾಣದಲ್ಲಿ ಆಯ್ದ ಪ್ರದೇಶಗಳ ಮೇಲೆ ಭೂದಾಳಿ ಆರಂಭಿಸಿತ್ತು. ಈ ವೇಳೆ ಹಿಜ್ಬುಲ್ಲಾಗಳು ನಡೆಸಿದ ಪ್ರತಿದಾಳಿಯಲ್ಲಿ 8 ಯೋಧರು ಮೃತಪಟ್ಟಿದ್ದಾರೆ.