;Resize=(412,232))
ಬೆಂಗಳೂರು : ತಮ್ಮ ಮಕ್ಕಳಿಗೆ ದ್ವಿಚಕ್ರ ಹಾಗೂ ಕಾರು ಚಲಾಯಿಸಲು ನೀಡುವ ಮುನ್ನ ಪೋಷಕರೇ ಎಚ್ಚರ...!
ಹೊಸಕೋಟೆ ಭೀಕರ ಅಪಘಾತ ಬೆನ್ನಲ್ಲೇ ರಾಜಧಾನಿ ವ್ಯಾಪ್ತಿಯಲ್ಲಿ ಅಪ್ರಾಪ್ತರ ವಾಹನ ಚಾಲನೆ ವಿರುದ್ಧ ಟ್ರಾಫಿಕ್ ಪೊಲೀಸರು ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದು, ಮಕ್ಕಳಿಗೆ ವಾಹನ ನೀಡಿದರೆ ಪೋಷಕರ ಮೇಲೆ ಪೊಲೀಸರು ಕೇಸ್ ಹಾಕಲಿದ್ದಾರೆ...!
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ಅಪ್ರಾಪ್ತರಿಗೆ ವಾಹನ ಚಾಲನೆಗೆ ನೀಡುವುದು ಅಕ್ಷಮ್ಯ ಅಪರಾಧ. ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಸಮೀಪ ಸಂಭವಿಸಿದ ಕಾರು-ಬೈಕ್ ಅಪಘಾತದಲ್ಲಿ ಅಪ್ರಾಪ್ತರು ಮೃತಪಟ್ಟಿದ್ದರು. ಈ ಅಪಘಾತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನಗರದಲ್ಲಿ ಅಪ್ರಾಪ್ತರ ವಾಹನ ಚಾಲನೆ ವಿರುದ್ಧ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ಹೇಳಿದರು.
ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ ನೀಡದಂತೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸಲಾಗಿದೆ. ಹೀಗಿದ್ದರೂ ಕೆಲವರು ಎಚ್ಚೆತ್ತುಕೊಳ್ಳುತ್ತಿಲ್ಲ. ತಮ್ಮ ಮಕ್ಕಳು ವಾಹನಗಳಿಗೆ ವಾಹನ ನೀಡಿ ಪರೋಕ್ಷವಾಗಿ ಪ್ರಾಣ ಹಾನಿಗೂ ಪೋಷಕರು ಕಾರಣರಾಗುತ್ತಿದ್ದಾರೆ. ಇದಕ್ಕೆ ಇತ್ತೀಚೆಗೆ ಹೊಸಕೋಟೆ ಸಮೀಪ ಸಂಭವಿಸಿದ ಅಪಘಾತದಲ್ಲಿ ವಾಹನ ಚಾಲನೆಯಲ್ಲಿ ಅಪ್ರಾಪ್ತರು ಮೃತಪಟ್ಟ ಘಟನೆ ನಿದರ್ಶನವಾಗಿದೆ ಎಂದು ತಿಳಿಸಿದರು.
ಹಿಂದಿನಿಂದಲೂ ಅಪ್ರಾಪ್ತ ಚಾಲನೆ ನಿಯಮ ಉಲ್ಲಂಘನೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಮುಂದೆ ಸಹ ಅಪ್ರಾಪ್ತರ ವಾಹನ ಚಾಲನೆ ಕೃತ್ಯವನ್ನು ಸಹಿಸುವುದಿಲ್ಲ ಎಂದು ಆಯುಕ್ತರು ಗುಡುಗಿದರು.
ಅಪ್ರಾಪ್ತರು ವಾಹನಗಳನ್ನು ಚಲಾಯಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಈ ವಿಶೇಷ ಕಾರ್ಯಾಚರಣೆಯು ಕೇವಲ ಅಪ್ರಾಪ್ತ ಚಾಲಕರುಗಳಿಗೆ ಮಾತ್ರ ಸೀಮಿತವಾಗಿರದೆ ಅವರಿಗೆ ವಾಹನಗಳನ್ನು ನೀಡುವ ಪೋಷಕರ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ಜಂಟಿ ಆಯುಕ್ತ (ಸಂಚಾರ) ಕಾರ್ತಿಕ್ ರೆಡ್ಡಿ ಎಚ್ಚರಿಕೆ ನೀಡಿದರು.
