ನ್ಯೂಯಾರ್ಕ್ ಮೇಯರ್‌ ಆಗಿ ಭಾರತ ಮೂಲದ ಜೊಹ್ರಾನ್ ಮಮ್ದಾನಿ ಕುರಾನ್‌ ಮೇಲೆ ಕೈಯಿಟ್ಟು ಪ್ರಮಾಣವಚನ ಸ್ವೀಕರಿಸಿದ ದಿನವೇ, ದೇಶದ್ರೋಹಿ ಕಾಯ್ದೆಯಡಿ ಬಂಧಿತನಾಗಿ 5 ವರ್ಷದಿಂದ ಭಾರತದ ರಾಜಧಾನಿ ದಿಲ್ಲಿಯ ಜೈಲಲ್ಲಿರುವ 2020ರ ದೆಹಲಿ ಗಲಭೆ ಆರೋಪಿ ಉಮರ್‌ ಖಾಲಿದ್‌ಗೆ ಪತ್ರ ಬರೆದು, ನೈತಿಕ ಬೆಂಬಲ 

ನ್ಯೂಯಾರ್ಕ್‌ : ಅಮೆರಿಕದ ಪ್ರತಿಷ್ಠಿತ ನಗರವಾದ ನ್ಯೂಯಾರ್ಕ್ ಮೇಯರ್‌ ಆಗಿ ಭಾರತ ಮೂಲದ ಜೊಹ್ರಾನ್ ಮಮ್ದಾನಿ ಕುರಾನ್‌ ಮೇಲೆ ಕೈಯಿಟ್ಟು ಪ್ರಮಾಣವಚನ ಸ್ವೀಕರಿಸಿದ ದಿನವೇ, ದೇಶದ್ರೋಹಿ ಕಾಯ್ದೆಯಡಿ ಬಂಧಿತನಾಗಿ 5 ವರ್ಷದಿಂದ ಭಾರತದ ರಾಜಧಾನಿ ದಿಲ್ಲಿಯ ಜೈಲಲ್ಲಿರುವ 2020ರ ದೆಹಲಿ ಗಲಭೆ ಆರೋಪಿ ಉಮರ್‌ ಖಾಲಿದ್‌ಗೆ ಪತ್ರ ಬರೆದು, ನೈತಿಕ ಬೆಂಬಲ ಸೂಚಿಸಿದ್ದಾರೆ.

ಅಮೆರಿಕದಲ್ಲಿ ತಮ್ಮನ್ನು ಭೇಟಿಯಾದ ಖಾಲಿದ್‌ನ ಪೋಷಕರಿಗೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ಇದು ಸಹಜವಾಗಿಯೇ ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ ಹಾಗೂ ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸದಂತೆ ಮಮ್ದಾನಿಗೆ ಎಚ್ಚರಿಸಿದೆ.

ಮಮ್ದಾನಿ ಪತ್ರದಲ್ಲೇನಿದೆ?:

‘ಪ್ರಿಯ ಉಮರ್, ಕಹಿ ಭಾವನೆ ಮತ್ತು ಅದು ನಮ್ಮ ಆತ್ಮವನ್ನು ನುಂಗಲು ಬಿಡದಿರುವ ಮಹತ್ವದ ಬಗ್ಗೆ ನೀವು ಹೇಳುತ್ತಿದ್ದ ಮಾತುಗಳನ್ನು ನಾನು ಆಗಾಗ ನೆನಪಿಸಿಕೊಳ್ಳುತ್ತೇನೆ. ನಿಮ್ಮ ಹೆತ್ತವರನ್ನು ಭೇಟಿಯಾಗಿದ್ದು ಸಂತೋಷವಾಯಿತು. ನಾವೆಲ್ಲರೂ ನಿಮ್ಮ ಬಗ್ಗೆ ಯೋಚಿಸುತ್ತಿದ್ದೇವೆ’ ಎಂದು ಮಮ್ದಾನಿ ಬರೆದಿದ್ದಾರೆ. ಈ ಪತ್ರವನ್ನು ಖಾಲಿದ್‌ನ ಸಂಗಾತಿ ಬನೋಜ್ಯೋತ್ಸ್ನಾಲಾಹಿರಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾಳೆ.

ಯಾರು ಈ ಉಮರ್‌?

2020ರ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಖಾಲಿದ್‌ನನ್ನು ಬಂಧಿಸಲಾಗಿದೆ. ಕಳೆದ 5 ವರ್ಷಗಳಿಂದ ಈತ ಜೈಲಿನಲ್ಲಿದ್ದಾನೆ. ದೇಶದಲ್ಲಿ ನಡೆದ ಭಾರತೀಯ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಹೋರಾಟದ ವೇಳೆ ದೇಶವಿರೋಧಿ ಚಟುವಟಿಕೆಗೆ ಕುಮ್ಮಕ್ಕು ನೀಡಿದ ಆರೋಪ ಸೇರಿ ಹಲವು ಆರೋಪಗಳು ಈತನ ಮೇಲಿವೆ.