ಆನ್‌ಲೈನ್‌ ಜೂಜಾಟದ ವ್ಯಸನಕ್ಕೆ ಬಿದ್ದು ವಿಪರೀತ ಸಾಲ ಮಾಡಿಕೊಂಡಿದ್ದ ಯುವಕ - ತನ್ನ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ

KannadaprabhaNewsNetwork | Updated : Sep 14 2024, 06:32 AM IST

ಸಾರಾಂಶ

ಆನ್‌ಲೈನ್‌ ಜೂಜಾಟದ ವ್ಯಸನಕ್ಕೆ ಬಿದ್ದು ವಿಪರೀತ ಸಾಲ ಮಾಡಿಕೊಂಡಿದ್ದ ಯುವಕನೋರ್ವ ತನ್ನ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೊಮ್ಮನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ₹7 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

 ಬೆಂಗಳೂರು :  ಆನ್‌ಲೈನ್‌ ಜೂಜಾಟದ ವ್ಯಸನಕ್ಕೆ ಬಿದ್ದು ವಿಪರೀತ ಸಾಲ ಮಾಡಿಕೊಂಡು ತನ್ನ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೊಮ್ಮನಹಳ್ಳಿ ವಿರಾಟನಗರದ ಆದಿತ್ಯ ರೆಡ್ಡಿ(22) ಬಂಧಿತ. ಆರೋಪಿಯಿಂದ ₹7 ಲಕ್ಷ ಮೌಲ್ಯದ 107 ಗ್ರಾಂ ಚಿನ್ನಾಭರಣಗಳು ಹಾಗೂ 100 ಗ್ರಾಂ ತೂಕದ ಬೆಳ್ಳಿಯ ದೇವರ ಮುಖವಾಡ ಜಪ್ತಿ ಮಾಡಲಾಗಿದೆ.

ಆರೋಪಿಯ ತಂದೆ-ತಾಯಿ ಹಿರಿಯ ಮಗನ ವಿವಾಹ ನಿಶ್ಚಯವಾಗಿದ್ದ ಹಿನ್ನೆಲೆಯಲ್ಲಿ ಆ.28ರಂದು ಸಂಬಂಧಿಕರು ಹಾಗೂ ಸ್ನೇಹಿತರಿಗೆ ಲಗ್ನ ಪತ್ರಿಕೆ ಹಂಚಲು ಹೊರಗೆ ಹೋಗಿದ್ದರು. ಈ ವೇಳೆ ಮನೆಯಲ್ಲೇ ಇದ್ದ ಕಿರಿಯ ಮಗ ಆದಿತ್ಯ ರೆಡ್ಡಿ ಲಾಕರ್‌ ಮುರಿದು ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಇನ್‌ಸ್ಪೆಕ್ಟರ್‌ ಪ್ರೀತಮ್‌ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ದೂರು ದಾಖಲಾದ ಆರು ತಾಸಿನೊಳಗೆ ಆರೋಪಿಯನ್ನು ಪತ್ತೆಹಚ್ಚಿ ಮಾಲು ಸಹಿತ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ಆರೋಪಿ ಆದಿತ್ಯ ರೆಡ್ಡಿ ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿದ್ದಾನೆ. ತಂದೆ-ತಾಯಿ ಹಾಗೂ ಸಹೋದರನ ಜತೆಗೆ ಬೊಮ್ಮನಹಳ್ಳಿಯ ವಿರಾಟನಗರದಲ್ಲಿ ನೆಲೆಸಿದ್ದ. ಆನ್‌ಲೈನ್‌ ಜೂಜಾಟದ ವ್ಯಸನಕ್ಕೆ ಬಿದ್ದಿದ್ದ ಆದಿತ್ಯ ವಿಪರೀತ ಸಾಲ ಮಾಡಿಕೊಂಡಿದ್ದ. ಈ ನಡುವೆ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಸಹೋದರನ ಮದುವೆ ನಿಶ್ಚಯವಾಗಿದ್ದು, ಮದುವೆಗಾಗಿ ತಂದೆ-ತಾಯಿ ಚಿನ್ನಾಭರಣ ಖರೀದಿಸಿ ಮನೆಯ ಲಾಕರ್‌ನಲ್ಲಿ ಇರಿಸಿದ್ದರು.

