ಡಿಶ್‌ ರಿಪೇರಿ ನೆಪದಲ್ಲಿ ಕಳ್ಳತನ : ಆರೋಪಿ ಬಂಧಿಸಿ 20 ಲಕ್ಷ ಮೌಲ್ಯದ ಚಿನ್ನಾಭರಣ ವಶ

KannadaprabhaNewsNetwork |  
Published : Sep 14, 2024, 01:50 AM ISTUpdated : Sep 14, 2024, 06:36 AM IST
ಚಿನ್ನ | Kannada Prabha

ಸಾರಾಂಶ

ಟಿವಿ ಡಿಶ್‌ ಕೇಬಲ್‌ ರಿಪೇರಿ ಮಾಡುವ ನೆಪದಲ್ಲಿ ಮನೆಯೊಂದಕ್ಕೆ ನುಗ್ಗಿ 20 ಲಕ್ಷ ರು. ಮೌಲ್ಯದ 300 ಗ್ರಾಂ ಚಿನ್ನಾಭರಣ ಮತ್ತು ಒಂದು ಕೆ.ಜಿ. ಬೆಳ್ಳಿ ವಸ್ತುಗಳನ್ನು ದೋಚಿದ್ದ ಆರೋಪಿಯನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ಟಿವಿ ಡಿಶ್‌ ಕೇಬಲ್‌ ರಿಪೇರಿ ನೆಪದಲ್ಲಿ ಮನೆಯೊಂದರಲ್ಲಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತುಮಕೂರಿನ ಕ್ಯಾತಸಂದ್ರ ನಿವಾಸಿ ನಾಗರಾಜ್‌ ಅಲಿಯಾಸ್‌ ರಿಹಾನ್‌(32) ಬಂಧಿತ. ಆರೋಪಿಯಿಂದ 20 ಲಕ್ಷ ರು. ಮೌಲ್ಯದ 300 ಗ್ರಾಂ ಚಿನ್ನಾಭರಣ ಹಾಗೂ ಒಂದು ಕೆ.ಜಿ.ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕಳೆದ ವರ್ಷ ಬ್ಯಾಡರಹಳ್ಳಿಯ ಚೇತನ್‌ ಸರ್ಕಲ್‌ ಬಳಿ ಮನೆಯೊಂದರಲ್ಲಿ ನಡೆದಿದ್ದ ಕಳ್ಳತನ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ಆರೋಪಿ ನಾಗರಾಜ್‌ 2023ರ ನವೆಂಬರ್‌ನಲ್ಲಿ ಬ್ಯಾಡರಹಳ್ಳಿಯ ಚೇತನ ಸರ್ಕಲ್ ಬಳಿಯ ಮನೆಯೊಂದರ ಸದಸ್ಯರ ಚಲನವಲನಗಳ ಮೇಲೆ ನಿಗಾವಹಿಸಿ ಕಳ್ಳತನಕ್ಕೆ ಸಂಚು ರೂಪಿಸಿದ್ದ. ನ.10ರಂದು ಮನೆಯ ಸದಸ್ಯರು ಕೆಲಸಕ್ಕೆ ಹೋಗುವ ತನಕ ಕಾದಿದ್ದ. ಬಳಿಕ ಮಧ್ಯಾಹ್ನ 3 ಗಂಟೆಗೆ ಆ ಮನೆಯ ಬಾಲಕ ಶಾಲೆ ಮುಗಿಸಿ ಮನೆಗೆ ವಾಪಾಸ್‌ ಬಂದಿದ್ದಾನೆ. ಈ ವೇಳೆ ಡಿಶ್‌ ಕೇಬಲ್‌ ರಿಪೇರಿ ಮಾಡುವವನ ಸೋಗಿನಲ್ಲಿ ಮನೆಗೆ ಬಂದಿದ್ದ ಆರೋಪಿಯು, ನಿಮ್ಮ ತಂದೆ ಡಿಶ್‌ ಕೇಬಲ್‌ ರಿಪೇರಿ ಮಾಡಲು ಹೇಳಿದ್ದಾರೆ ಎಂದಿದ್ದಾನೆ.

ಬಾಲಕನ ಮಹಡಿಗೆ ಬಿಟ್ಟು ಕಳವು ಮಾಡಿ ಪರಾರಿ:

ಈತನ ಮಾತು ನಂಬಿದ ಬಾಲಕ ಆರೋಪಿಯನ್ನು ಮನೆಯೊಳಗೆ ಬಿಟ್ಟುಕೊಂಡಿದ್ದಾನೆ. ಈ ವೇಳೆ ಡಿಶ್‌ ಕೇಬಲ್‌ ಪರಿಶೀಲಿಸುವ ನೆಪದಲ್ಲಿ ಸ್ವಲ್ಪ ಹೊತ್ತು ನಾಟಕ ಮಾಡಿ ಬಳಿಕ ಬಾಲಕನನ್ನು ಮನೆಯ ಮಹಡಿಗೆ ಕರೆದೊಯ್ದಿದ್ದಾನೆ. ಕೇಬಲ್‌ ಹಿಡಿದುಕೊಳ್ಳುವಂತೆ ಬಾಲಕನಿಗೆ ಸೂಚಿಸಿ, ಆರೋಪಿಯು ಮನೆಗೆ ಒಳಗೆ ಬಂದಿದ್ದಾನೆ. ಈ ವೇಳೆ ಮನೆಯ ಕೊಠಡಿಯ ಬೀರುವಿನಲ್ಲಿದ್ದ 15 ಗ್ರಾಂ ಚಿನ್ನಾಭರಣ, 460 ಗ್ರಾಂ ಬೆಳ್ಳಿವಸ್ತುಗಳು ಹಾಗೂ 35 ಸಾವಿರ ರು. ನಗದು ದೋಚಿ ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ತನಿಖೆ ಕೈಗೊಂಡಿದ್ದರು.

ಬೆರಳಚ್ಚು ನೀಡಿದ ಸುಳಿವು:

ತನಿಖೆ ಭಾಗವಾಗಿ ಪೊಲೀಸರು ಬೆರಳಚ್ಚು ತಜ್ಞರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳನ್ನು ಘಟನಾ ಸ್ಥಳಕ್ಕೆ ಕರೆಸಿಕೊಂಡು ಪರಿಶೀಲಿಸಿದಾಗ, ಸ್ಥಳದಲ್ಲಿ ವೃತ್ತಿಪರ ಕಳ್ಳ ನಾಗರಾಜ್‌ನ ಬೆರಳಚ್ಚು ಪತ್ತೆಯಾಗಿತ್ತು. ಈ ಸುಳಿವಿನ ಮೇರೆಗೆ ಪೊಲೀಸರು ಆರೋಪಿಯ ಪತ್ತೆಗೆ ಹುಡುಕಾಟ ಮುಂದುವರೆಸಿದ್ದರು. ಆದರೂ ಕಳೆದ 10 ತಿಂಗಳಿಂದ ಪೊಲೀಸರ ಕೈಗೆ ಸಿಗದೆ ಆರೋಪಿ ನಾಗರಾಜ್‌ ತಲೆಮರೆಸಿಕೊಂಡಿದ್ದ. ಇತ್ತೀಚೆಗೆ ನೈಸ್‌ ರಸ್ತೆಯ ಕೊಡಿಗೆಹಳ್ಳಿ ಬ್ರಿಡ್ಜ್‌ ಸಮೀಪ ಆರೋಪಿ ಓಡಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯು ವಿಚಾರಣೆ ವೇಳೆ ತಾನೇ ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಕಳವು ಮಾಲುಗಳನ್ನು ಲಗ್ಗೆರೆ ಮತ್ತು ಇಂದಿರಾನಗರ ಜುವೆಲರಿ ಅಂಗಡಿಗಳಲ್ಲಿ ಮಾರಾಟ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ಈತ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಈ ಜುಲವೆರಿ ಅಂಗಡಿಗಳಲ್ಲಿ ಕಳವು ಮಾಲು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ವರ್ಷದ ಹಿಂದೆ ಇಸ್ಲಾಂಗೆ ಮತಾಂತರ!

ಆರೋಪಿ ನಾಗರಾಜ್‌ ಎರಡು ವರ್ಷಗಳ ಹಿಂದೆ ಮುಸ್ಲಿಂ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ. ಆಕೆಯ ಒತ್ತಾಸೆಗೆ ಮಣಿದು ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದ. ಜತೆಗೆ ತನ್ನ ಹೆಸರನ್ನು ರಿಹಾನ್‌ ಎಂದು ಬದಲಿಸಿಕೊಂಡಿದ್ದ. ಈತನ ಅಪರಾಧ ಕೃತ್ಯಗಳಿಗೆ ಪತ್ನಿಯೂ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಳು. ಈತ ಕಳವು ಮಾಡಿದ ಮಾಲುಗಳನ್ನು ವಿಲೇರಿ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಈ ಸಂಬಂಧ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!