ಬೆಂಗಳೂರು : ಕ್ರಿಪ್ಟೋ ಕರೆನ್ಸಿ ಬದಲಾವಣೆ ಮಾಡಿಕೊಡುವುದಾಗಿ ನಂಬಿಸಿ ಸಾಫ್ಟ್‌ವೇರ್ ಕಂಪನಿ ಉದ್ಯೋಗಿಯಿಂದ ಹಣ ಸುಲಿಗೆ ಮಾಡಿದ್ದ 12 ಮಂದಿ ವಂಚಕರನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಡಿ.ಜೆ.ಹಳ್ಳಿಯ ಕರೀಂ ಖಾನ್, ವಾಸೀಂ ಖಾನ್, ಮೊಹಮ್ಮದ್ ಇಸ್ಮಾಯಿಲ್, ರೆಹಾನ್, ಸುಹೇಬ್ ಜಾವಿದ್, ಅಯನ್ ಮುಖರ್ಜಿ, ಅಖೀಲ್ ಮೊಹಮ್ಮದ್, ತೌಸಿಫ್, ಇಲಿಯಾತ್ ಷರೀಫ್, ಅಫ್ಜಲ್ ಖಾನ್, ಜಮ್ಮು-ಕಾಶ್ಮೀರದ ಮುಜಾಮಿಲ್ ಹಾಗೂ ಇಮ್ರಾನ್ ಪಾಷ ಬಂಧಿತರಾಗಿದ್ದು, ಆರೋಪಿಗಳಿಂದ 13.90 ಲಕ್ಷ ರು ನಗದು, 6 ಬೈಕ್‌ಗಳು, ಕಾರು ಹಾಗೂ 13 ಮೊಬೈಲ್ ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ಸಾಫ್ಟ್‌ವೇರ್ ಉದ್ಯೋಗಿ ವಿಶ್ವಾಸ್ ಅವರಿಗೆ ಕ್ರಿಪ್ಟೋ ಕರೆನ್ಸಿ ಬದಲಾವಣೆ ನೆಪದಲ್ಲಿ ಕರೆಸಿ ದರೋಡೆ ಮಾಡಿದ್ದರು. ಈ ಕೃತ್ಯದ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆಗಿಳಿದ ಇನ್ಸ್‌ಪೆಕ್ಟರ್ ಎಚ್.ಡಿ.ಅನಿಲ್ ಕುಮಾರ್ ನೇತೃತ್ವದ ತಂಡ, ಮೊಬೈಲ್ ಕರೆಗಳು ಹಾಗೂ ಸಿಸಿಟಿವಿ ದೃಶ್ಯಾವಳಿ ಆಧರಿಸಿ ದರೋಡೆಕೋರರನ್ನು ಸೆರೆ ಹಿಡಿದಿದೆ.
ದಾವಣಗೆರೆ ಜಿಲ್ಲೆಯ ವಿಶ್ವಾಸ್ ಕೊಡಿಗೆಹಳ್ಳಿಯಲ್ಲಿ ತಮ್ಮ ಕುಟುಂಬದ ಜತೆ ನೆಲೆಸಿದ್ದಾರೆ. ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಅವರು, ತಾವು ಸಂಪಾದಿಸಿದ ಹಣ ಬಳಸಿ ತುಮಕೂರು ಜಿಲ್ಲೆ ಶಿರಾ ಸಮೀಪ ಕೆಫೆ ಸ್ಥಾಪನೆಗೆ ಯೋಜಿಸಿದ್ದರು. ಈ ಕೆಫೆಗೆ ಪೀಠೋಪಕರಣ ಖರೀದಿಗೆ ಕ್ರಿಪ್ಟೋ ಕರೆನ್ಸಿಯಲ್ಲಿ ವ್ಯವಹರಿಸಲು ಟೆಕ್ಕಿ ಯತ್ನಿಸಿದ್ದರು. ಆಗ ಅವರಿಗೆ ನೆರವಾಗುವ ಸೋಗಿನಲ್ಲಿ ಕರೆಸಿ ಆರೋಪಿಗಳು ಹಣ ದರೋಡೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೆಫೆಗೆ ಅಗತ್ಯವಿರುವ ಕಿಚನ್ ಟೈಲ್ಸ್, ಕಟ್‌ಲೇರಿ ಹಾಗೂ ಪೀಠೋಪಕರಣ ಸೇರಿದಂತೆ ಇತರೆ ವಸ್ತುಗಳನ್ನು ಖರೀದಿಗೆ ಆನ್‌ಲೈನ್‌ನಲ್ಲಿ ವಿಶ್ವಾಸ್ ಹುಡುಕಾಟ ನಡೆಸಿದ್ದರು. ಆಗ ಜಪಾನ್ ಅಥವಾ ಚೀನಾ ದೇಶಗಳಿಂದ ಕಡಿಮೆ ದರದಲ್ಲಿ ಕೆಫೆ ನಿರ್ಮಾಣದ ವಸ್ತುಗಳು ಸಿಗುತ್ತವೆ. ಆದರೆ ಈ ವ್ಯವಹಾರಕ್ಕೆ ಕ್ರಿಪ್ಟೋ ಕರೆನ್ಸಿ ಮೂಲಕ ಹಣ ಪಾವತಿಸಬೇಕಿದೆ ಎಂದು ವಿಶ್ವಾಸ್ ಅವರಿಗೆ ಅವರ ಸ್ನೇಹಿತನೊಬ್ಬ ಸಲಹೆ ನೀಡಿದ್ದ. ಬಳಿಕ ಆ ಸ್ನೇಹಿತನ ಮೂಲಕ ಕ್ರಿಪ್ಟೊ ಕರೆನ್ಸಿ ಬಗ್ಗೆ ಮಾಹಿತಿ ಪಡೆದು ‘ಕ್ರಿಪ್ಟೋ ಇಂಡಿಯಾ ಎಫ್2ಎಫ್’ ಎಂಬ ವಾಟ್ಸಪ್ ಗ್ರೂಪ್‌ಗೆ ಅವರು ಸೇರಿದ್ದರು. ಆ ವಾಟ್ಸಪ್ ಗ್ರೂಪ್‌ನಲ್ಲಿ ಅವರಿಗೆ ಜಮ್ಮು-ಕಾಶ್ಮೀರದ ಮುಜಾಮಿಲ್ ಪರಿಚಯವಾಗಿದೆ. ಆಗ ಮುಜಾಮಿಲ್ ಮೂಲಕ ವಾಸೀಂ ಸಂಪರ್ಕಕ್ಕೆ ಬಂದಿದ್ದಾನೆ. ಆಗ ಜೂ.8 ರಂದು ವಿಶ್ವಾಸ್ ಅವರ ಮನೆಗೆ ತೆರಳಿ 2.5 ಲಕ್ಷ ರು. ಹಣವನ್ನು ಯುಎಸ್‌ಡಿಟಿ ಕ್ರಿಪ್ಟೋ ಕರೆನ್ಸಿಗೆ ಬದಲಾವಣೆ ಮಾಡಿ ಕೊಟ್ಟಿರುತ್ತಾನೆ. ಅದನ್ನು ನಂಬಿದ ವಿಶ್ವಾಸ್ ಮುಜಾಮಿಲ್‌ನನ್ನು ಮತ್ತೆ ಸಂಪರ್ಕಿಸಿ ತಮಗೆ ಹೆಚ್ಚಿನ ಕ್ಲಿಪ್ಟೊಕರೆನ್ಸಿ ಅವಶ್ಯಕತೆ ಅಗತ್ಯವಿದೆ ಎಂದಿದ್ದಾರೆ. ಆಗ ಹಣ ಬದಲಾಯಿಸಿ ಕೊಡುವುದಾಗಿ ಆತ ಹೇಳಿದ್ದಾನೆ. ಟೆಕ್ಕಿಯಿಂದ ಹಣ ದೋಚಲು ಕರೀಂ ಹಾಗೂ ಆತನ ಸಹಚರರನ್ನು ಮುಜಾಮಿಲ್ ಸಜ್ಜುಗೊಳಿಸಿದ್ದ.
ಜೂ.9 ರಂದು ವಾಟ್ಸಪ್ ಮುಖಾಂತರ ಸಂಪರ್ಕಿಸಿ 17.64 ಲಕ್ಷ ರು.ಹಣವನ್ನು ಕ್ರಿಪ್ಟೋ ಕರೆನ್ಸಿಗೆ ಎಕ್ಸ್‌ಚೆಂಜ್ ಮಾಡಿ ಕೊಡುವಂತೆ ವಿಶ್ವಾಸ್ ಕೇಳಿದ್ದಾರೆ. ಅದೇ ದಿನ ರಾತ್ರಿ ಸಂಜಯನಗರದ ಕಲ್ಪನಾ ಚಾಪ್ಲಾ ರಸ್ತೆಗೆ ಬರಲು ತಿಳಿಸಿದ ಸಂತ್ರಸ್ತನಿಗೆ ಆರೋಪಿಗಳು ಹೇಳಿದ್ದರು. ಆಗ ಹಣ ತೆಗೆದುಕೊಂಡು ತಮ್ಮ ಸೋದರ ಹಾಗೂ ಸ್ನೇಹಿತರೊಂದಿಗೆ ದೂರುದಾರರು ಬಂದಿದ್ದರು. ಆ ವೇಳೆ ವಿಶ್ವಾಸ್ ಹಾಗೂ ಅವರ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಹಣ ದೋಚಿದ್ದರು. ಈ ಬಗ್ಗೆ ಸಂಜಯನಗರ ಠಾಣೆಗೆ ಅವರು ದೂರು ನೀಡಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.