ಸ್ನೇಹಿತರ ಜತೆ ಹುಟ್ಟುಹಬ್ಬ ಆಚರಿಸಿಕೊಂಡು ಮರಳುವಾಗ ಸಂಭವಿಸಿದ ಭೀಕರ ಅಪಘಾತಕ್ಕೆ 3 ವಿದ್ಯಾರ್ಥಿಗಳು ಬಲಿ

KannadaprabhaNewsNetwork |  
Published : Sep 13, 2024, 01:41 AM ISTUpdated : Sep 13, 2024, 06:03 AM IST
Hathras road accident

ಸಾರಾಂಶ

ತನ್ನ ಸ್ನೇಹಿತರ ಜತೆ ಹುಟ್ಟುಹಬ್ಬ ಆಚರಿಸಿಕೊಂಡು ಮರಳುವಾಗ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

 ಬೆಂಗಳೂರು :  ತನ್ನ ಸ್ನೇಹಿತರ ಜತೆ ಹುಟ್ಟುಹಬ್ಬ ಆಚರಿಸಿಕೊಂಡು ಮರಳುವಾಗ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ತೋಟಗಾರಿಕೆ ವಿವಿಯ ಮೂವರು ಪದವಿ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಬುಧವಾರ ರಾತ್ರಿ ನಡೆದಿದೆ.

ಯಲಹಂಕ ಸಮೀಪ ಜಿಕೆವಿಕೆ ಆವರಣದಲ್ಲಿರುವ ಬಾಗಲಕೋಟೆಯ ತೋಟಗಾರಿಕೆ ವಿವಿಯ ವಿದ್ಯಾರ್ಥಿಗಳಾದ ರೋಹಿತ್‌ (21), ಹರ್ಷವರ್ಧನ್‌ (22) ಹಾಗೂ ಸುಜಿತ್ (22) ಮೃತ ದುರ್ದೈವಿಗಳು. ಸಾದರಹಳ್ಳಿ ಟೋಲ್ ಗೇಟ್ ಸಮೀಪ ಡಾಬಾದಲ್ಲಿ ತನ್ನ ಗೆಳೆಯರ ಜತೆ ಸುಜಿತ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದ. ಈ ಬರ್ತ್ ಡೇ ಪಾರ್ಟಿ ಮುಗಿಸಿಕೊಂಡು ಮರಳುವಾಗ ರಾತ್ರಿ 1ರ ಸುಮಾರಿಗೆ ಚಿಕ್ಕಜಾಲ ಸಮೀಪದ ಡ್ಯಾಶ್‌ ಸ್ವ್ಕಾಯರ್‌ ಮುಂದೆ ಬೈಕ್‌ ಅಪಘಾತಕ್ಕೀಡಾಗಿದೆ.

ಈ ಅವಘಡದ ಬಳಿಕ ತಪ್ಪಿಸಿಕೊಂಡಿದ್ದ ಲಾರಿಯನ್ನು ತಾಂತ್ರಿಕ ಮಾಹಿತಿ ಆಧರಿಸಿ ಚಿಕ್ಕಜಾಲ ಸಂಚಾರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚೆಲ್ಲಾಪಿಲ್ಲಿಯಾಗಿದ್ದ ಮೃತದೇಹಗಳು:

