;Resize=(412,232))
ಅಜೀಜ ಅಹ್ಮದ ಬಳಗಾನೂರ
ಹುಬ್ಬಳ್ಳಿ : ಜಿಮ್‌ಗಳ ಅಬ್ಬರದಿಂದ ಪಾರಂಪರಿಕ ವ್ಯಾಯಾಮ ಶಾಲೆ ಎನಿಸಿದ್ದ ಗರಡಿಮನೆ ನೇಪಥ್ಯಕ್ಕೆ ಸರಿಯುತ್ತಿದೆ. ಕಳೆದ 10 ವರ್ಷದಲ್ಲಿ ರಾಜ್ಯದಲ್ಲಿ ಬರೋಬ್ಬರಿ 2000ಕ್ಕೂ ಅಧಿಕ ಗರಡಿಮನೆಗಳು ಬಾಗಿಲು ಮುಚ್ಚಿವೆ!.
ಉತ್ತರ ಕರ್ನಾಟಕ ಭಾಗದಲ್ಲಿ ದಶಕಗಳ ಹಿಂದೆ ಪ್ರತಿ ಗ್ರಾಮದಲ್ಲಿ ಕುಸ್ತಿ ಪೈಲ್ವಾನರು ಕಾಣ ಸಿಗುತ್ತಿದ್ದರು. ಇಂದು ಅವರು ಅಪರೂಪವಾಗಿದ್ದಾರೆ. ಈ ಗರಡಿಮನೆಯಲ್ಲಿ ಕೇವಲ ತಾಲೀಮು ಹೇಳಿಕೊಡದೆ, ಹಿರಿಯರನ್ನು ಹೇಗೆ ಗೌರವಿಸಬೇಕು, ಹೇಗೆ ನಡೆದುಕೊಳ್ಳಬೇಕು ಎಂಬುದರ ಕುರಿತು ಸಂಸ್ಕಾರವನ್ನು ಸಹ ಮೂಡಿಸಲಾಗುತ್ತಿತ್ತು.
10 ವರ್ಷದ ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿಯೇ 3 ಸಾವಿರಕ್ಕೂ ಅಧಿಕ ಗರಡಿಮನೆಗಳಿದ್ದವು. ಆದರೆ, ಇಂದು ಸಾವಿರಕ್ಕೆ ಇಳಿದಿದೆ. ಅವುಗಳಲ್ಲೂ ಶೇ.70ರಷ್ಟು ಬಳಕೆಗೆ ಯೋಗ್ಯವಾಗಿಲ್ಲ. ಇನ್ನುಳಿದ ಶೇ.30ರಷ್ಟು ಗರಡಿಮನೆಗಳಲ್ಲಿ ಮಾತ್ರ ನಿತ್ಯದ ತಾಲೀಮು ನಡೆಯುತ್ತಿದೆ. 10 ವರ್ಷದ ಹಿಂದೆ ಧಾರವಾಡ ಜಿಲ್ಲೆಯೊಂದರಲ್ಲಿಯೇ 400, ಗದಗ 200, ಹಾವೇರಿ 150, ಬೆಳಗಾವಿ ಜಿಲ್ಲೆಯಲ್ಲಿ 370ಕ್ಕೂ ಅಧಿಕ ಗರಡಿಮನೆಗಳಿದ್ದವು. ಆದರೆ, ಇಂದು ಇವುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಮೊದಲು ಗ್ರಾಮೀಣ ಭಾಗಗಳಲ್ಲಿ ಕುಸ್ತಿ, ಭಾರದ ಚೀಲ ಎತ್ತುವ ಸ್ಪರ್ಧೆ, ದೊಡ್ಡ ಕಲ್ಲು ಎತ್ತುವ ಸ್ಪರ್ಧೆ. ಹೀಗೆ ಕಸರತ್ತಿನ ಸ್ಪರ್ಧೆಗಳು ನಡೆಯುತ್ತಿದ್ದವು. ಜಾತ್ರೆ, ಹಬ್ಬ-ಹರಿದಿನಗಳಲ್ಲಿ ಈ ಸ್ಪರ್ಧೆಗಳೇ ಮನೋರಂಜನೆಯ ಹಾಗೂ ಜನಾಕರ್ಷಣೆಯ ಕಾರ್ಯಕ್ರಮಗಳಾಗಿದ್ದವು. ಇವುಗಳಲ್ಲಿ ಭಾಗವಹಿಸುವವರು ಬಹುತೇಕ ಗರಡಿಮನೆಗಳಲ್ಲಿ ತರಬೇತಿ ಹೊಂದಿದವರಾಗಿರುತ್ತಿದ್ದರು. ಮೊದಲೆಲ್ಲ ಒಂದೊಂದು ಊರಿನಲ್ಲೂ ಹತ್ತಾರು ಪೈಲ್ವಾನರು ಕಾಣ ಸಿಗುತ್ತಿದ್ದರು. ಯುವಕರು ಸಂಜೆಯಾಗುತ್ತಿದ್ದಂತೆ ಗ್ರಾಮದ ಗರಡಿಮನೆ ಸೇರಿ ನುರಿತ ಗುರುವಿನ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದರು. ಆದರೆ, ಇಂದು ಪರಿಸ್ಥಿತಿ ಬದಲಾಗಿದೆ. ಗ್ರಾಮೀಣ ಸ್ಪರ್ಧೆಗಳು ಕಣ್ಮರೆಯಾಗುತ್ತಿವೆ. ಮನೋರಂಜನೆಗೆ ಬೇರೆ, ಬೇರೆ ದಾರಿಗಳು ಕಂಡು ಬರುತ್ತಿವೆ. ಹೀಗಾಗಿ, ಗರಡಿಮನೆಗಳು ಹಾಳು ಬಿದ್ದಿವೆ.
