ಸಾರಾಂಶ
ನವದೆಹಲಿ: ವಿವಿಧ ಕಾಲಘಟ್ಟದಲ್ಲಿ ಭಾರತದಿಂದ ಅಮೆರಿಕಕ್ಕೆ ಕಳ್ಳಸಾಗಣೆ ಮಾಡಲಾಗಿದ್ದ ಅಪರೂಪದ 297 ಪ್ರಾಚೀನ ವಸ್ತುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ವೇಳೆ ಅಮೆರಿಕವು ಭಾರತಕ್ಕೆ ಮರಳಿಸಿದೆ. ಇದರೊಂದಿಗೆ 2014ರ ಬಳಿಕ ಅಮೆರಿಕವು ಭಾರತಕ್ಕೆ ಮರಳಿಸಿದ ಇಂಥ ಪ್ರಾಚೀನ ವಸ್ತುಗಳ ಸಂಖ್ಯೆ 640ಕ್ಕೆ ಏರಿದೆ. ಇದು ಯಾವುದೇ ದೇಶವೊಂದು ಭಾರತಕ್ಕೆ ಮರಳಿಸಿದ ಗರಿಷ್ಠ ಪ್ರಮಾಣದ ಪ್ರಾಚೀನ ವಸ್ತುವಾಗಿದೆ.
ಮರಳಿಸಲಾದ ವಸ್ತುಗಳಲ್ಲಿ 10-11 ನೇ ಶತಮಾನದ ಮರಳುಗಲ್ಲಿನ ‘ಅಪ್ಸರಾ’ ಶಿಲ್ಪ, 15-16 ನೇ ಶತಮಾನದ ಕಂಚಿನ ಜೈನ ತೀರ್ಥಂಕರ ಪ್ರತಿಮೆ, ಪೂರ್ವ ಭಾರತದ ಟೆರಾಕೋಟಾ ಹೂದಾನಿ, 1ನೇ ಶತಮಾನದ ದಕ್ಷಿಣ ಭಾರತದ ಕಲ್ಲಿನ ಶಿಲ್ಪ,17-18 ನೇ ಶತಮಾದ ದಕ್ಷಿಣ ಭಾರತದ ಕಂಚಿನ ಗಣೇಶ, 15-16 ನೇ ಶತಮಾನದ ಭಗವಾನ್ ಬುದ್ಧನ ಮರಳುಗಲ್ಲು ಪ್ರತಿಮೆ, 17-18ನೇ ಶತಮಾನದ ಪೂರ್ವ ಭಾರತದ ಕಂಚಿನ ಭಗವಾನ್ ವಿಷ್ಣು ಇದರಲ್ಲಿ ಸೇರಿವೆ.
ಈ ಕುರಿತು ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಮೋದಿ, ‘ಸಾಂಸ್ಕೃತಿಕ ಸಂಬಂಧವನ್ನು ಮತ್ತಷ್ಟು ಆಳಗೊಳಿಸುವ ಕ್ಷಣ ಇದು. ಅಲ್ಲೆ, ಸಾಂಸ್ಕೃತಿಕ ಆಸ್ತಿಗಳ ಅಕ್ರಮ ಕಳ್ಳಸಾಗಣೆ ವಿರುದ್ಧದ ಹೋರಾಟದಲ್ಲಿ ಯಶ ಸಿಗುವ ಸಂದರ್ಭ ಇದಾಗಿದೆ. ಭಾರತಕ್ಕೆ 297 ಪ್ರಾಚೀನ ವಸ್ತುಗಳನ್ನು ಮರಳಿಸಿದ ಅಧ್ಯಕ್ಷ ಜೋ ಬೈಡೆನ್ ಮತ್ತು ಅಮೆರಿಕ ಸರ್ಕಾರಕ್ಕೆ ಅತ್ಯಂತ ಆಭಾರಿ’ ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.