;Resize=(412,232))
ಮೈಸೂರು : ದೇಶಾದ್ಯಂತ ನ್ಯಾಯಾಲಯ, ಶಾಲಾ- ಕಾಲೇಜುಗಳಿಗೆ 1100 ಬಾರಿ ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ವ್ಯಕ್ತಿ ಮೈಸೂರಿನವನು ಎಂದು ಪತ್ತೆಯಾಗಿದ್ದು, ಆತನನ್ನು ದೆಹಲಿ ಪೊಲೀಸರು ಮೈಸೂರಿಗೆ ಆಗಮಿಸಿ ಬಂಧಿಸಿದ್ದಾರೆ. ಮೊಬೈಲ್ ಫೋನ್, ಹಲವು ಸಿಮ್ ಕಾರ್ಡ್‌ಗಳು ಹಾಗೂ ಲ್ಯಾಪ್‌ಟ್ಯಾಪ್ ಅನ್ನು ಆರೋಪಿಯಿಂದ ವಶಪಡಿಸಿಕೊಂಡಿದ್ದಾರೆ.
ಮೈಸೂರಿನ ಬೃಂದಾವನ ಬಡಾವಣೆಯ ಮನೆಯೊಂದರಲ್ಲಿ ವಾಸವಿದ್ದ ಶ್ರೀನಿವಾಸ್ ಅ. ಶ್ರೀನಿವಾಸ್ ಲೂಯಿಸ್ (47) ಎಂಬಾತನೇ ಬಂಧಿತ. ಈತನೇ ದೇಶದೆಲ್ಲೆಡೆ ಸುಮಾರು 1100 ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದ ಎಂಬ ಅಂಶವು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ಕಳೆದ ಕೆಲವು ತಿಂಗಳಿಂದ ಮೈಸೂರು ಸೇರಿದಂತೆ ದೇಶಾದ್ಯಂತ ನ್ಯಾಯಾಲಯಗಳು, ಶಾಲಾ- ಕಾಲೇಜು ಕಟ್ಟಡ, ಸರ್ಕಾರಿ ಕಚೇರಿಗಳಿಗೆ ಮೇಲಿಂದ ಮೇಲೆ ಬೆದರಿಕೆ ಸಂದೇಶಗಳು ಇ- ಮೇಲ್ ಮೂಲಕ ರವಾನೆ ಆಗಿದ್ದವು. ಇ-ಮೇಲ್ ಸೇರಿದಂತೆ ಹಲವು ರೀತಿಯಲ್ಲಿ ಬಾಂಬ್ ಸ್ಫೋಟಿಸುವುದಾಗಿ ಸಂದೇಶಗಳನ್ನು ಈತ ರವಾನಿಸಿದ್ದು, ಈ ಸಂಬಂಧ ವಿವಿಧೆಡೆ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಬೆಂಗಳೂರು ಮೂಲದ ಅವಿವಾಹಿತ ಶ್ರೀನಿವಾಸ್, ಬೃಂದಾವನ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ತಾಯಿಯೊಂದಿಗೆ ವಾಸವಿದ್ದ. ಸ್ನಾತಕೋತ್ತರ ಪದವೀಧರನಾಗಿದ್ದು, ನಿರುದ್ಯೋಗಿಯಾಗಿದ್ದ. ನಿವೃತ್ತ ಸರ್ಕಾರಿ ನೌಕರರಾಗಿದ್ದ ತಾಯಿಯೇ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಶ್ರೀನಿವಾಸ್‌ಗೆ ಸಹೋದರ ಕೂಡ ಇದ್ದು, ಆತ ಬೇರೆಡೆ ವಾಸವಿದ್ದಾರೆ. ಮಾನಸಿಕ ಕ್ಷೋಭೆಗೊಳಗಾಗಿದ್ದ ಆರೋಪಿಯು ಮನೆಯಲ್ಲಿ ಕುಳಿತು ವಿವಿಧ ಕಡೆಗಳಿಗೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಸಂದೇಶ ಕಳಿಸಿ ಆತಂಕ ಸೃಷ್ಟಿಸಿದ್ದ.
ದೆಹಲಿ ಹೈಕೋರ್ಟ್‌ಗೆ ಬಂದ ಹುಸಿ ಬಾಂಬ್ ಬೆದರಿಕೆ ಸಂದೇಶದ ಹಿನ್ನೆಲೆಯಲ್ಲಿ ದಿಲ್ಲಿಯ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿ, ಆರೋಪಿಯ ಜಾಡು ಹಿಡಿದು ಮೈಸೂರಿಗೆ ಆಗಮಿಸಿದ್ದಾರೆ.
ಮೈಸೂರಿನ ವಿವಿ ಪುರಂ ಠಾಣೆಯ ಪೊಲೀಸರ ಸಹಕಾರದೊಂದಿಗೆ ಬೃಂದಾವನ ಬಡಾವಣೆಯ ಮನೆಯ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ ಬಳಿಕ ಆರೋಪಿಯನ್ನು ಬಂಧಿಸಿ, ಆತನ ಕೊಠಡಿಯಲ್ಲಿದ್ದ ಮೊಬೈಲ್, ಲ್ಯಾಪ್ ಟಾಪ್, ಹಲವಾರು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ನಂತರ ಆರೋಪಿಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿದ ದೆಹಲಿ ಪೊಲೀಸರು, ನ್ಯಾಯಾಲಯದ ಅನುಮತಿ ಮೇರೆಗೆ ದೆಹಲಿಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
- ದೇಶದ ಹಲವು ಕೋರ್ಟ್, ಶಾಲಾ- ಕಾಲೇಜು, ಸರ್ಕಾರಿ ಕಚೇರಿಗಳಿಗೆ ಕಳೆದ ಹಲವು ತಿಂಗಳಿಂದ ಹುಸಿ ಬಾಂಬ್ ಕರೆ
- ದೆಹಲಿ ಹೈಕೋರ್ಟ್‌ಗೆ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರಿಂದ ಕೇಸ್ ದಾಖಲು. ಆರೋಪಿಗಾಗಿ ಶೋಧ
- ಆತ ಮೈಸೂರಿನಲ್ಲಿರುವುದು ಪತ್ತೆ. ಇಲ್ಲಿಗೇ ಆಗಮಿಸಿ ಶ್ರೀನಿವಾಸ್ ಎಂಬಾತನ ಬಂಧನ. ಈತ 1100 ಹುಸಿ ಕರೆ ಮಾಡಿದ್ದು ಪತ್ತೆ
- ನಿರುದ್ಯೋಗಿಯಾಗಿದ್ದ ಈತ ನಿವೃತ್ತ ಸರ್ಕಾರಿ ಉದ್ಯೋಗಿಯ ಪುತ್ರ. ತಾಯಿಯ ಪಿಂಚಣಿಯಲ್ಲಿ ಜೀವಿಸುತ್ತಿದ್ದ ಎಂದು ಮಾಹಿತಿ