ಅಪ್ರಾಪ್ತ ಚಾಲನೆ ಕಂಡು ಬಂದಲ್ಲಿ ಕೂಡಲೇ ವಾಹನ ಜಪ್ತಿ ಮಾಡಲಾಗುತ್ತದೆ. ಬಳಿಕ ಆ ವಾಹನದ ಮಾಲೀಕರು ಅಥವಾ ಮಕ್ಕಳ ಪೋಷಕರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ. ರಸ್ತೆ ಸುರಕ್ಷತೆ ಎಲ್ಲರ ಹೊಣೆಗಾರಿಕೆ ಆಗಿದ್ದು, ತಮ್ಮ ಮಕ್ಕಳು ಕಾನೂನುಬದ್ಧ ವಯಸ್ಸು ದಾಟುವವರಿಗೆ ಚಾಲನೆಗೆ ಪೋಷಕರು ಅವಕಾಶ ಕೊಡಬಾರದು. ಈ ಬಗ್ಗೆ ಶಾಲಾ-ಕಾಲೇಜು ಆಡಳಿತ ಮಂಡಳಿಗಳು ಸಹ ಜಾಗೃತಿ ಮೂಡಿಸಬೇಕು. ಸಂಚಾರ ನಿಯಮಗಳನ್ನು ನಾಗರಿಕರು ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.
ದ್ವಿಚಕ್ರ ವಾಹನಗಳಲ್ಲಿ ವ್ಹೀಲಿಂಗ್ ನಡೆಸುವವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಕಳೆದ ವರ್ಷ ವ್ಹೀಲಿಂಗ್ ಮಾಡಿದ ಅಪ್ರಾಪ್ತರ ವಿರುದ್ಧ 159 ಪ್ರಕರಣ ದಾಖಲಾಗಿದೆ ಎಂದು ಜಂಟಿ ಆಯುಕ್ತ ಕಾರ್ತಿಕ್ ರೆಡ್ಡಿ ತಿಳಿಸಿದರು.
ವ್ಹೀಲಿಂಗ್ ಸಂಬಂಧ 2023ರಲ್ಲಿ 242 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಅಪ್ರಾಪ್ತರು ಮತ್ತು ಪೋಷಕರ ವಿರುದ್ಧ 70 ಪ್ರಕರಣಗಳು ದಾಖಲಾಗಿವೆ. ಅದೇ ರೀತಿ 2024ರಲ್ಲಿ 532 ಪ್ರಕರಣಗಳಲ್ಲಿ 120 ಅಪ್ರಾಪ್ತರ ಮೇಲೆ ದಾಖಲಾಗಿವೆ. 2025ರಲ್ಲಿ ಒಟ್ಟಾರೆ ವರದಿಯಾದ 646 ಪ್ರಕರಣಗಳಲ್ಲಿ 159 ಪ್ರಕರಣಗಳು ಅಪ್ರಾಪ್ತರಿಗೆ ಸೇರಿವೆ ಎಂದು ವಿವರಿಸಿದರು.
ವಾಹನ ಚಾಲನೆ ವಿರುದ್ಧ ಕೇಸ್
ಕಳೆದ ಮೂರು ವರ್ಷಗಳಲ್ಲಿ ವಾಹನ ಚಾಲನೆ ಮಾಡಿದ ಅಪ್ರಾಪ್ತರ ವಿರುದ್ಧ 706 ಪ್ರಕರಣಗಳು ದಾಖಲಾಗಿವೆ. ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಏರು ಮುಖವಾಗಿದೆ ಎಂದು ಜಂಟಿ ಆಯುಕ್ತರು ಹೇಳಿದ್ದಾರೆ.
2023ರಲ್ಲಿ 95, 2024ರಲ್ಲಿ 197 ಹಾಗೂ 2025ರಲ್ಲಿ 414 ಪ್ರಕರಣಗಳು ವರದಿಯಾಗಿವೆ. ಹೀಗೆ ಪ್ರಕರಣ ದಾಖಲಿಸಿದರೂ ಪೋಷಕರು ಜಾಗೃತರಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.