ಬೆಂಗಳೂರಿನಲ್ಲಿ ಬೀಗ ಮುರಿದು ಮನೆಗಳ್ಳತನ : ಇಬ್ಬರು ಆರೋಪಿಗಳ ಬಂಧನ-ಕಳುವಾದ ಮಾಲುಗಳನ್ನು ವಶ

KannadaprabhaNewsNetwork |  
Published : Sep 14, 2024, 01:55 AM ISTUpdated : Sep 14, 2024, 06:30 AM IST
Man in Jail

ಸಾರಾಂಶ

ಬೆಂಗಳೂರಿನಲ್ಲಿ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ₹31.10 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಕಳುವಾದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.

 ಬೆಂಗಳೂರು : ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ರಾತ್ರಿ ವೇಳೆ ಬೀಗ ಮುರಿದು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಮೂಲದ ರವಿ ಅಲಿಯಾಸ್‌ ಕರಿಯಾ(27) ಮತ್ತು ಮಂಡ್ಯ ಮೂಲದ ಅರುಣ್‌(19) ಬಂಧಿತರು. ಆರೋಪಿಗಳಿಂದ ₹31.10 ಲಕ್ಷ ಮೌಲ್ಯದ 478 ಗ್ರಾಂ ಚಿನ್ನಾಭರಣ, ದ್ವಿಚಕ್ರ ವಾಹನ, ಎರಡು ವಾಚ್‌ ಹಾಗೂ 200 ಗ್ರಾಂ ನಕಲಿ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಹನುಮಂತನಗರ ವ್ಯಾಪ್ತಿಯ ಶ್ರೀನಗರದ ಮಹಿಳೆಯೊಬ್ಬರು ಮೇ 22ರಂದು ಮುಂಜಾನೆ ಎದ್ದು ಮನೆಯ ಬಾಗಿಲು ತೆರೆದು ನೀರು ಹಾಕಿ ಚಿನ್ನದ ಸರವನ್ನು ಬಿಚ್ಚಿ ಹಾಸಿಗೆ ಮೇಲಿಟ್ಟು ಸ್ನಾನಕ್ಕೆ ತೆರಳಿದ್ದರು. ಇವರು ಮಗ-ಸೊಸೆ ಬೇರೆ ಕೊಠಡಿಯಲ್ಲಿ ಮಲಗಿದ್ದರು. ಮಹಿಳೆ ಸ್ನಾನ ಮುಗಿಸಿ ಹಾಸಿಗೆ ಬಳಿ ಬಂದು ನೋಡಿದಾಗ ಚಿನ್ನದ ಸರ ಕಳುವಾಗಿರುವುದು ಕಂಡು ಬಂದಿದೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ವಿವಿಧ ಆಯಾಮಗಳಲ್ಲಿ ತನಿಖೆಗೆ ಮುಂದಾದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಬಾತ್ಮೀದಾರರು ನೀಡಿದ ಸುಳಿವಿನ ಮೇರೆಗೆ ಶ್ರೀನಗರದ ಬಸ್‌ ನಿಲ್ದಾಣದ ಬಳಿ ಇಬ್ಬರು ವ್ಯಕ್ತಿಗಳನ್ನು ದ್ವಿಚಕ್ರ ವಾಹನ ಹಾಗೂ 20 ಗ್ರಾಂ ತೂಕದ ಚಿನ್ನದ ಸರ ಸಹಿತ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಾವೇ ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ

ಫೈನಾನ್ಸ್‌ನಲ್ಲಿ ಅಡಮಾನ, ಅಂಗಡಿಗಳಲ್ಲಿ ಮಾರಾಟ

ಹೆಚ್ಚಿನ ವಿಚಾರಣೆ ವೇಳೆ ಆರೋಪಿಗಳು ಮೋಜು-ಮಸ್ತಿಗೆ ಸುಲಭವಾಗಿ ಹಣ ಹೊಂದಿಸಲು ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ರಾತ್ರಿ ವೇಳೆ ಬೀಗ ಮುರಿದು ಕಳವು ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಈ ಹಿಂದೆ ಕಳವು ಮಾಡಿ ಮಾರಾಟ ಹಾಗೂ ಅಡಮಾನವಿರಿಸಿದ್ದ ಚಿನ್ನಾಭರಣಗಳನ್ನು ಮೈಸೂರು ಜಿಲ್ಲೆ ಮತ್ತು ಮಂಡ್ಯ ಜಿಲ್ಲೆಯ ವಿವಿಧ ಫೈನಾನ್ಸ್‌ ಕಂಪನಿಗಳು ಹಾಗೂ ಜುವೆಲರಿ ಅಂಗಡಿಗಳಲ್ಲಿ ಜಪ್ತಿ ಮಾಡಲಾಗಿದೆ.

ಆರೋಪಿಗಳ ಬಂಧನದಿಂದ ಹನುಮಂತನಗರ, ಮೈಸೂರಿನ ವಿಜಯನಗರ, ಜಯಪುರ, ಇಲವಾಳ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ ತಲಾ ಒಂದು ಸೇರಿದಂತೆ ಒಟ್ಟು ನಾಲ್ಕು ಮನೆಗಳವು ಪ್ರಕರಣಗಳು ಪತ್ತೆಯಾಗಿವೆ. ಸದ್ಯ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

24 ಕ್ಯಾರೆಟ್ ಶುದ್ಧ ಚಿನ್ನದ ಹೆಸರಲ್ಲಿ ಟೋಪಿ ಹಾಕಿದವ ಬಂಧನ : 30 ಲಕ್ಷ ರು. ಮೌಲ್ಯದ ವಸ್ತು ಜಪ್ತಿ
ಮಾದಕವಸ್ತು ಮಾರಾಟ ದಂಧೆಯಲ್ಲಿ ತೋಡಗಿದ್ದ ವಿದೇಶಿ ಮಹಿಳೆಯರಿಬ್ಬರ ಬಂಧನ