ಅಂತಿಮ ವರ್ಷದ ಬಿಎಸ್ಸಿಯಲ್ಲಿ ಹೆಬ್ಬಾಳದ ರೋಹಿತ್‌, ಚಿಕ್ಕಬಳ್ಳಾಪುರ ಜಿಲ್ಲೆಯ ಸುಜಿತ್‌ ಹಾಗೂ ಕೋಲಾರ ಜಿಲ್ಲೆ ಶ್ರೀನಿವಾಪುರ ತಾಲೂಕಿನ ಹರ್ಷ ಓದುತ್ತಿದ್ದರು. ಅದೇ ಹಾಸ್ಟೆಲ್‌ನಲ್ಲಿ ರೋಹಿತ್ ಹಾಗೂ ಹರ್ಷ ನೆಲೆಸಿದ್ದರು. ಗೆಳೆಯರ ಜತೆ ಹುಟ್ಟುಹಬ್ಬ ಆಚರಿಸಲು ಸುಜಿತ್ ವಿಮಾನ ನಿಲ್ದಾಣ ರಸ್ತೆಯ ಸಾದರಹಳ್ಳಿ ಗೇಟ್ ಸಮೀಪದ ಡಾಬಾಕ್ಕೆ ಎರಡು ಬೈಕ್‌ಗಳಲ್ಲಿ ಐವರು ಗೆಳೆಯರೊಂದಿಗೆ ಹೋಗಿದ್ದಾರೆ. ಒಂದೇ ಬೈಕ್‌ನಲ್ಲಿ ಹರ್ಷ, ಸುಜಿತ್ ಹಾಗೂ ರೋಹಿತ್‌ ತ್ರಿಬಲ್‌ ರೈಡಿಂಗ್‌ನಲ್ಲಿ ಹೋಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪಾರ್ಟಿ ಮುಗಿಸಿ ಮರಳುವಾಗ ಅವರ ಬೈಕ್‌ಗೆ ಚಿಕ್ಕಜಾಲದ ಡ್ಯಾಶ್ ಸ್ಕ್ವಾಯರ್‌ ಮುಂದೆ ಕಲ್ಲು ಸಾಗಾಣಿಕೆ ಲಾರಿ ಡಿಕ್ಕಿಯಾಗಿದೆ. ಈ ಅಪಘಾತದ ತೀವ್ರತೆಗೆ ಈ ಮೂವರು ವಿದ್ಯಾರ್ಥಿಗಳ ದೇಹಗಳು ಛಿದ್ರ ಛಿದ್ರವಾಗಿ ರಸ್ತೆಯಲ್ಲಿ ಬಿದ್ದಿದೆ. ಕೆಲ ಹೊತ್ತಿನ ಬಳಿಕ ಮತ್ತೊಂದು ಲಾರಿ ಚಾಲಕ, ಅಪಘಾತವಾಗಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಮೃತದೇಹಗಳನ್ನು ಆಯ್ದು ಮೂಟೆಗೆ ತುಂಬಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಸಂಬಂಧ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡುಗಪ್ಪು ಬಣ್ಣದ ಬಟ್ಟೆ ಧರಿಸಿದ್ದರಿಂದ ಸಾವು?