ತಂದೆ-ತಾಯಿ ಆ.28ರಂದು ಸಂಬಂಧಿಕರು ಹಾಗೂ ಸ್ನೇಹಿತರಿಗೆ ಲಗ್ನ ಪತ್ರಿಕೆ ಹಂಚಲು ಮನೆಯಿಂದ ಹೊರಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಆದಿತ್ಯ ಮಾತ್ರ ಇದ್ದ. ತಂದೆ-ತಾಯಿ ಸಂಜೆ ಮನೆಗೆ ವಾಪಾಸ್‌ ಬಂದು ನೋಡಿದಾಗ ಲಾಕರ್‌ ಮುರಿದಿರುವುದು ಕಂಡು ಬಂದಿದೆ. ಪರಿಶೀಲಿಸಿದಾಗ, 107 ಗ್ರಾಂ ಚಿನ್ನಾಭರಣ, 100 ಗ್ರಾಂ ತೂಕದ ಬೆಳ್ಳಿಯ ದೇವರ ಮುಖಡ ಹಾಗೂ ₹45 ಸಾವಿರ ನಗದು ಕಳುವಾಗಿರುವುದು ಕಂಡು ಬಂದಿದೆ. ಕೂಡಲೇ ಬೊಮ್ಮನಹಳ್ಳಿ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಯಲಹಂಕ ರೈಲು ನಿಲ್ದಾಣದಲ್ಲಿ ಆರೋಪಿ ಪತ್ತೆ:

ಈ ದೂರಿನ ಮೇರೆಗೆ ತನಿಖೆಗೆ ಇಳಿದ ಪೊಲೀಸರು, ಘಟನಾ ಸ್ಥಳ ಪರಿಶೀಲನೆ ಮಾಡಿದಾಗ, ಮನೆಯ ಬಾಗಿಲು ಮುರಿದಿರಲಿಲ್ಲ. ಆದರೆ, ರೂಮ್‌ನಲ್ಲಿನ ಬೀರುವಿನ ಲಾಕರ್‌ ಮಾತ್ರ ಮುರಿದಿರುವುದು ಕಂಡು ಬಂದಿದೆ. ಈ ಬಗ್ಗೆ ದೂರುದಾರರ ಕಿರಿಯ ಪುತ್ರನ ಬಗ್ಗೆ ಅನುಮಾನಗೊಂಡ ಪೊಲೀಸರು, ಆತನ ಮೊಬೈಲ್‌ಗೆ ಲೊಕೇಶನ್‌ ಪರಿಶೀಲನೆ ಮಾಡಿದಾಗ, ಯಲಹಂಕ ರೈಲು ನಿಲ್ದಾಣ ತೋರಿಸಿದೆ. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಯಲಹಂಕ ರೈಲು ನಿಲ್ದಾಣಕ್ಕೆ ತೆರಳಿ ಮಾಲು ಸಹಿತ ಆದಿತ್ಯ ರೆಡ್ಡಿಯನ್ನು ವಶಕ್ಕೆ ಪಡೆದಿದ್ದಾರೆ.

ಆನ್‌ಲೈನ್‌ ಜೂಜಾಟಕ್ಕಾಗಿ ಕಳವು:

ಬಳಿಕ ಆರೋಪಿ ಆದಿತ್ಯನನ್ನು ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ, ಆನ್‌ಲೈನ್‌ ಬೆಟ್ಟಿಂಗ್‌ ಚಟದಿಂದ ವಿಪರೀತ ಸಾಲ ಮಾಡಿಕೊಂಡಿದ್ದ ವಿಚಾರ ಬೆಳಕಿಗೆ ಬಂದಿದೆ. ಸಾಲ ತೀರಿಸಲು ಹಾಗೂ ಆನ್‌ಲೈನ್‌ ಜೂಜಾಟಕ್ಕೆ ಹಣದ ಅವಶ್ಯಕತೆ ಇದ್ದ ಹಿನ್ನೆಲೆಯಲ್ಲಿ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದಾಗಿ ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.-ಬಾಕ್ಸ್‌-

ಹೈದರಾಬಾದ್‌ಗೆ ಎಸ್ಕೇಪ್‌ ಯತ್ನ

ಆರೋಪಿ ಆದಿತ್ಯ ಮನೆಯಲ್ಲಿ ಚಿನ್ನಾಭರಣ ಕದ್ದ ಬಳಿಕ ನೇರ ಯಲಹಂಕ ರೈಲು ನಿಲ್ದಾಣಕ್ಕೆ ಬಂದಿದ್ದಾನೆ. ಹೈದರಾಬಾದ್‌ಗೆ ಎಸ್ಕೇಪ್‌ ಆಗಿ ಕೆಲ ದಿನ ಅಲ್ಲೇ ಉಳಿದುಕೊಳ್ಳಲು ನಿರ್ಧರಿಸಿದ್ದ. ಹೀಗಾಗಿ ರೈಲಿನಲ್ಲಿ ಹೈದರಾಬಾದ್‌ಗೆ ತೆರಳಲು ಯಲಹಂಕ ರೈಲು ನಿಲ್ದಾಣದಕ್ಕೆ ಬಂದಿದ್ದ. ಅಷ್ಟರಲ್ಲಿ ಆರೋಪಿಯ ಮೊಬೈಲ್‌ ಲೋಕೇಶನ್‌ ಸುಳಿವು ಆಧರಿಸಿದ ಪೊಲೀಸರು, ಕೂಡಲೇ ರೈಲು ನಿಲ್ದಾಣಕ್ಕೆ ಬಂದು ಆದಿತ್ಯನನ್ನು ಬಂಧಿಸಿದ್ದಾರೆ.

Share this article