ಈಗ ಹಲವು ಗರಡಿಮನೆಗಳಲ್ಲಿ ತರಬೇತಿ ನೀಡುವ ಗುರು (ಉಸ್ತಾದ್)ಗಳೇ ಇಲ್ಲ. ಇದಕ್ಕೆ ಪ್ರಮುಖ ಕಾರಣ ಅವರಿಗೆ ಸರ್ಕಾರದಿಂದ ವೇತನ, ಗೌರವಧನವಿಲ್ಲ. ಮೊದಲೆಲ್ಲ ಓಣಿಯ ಹಿರಿಯರು ಇಂತಿಷ್ಟು ಅಂತ ಉಸ್ತಾದ್‌ಗಳಿಗೆ ಗೌರವಧನ ನೀಡುತ್ತಿದ್ದರು. ಆದರೆ, ಈಗ ಇವರ ಬಗ್ಗೆ ಕಾಳಜಿ ವಹಿಸುವವರೇ ಇಲ್ಲದೆ ಇರುವುದರಿಂದ ಜೀವನ ನಿರ್ವಹಣೆಗೆ ಉಸ್ತಾದ್‌ಗಳು ಅನ್ಯ ಮಾರ್ಗ ಕಂಡುಕೊಂಡಿದ್ದಾರೆ.
ಸದೃಢ ಆರೋಗ್ಯ ಹೊಂದಲು ಗರಡಿಮನೆ ಸಹಕಾರಿಯಾಗಿದೆ. ಸರ್ಕಾರ ಕುಸ್ತಿಯನ್ನು ಕೇವಲ ಕ್ರೀಡೆಯೆಂದು ಭಾವಿಸದೇ ಭಾರತೀಯ ಸಂಸ್ಕೃತಿ ಎಂದು ಪ್ರಚುರ ಪಡಿಸುವ ಕಾರ್ಯವಾಗಬೇಕು. ಗರಡಿಮನೆಗಳ ಉಳಿವಿಗೆ ಹೆಚ್ಚಿನ ಕಾಳಜಿ ವಹಿಸಬೇಕು.
- ಅಶೋಕ ಚಿಲ್ಲಣ್ಣವರ, ಹಿರಿಯ ಕುಸ್ತಿಪಟು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೆಚ್ಚಿನ ಆಸಕ್ತಿ ವಹಿಸಿ ಗರಡಿಮನೆಗಳ ಉಳಿಸುವ ಕಾರ್ಯಕ್ಕೆ ಮುಂದಾಗಬೇಕು. ‘ಗುರುದಕ್ಷಿಣೆ’ ಹೆಸರಲ್ಲಿ ಗರಡಿ ಮನೆಯಲ್ಲಿ ತರಬೇತಿ ನೀಡುವವರಿಗೆ ಸೂಕ್ತ ಗೌರವಧನ ನಿಗದಿಗೊಳಿಸಬೇಕು.
- ರತ್ನಕುಮಾರ ಮಠಪತಿ, ಭಾರತೀಯ ಶೈಲಿ ಕುಸ್ತಿ ಪೈಲ್ವಾನರ ಸಂಘದ ರಾಜ್ಯಾಧ್ಯಕ್ಷ