ಬೈಕ್‌ಗೆ ಲಾರಿ ಡಿಕ್ಕಿಯಾಗಿದೆಯೇ ಅಥವಾ ಹಿಂದಿನಿಂದ ಲಾರಿಗೆ ಬೈಕ್‌ ಡಿಕ್ಕಿಯಾಗಿದೆಯೋ ಎಂಬುದು ಖಚಿತವಾಗಿಲ್ಲ. ಅಪಘಾತಕ್ಕೀಡಾದ ಬೈಕ್‌ನ ಹಿಂದಿನ ಭಾಗದಲ್ಲಿ ಯಾವುದೇ ಹಾನಿಯಾಗಿಲ್ಲ. ಮುಂದೆ ನಜ್ಜುಗುಜ್ಜಾಗಿದೆ. ಹೀಗಾಗಿ ಲಾರಿಗೆ ಹಿಂದಿನಿಂದ ಅತಿವೇಗದಲ್ಲಿ ಸವಾರನ ನಿಯಂತ್ರಣ ತಪ್ಪಿ ಬೈಕ್ ಅಪ್ಪಳಿಸಿರಬಹುದು. ಆ ಗುದ್ದಿದ ರಭಸಕ್ಕೆ ಮೇಲಕ್ಕೆ ಹಾರಿ ವಿದ್ಯಾರ್ಥಿಗಳು ಕೆಳಗೆ ಬಿದ್ದಿದ್ದಾರೆ. ಅದೇ ವೇಳೆ ಬಂದ ಇತರೆ ವಾಹನಗಳು ವಿದ್ಯಾರ್ಥಿಗಳ ಮೇಲೆ ಹರಿದು ಹೋಗಿರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ವಿದ್ಯಾರ್ಥಿಗಳು ಕಡುಗಪ್ಪು ಬಣ್ಣದ ಉಡುಪುಗಳನ್ನು ಧರಿಸಿದ್ದ ಕಾರಣಕ್ಕೆ ರಸ್ತೆಯಲ್ಲಿ ಯಾವುದೋ ಬಟ್ಟೆ ಬಿದ್ದಿದೆ ಎಂದು ಭಾವಿಸಿ ಮೃತದೇಹಗಳ ಮೇಲೆಯೇ ವಾಹನಗಳು ಚಲಿಸಿವೆ. ಇದರಿಂದ ದೇಹಗಳು ಛಿದ್ರ ಛಿದ್ರವಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ಸಂಬಂಧ ಕೆಐಎ ರಸ್ತೆಯ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಆಧರಿಸಿ ಲಾರಿಯೊಂದನ್ನು ಪತ್ತೆ ಹಚ್ಚಲಾಗಿದೆ. ಮೃತದೇಹಗಳ ಮೇಲೆ ಆ ಲಾರಿ ಹರಿದಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಯಿಗೆ ಕರೆ ಮಾಡಿದ್ದ ಸುಜಿತ್

ಸ್ನೇಹಿತರ ಜತೆ ಪಾರ್ಟಿಗೆ ತೆರಳುವ ಮುನ್ನ ತನ್ನ ತಾಯಿ ಜತೆ ರಾತ್ರಿ 9 ಗಂಟೆ ಸುಮಾರಿಗೆ ಕರೆ ಮಾಡಿ ಸುಜಿತ್‌ ಮಾತನಾಡಿದ್ದ. ಆ ವೇಳೆ ತಾನು ಊಟಕ್ಕೆ ಗೆಳೆಯರ ಜತೆ ಹೊರಗೆ ಹೋಗುತ್ತಿರುವುದಾಗಿ ಆತ ತಿಳಿಸಿದ್ದ. ಇದಾದ ಕೆಲವೇ ತಾಸುಗಳಲ್ಲಿ ಮಗನ ಸಾವಿನ ಸುದ್ದಿ ಸುಜಿತ್ ತಾಯಿಗೆ ಗೊತ್ತಾಗಿ ಆಘಾತಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮೃತರ ಸ್ನೇಹಿತರು ನಾಟ್ ರೀಚಬಲ್‌

ಹುಟ್ಟುಹಬ್ಬದ ಆಚರಣೆಗೆ ತೆರಳಿದ್ದ ಇನ್ನಿಬ್ಬರು ಸ್ನೇಹಿತರು ಅಪಘಾತದ ಬಳಿಕ ನಾಪತ್ತೆಯಾಗಿದ್ದಾರೆ. ಅಪಘಾತ ಹೇಗೆ ಸಂಭವಿಸಿದೆ ಎಂಬ ಮಾಹಿತಿ ಪಡೆಯಲು ಆ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಯತ್ನಿಸಲಾಯಿತು. ಆದರೆ ಇಬ್ಬರು ಮೊಬೈಲ್ ಸ್ವಿಚ್ಡ್‌ ಆಪ್ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಐದು ದಿನಗಳ ನಂತರ ಟಿಪ್ಪರ್ ಚಾಲಕನ ಮೃತದೇಹ ಪತ್ತೆ
ಲಿವಿಂಗ್‌ ಟುಗೆದರ್‌ ಯುವತಿ ಜೊತೆಗೆ ವಿವಾಹ ಯತ್ನ