ಕನ್ನಡಪ್ರಭ ವಾರ್ತೆ ಮೈಸೂರು
ನಗರ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಾಪರ್ಟಿ ರಿಟರ್ನ್ ಪೆರೇಡ್ ನಲ್ಲಿ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾತನಾಡಿ, ನಗರ ಪೊಲೀಸ್ ಘಟಕದಿಂದ ಕಳೆದ 6 ತಿಂಗಳಲ್ಲಿ 1 ದರೋಡೆ, 1 ದರೋಡೆಗೆ ಸಂಚು, 4 ಸುಲಿಗೆ, 2 ಸರಗಳ್ಳತನ, 26 ಕನ್ನ ಕಳವು, 9 ಮನೆ ಕಳ್ಳತನ, 3 ಮನೆ ಕೆಲಸದವರಿಂದ ಕಳ್ಳತನ, 57 ವಾಹನ ಕಳ್ಳತನ, 4 ಸಾಮಾನ್ಯ ಕಳ್ಳತನ, 1 ಕರ್ನಾಟಕ ಫಾರೆಸ್ಟ್ ಆಕ್ಟ್ ಸೇರಿದಂತೆ ಒಟ್ಟು 79 ಸ್ವತ್ತು ಕಳವು ಪ್ರಕರಣಗಳು ಹಾಗೂ 1 ವಂಚನೆ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ಎಂದರು.
ಈ ಪ್ರಕರಣಗಳಿಂದ ಒಟ್ಟು 2.96 ಕೋಟಿ ರು. ಮೌಲ್ಯದ ಚಿನ್ನಾಭರಣ, ಬೆಳ್ಳಿ ಪದಾರ್ಥ, 49 ದ್ವಿಚಕ್ರ ವಾಹನಗಳು, 3 ಕಾರು, 1 ಥಾರ್ ಜೀಪ್, 2 ಲಾರಿ, 1 ಗೂಡ್ಸ್ ವಾಹನ, 1 ಆಟೋ, 10.03 ಲಕ್ಷ ಹಣ, 33 ಕೆ.ಜಿ.ಗಂಧದ ಮರದ ತುಂಡುಗಳು ಹಾಗೂ ಇತರೇ ಮಾಲುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಪತ್ತೆಯಾದ ಈ ಪ್ರಕರಣಗಳಲ್ಲಿ ಒಟ್ಟು 82 ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.ಪತ್ತೆಯಾದ ಪ್ರಮುಖ ಪ್ರಕರಣಗಳು:
ಕುವೆಂಪುನಗರ ಠಾಣೆ ಪೊಲೀಸರು 10 ಆರೋಪಿಗಳನ್ನು ಬಂಧಿಸಿ, 9 ಕನ್ನ ಕಳವು, 2 ಮನೆ ಕಳ್ಳತನ, 2 ಕೆಲಸದವರಿಂದ ಕಳ್ಳತನ ಸೇರಿದಂತೆ ಒಟ್ಟು 13 ಪ್ರಕರಣಗಳನ್ನು ಪತ್ತೆ ಮಾಡಿ, 63 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಪದಾರ್ಥ ಹಾಗೂ 9.40 ಲಕ್ಷ ಹಣವನ್ನು ಅಮಾನತ್ತುಪಡಿಸಿಕೊಂಡಿದ್ದಾರೆ.
ಸಿಸಿಬಿ ಘಟಕದ ಪೊಲೀಸರು 7 ಆರೋಪಿಗಳನ್ನು ಬಂಧಿಸಿ, 11 ವಾಹನ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿದ್ದು, 35 ಲಕ್ಷ ಮೌಲ್ಯದ 2 ಲಾರಿ, 1 ಥಾರ್ ಜೀಪ್, 8 ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡಿದ್ದಾರೆ.
ಮೇಟಗಳ್ಳಿ ಠಾಣೆ ಪೊಲೀಸರು 17 ಆರೋಪಿಗಳನ್ನು ಬಂಧಿಸಿ, 1 ಸುಲಿಗೆ, 7 ಕನ್ನ ಕಳವು, 1 ಮನೆ ಕಳವು, 1 ಕೆಲಸದವರಿಂದ ಕಳವು, 2 ವಾಹನ ಕಳವು, 1 ಸಾಮಾನ್ಯ ಕಳವು ಸೇರಿಂದತೆ ಒಟ್ಟು 13 ಪ್ರಕರಣಗಳನ್ನು ಪತ್ತೆ ಮಾಡಿ, 17 ಲಕ್ಷ ಮೌಲ್ಯದ 73 ಗ್ರಾಂ ಚಿನ್ನಾಭರಣ, 447 ಗ್ರಾಂ ಬೆಳ್ಳಿ ಪದಾರ್ಥ, 2 ದ್ವಿಚಕ್ರ ವಾಹನ, 1 ಲ್ಯಾಪ್ ಟಾಪ್, 63 ಸಾವಿರ ಹಣ, ಬ್ಯಾಟರಿಗಳು, ಮೋಟರ್ ಗಳು, ತಾಮ್ರದ ತಂತಿಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಡಿ ಠಾಣೆ ಪೊಲೀಸರು 11 ಆರೋಪಿಗಳನ್ನು ಬಂಧಿಸಿ, 1 ಸುಲಿಗೆ, 13 ವಾಹನ ಕಳ್ಳತನ ಪ್ರಕರಣಗಳು ಸೇರಿದಂತೆ ಒಟ್ಟು 14 ಪ್ರಕರಣಗಳನ್ನು ಪತ್ತೆ ಮಾಡಿ 13.70 ಲಕ್ಷ ಮೌಲ್ಯದ 13 ದ್ವಿಚಕ್ರ ವಾಹನಗಳು ಮತ್ತು ಸುಲಿಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 1 ಮಾರುತಿ ಬಲೆನೋ ಕಾರು, 61 ಗ್ರಾಂ ಬೆಳ್ಳಿ ಪದಾರ್ಥ, 1 ಮೊಬೈಲ್ ಪತ್ತೆ ಮಾಡಿದ್ದಾರೆ.
ಉಳಿದಂತೆ ಇತರೇ ಪೊಲೀಸ್ ಠಾಣೆಗಳಿಂದ ಸಹ ವಿವಿಧ ಸ್ವತ್ತು ಕಳವು ಪ್ರಕರಣಗಳು ಪತ್ತೆಯಾಗಿದ್ದು, ವಿವಿಧ ಮಾಲುಗಳನ್ನು ವಶ ಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
2026ನೇ ಸಾಲಿನಲ್ಲಿ ಒಟ್ಟು 22 ಎನ್.ಡಿ.ಪಿ.ಎಸ್. ಕಾಯ್ದೆ ಪ್ರಕರಣಗಳನ್ನು ದಾಖಲು ಮಾಡಿ, 30 ಕೆ.ಜಿ. 255 ಗ್ರಾಂ ಗಾಂಜಾ ಹಾಗೂ 311 ಗ್ರಾಂ 579 ಮಿ. ಗ್ರಾಂ ಸಿಂಥೆಟಿಕ್ ಮಾದಕ ವಸ್ತುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಜೊತೆಗೆ 102 ಸೇವನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ನಗರದಲ್ಲಿ ಮಾದಕ ವಸ್ತುಗಳ ಮಾರಾಟ, ಸಾಗಾಣೆ, ಸಂಗ್ರಹ ನಿಯಂತ್ರಣ ಸಂಬಂಧ 20250 26ನೇ ಸಾಲಿನಲ್ಲಿ 16 ಎನ್.ಡಿ.ಪಿ.ಎಸ್. ಆರೋಪಿಗಳ ವಿರುದ್ಧ ಗಡಿಪಾರು ಆದೇಶ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು.
24 ಕೆ.ಜಿ. ಗಾಂಜಾ ವಶ:ಉದಯಗಿರಿ ಠಾಣೆ ಪೊಲೀಸರು ರಾಜೀವ್ ನಗರ 2ನೇ ಹಂತದಲ್ಲಿ ವರುಣ್ ಎಂಬಾತನನ್ನು ಮಂಗಳವಾರ ಬಂಧಿಸಿ, ಆತನಿಂದ 24 ಕೆ.ಜಿ. 485 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ ಎಂದರು.