ಕಳೆದ ನಾಲ್ಕು ದಿನಗಳ ಹಿಂದೆ ಆಯತಪ್ಪಿ ಟಿಪ್ಪರ್ ಲಾರಿ ಸಹಿತ 30 ಅಡಿ ಆಳದ ನೀರು ತುಂಬಿದ ಹಳ್ಳಕ್ಕೆ ಬಿದ್ದಿದ್ದ ಚಾಲಕ ತಾಲೂಕಿನ ದುಮ್ಮಸಂದ್ರ ಗ್ರಾಮದ ಲಕ್ಷ್ಮಣ ಅಲಿಯಾಸ್ ಲಚ್ಚಿ ಮೃತದೇಹ ಸೋಮವಾರ ಸಂಜೆ ನೀರಿನ ಹಳ್ಳದಲ್ಲಿ ತೇಲಿಬಂದು ಪತ್ತೆಯಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಕಳೆದ ನಾಲ್ಕು ದಿನಗಳ ಹಿಂದೆ ಆಯತಪ್ಪಿ ಟಿಪ್ಪರ್ ಲಾರಿ ಸಹಿತ 30 ಅಡಿ ಆಳದ ನೀರು ತುಂಬಿದ ಹಳ್ಳಕ್ಕೆ ಬಿದ್ದಿದ್ದ ಚಾಲಕ ತಾಲೂಕಿನ ದುಮ್ಮಸಂದ್ರ ಗ್ರಾಮದ ಲಕ್ಷ್ಮಣ ಅಲಿಯಾಸ್ ಲಚ್ಚಿ ಮೃತದೇಹ ಸೋಮವಾರ ಸಂಜೆ ನೀರಿನ ಹಳ್ಳದಲ್ಲಿ ತೇಲಿಬಂದು ಪತ್ತೆಯಾಗಿದೆ.

ತಾಲೂಕಿನ ವಡೇರಪುರ ಸಮೀಪದ ದೊಡ್ಡಜಟಕಾ ರಸ್ತೆಯ ಕಾಂತರಾಜುರಿಗೆ ಸೇರಿದ ಬಸವೇಶ್ವರ ಸ್ಟೋನ್ ಕ್ರಷರ್‌ನ ಕಲ್ಲು ಗಣಿಗಾರಿಕೆ ಕ್ವಾರಿಯಿಂದ ಬೋಡ್ರಸ್ ಕಲ್ಲು ತುಂಬಿದ್ದ ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಚಾಲಕನ ಸಹಿತ ಗುರುವಾರ ತಡರಾತ್ರಿ ವೇಳೆ ಕಲ್ಲುಕ್ವಾರಿಯ ರಸ್ತೆ ಬದಿಯ 30ಅಡಿ ಆಳದ ನೀರು ತುಂಬಿದ ಹಳ್ಳಕ್ಕೆ ಬಿದ್ದಿತ್ತು.

ಶನಿವಾರ ಬೆಳಗ್ಗೆ ಉಡುಪಿಯ ಅನುಭವಿ ಮುಳುಗುತಜ್ಞ ಈಶ್ವರ್ ಮಲ್ಪೆ ಅವರನ್ನು ಕರೆಸಿ ನೀರಿನಲ್ಲಿ ಹುಡುಕಾಟ ನಡೆಸಲಾಗಿ 30ಅಡಿ ಆಳದಲ್ಲಿದ್ದ ಟಿಪ್ಪರ್ ಲಾರಿಯನ್ನು ಪತ್ತೆಹಚ್ಚಿ ಬೃಹತ್ ಕ್ರೇನ್ ಯಂತ್ರದ ಮೂಲಕ ಮೇಲೆತ್ತಲಾಗಿತ್ತು. ನಂತರ ಸತತವಾಗಿ ನೀರಿನಲ್ಲಿ ಹುಡುಕಾಟ ನಡೆಸಿದರೂ ಸಹ ಚಾಲಕ ಲಕ್ಷ್ಮಣನ ಮೃತದೇಹ ಪತ್ತೆಯಾಗಿರಲಿಲ್ಲ. ಮೃತದೇಹ ಪತ್ತೆಗಾಗಿ 7 ಟ್ರಾಕ್ಟರ್‌ಗಳಿಗೆ ಮೋಟಾರ್ ಪಂಪ್ ಅಳವಡಿಸಿ ಮೂರು ದಿನಗಳಿಂದ ನಿರಂತರವಾಗಿ ಹಳ್ಳದ ನೀರನ್ನು ಹೊರ ಹಾಕಲಾಗುತ್ತಿತ್ತು.

ಸಚಿವರ ಭೇಟಿ ಪರಿಶೀಲನೆ: ಸಚಿವ ಎನ್.ಚಲುವರಾಯಸ್ವಾಮಿ ಅವರು ಸೋಮವಾರ ಮಧ್ಯಾಹ್ನ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿ ಶೀಘ್ರ ಮೃತದೇಹ ಪತ್ತೆಹಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿ ಚಾಲಕನ ಕುಟುಂಬಸ್ಥರಿಗೆ ಧೈರ್ಯ ತುಂಬಿ ತೆರಳಿದ್ದರು.

ಸೋಮವಾರ ಸಂಜೆ4 ಗಂಟೆ ವೇಳೆಗೆ ನೀರಿನ ಹಳ್ಳದಲ್ಲಿ ಅರೆಬರೆ ಕೊಳೆತ ಸ್ಥಿತಿಯಲ್ಲಿದ್ದ ಚಾಲಕ ಲಕ್ಷ್ಮಣನ ಮೃತದೇಹ ತೇಲಿಬಂದಿದ್ದನ್ನು ಕಂಡ ಸ್ಥಳೀಯರು ಪೊಲೀಸ್ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕಾಗಮಿಸಿದ ಡಿವೈಎಸ್‌ಪಿ ಬಿ.ಚಲುವರಾಜು, ಸಿಪಿಐ ಹೇಮಂತ್‌ಕುಮಾರ್, ಬೆಳ್ಳೂರು ಪೊಲೀಸ್ ಠಾಣೆ ಪಿಎಸ್‌ಐ ವೈ.ಎನ್.ರವಿಕುಮಾರ್ ಮತ್ತು ಅಗ್ನಿಶಾಮಕ ಠಾಣಾಧಿಕಾರಿ ಮಂಜುನಾಥ್ ಪರಿಶೀಲನೆ ನಡೆಸಿದರು. ನಂತರ ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ನೀರಿನಿಂದ ಹೊರತೆಗೆದರು.

ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಚಾಲಕ ಲಕ್ಷ್ಮಣನ ಮೃತದೇಹವನ್ನು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳೂರು ಠಾಣೆಯ ಪೊಲೀಸರು ಮುಂದಿನ ಕಾನೂನು ಕ್ರಮವಹಿಸಿದ್ದಾರೆ.

ಕಾರು ಡಿಕ್ಕಿ: ಆಟೋ ರಿಕ್ಷಾದಲ್ಲಿ ಇದ್ದ ಪ್ರಯಾಣಿಕ ಸ್ಥಳದಲ್ಲೇ ಸಾವು

ಮದ್ದೂರು:

ಕಾರು ಡಿಕ್ಕಿಯಾಗಿ ಆಟೋ ರಿಕ್ಷಾದಲ್ಲಿ ಇದ್ದ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟು, ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಶಿವಪುರದ ಹಳೇ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸೋಮವಾರ ಮುಂಜಾನೆ ಜರುಗಿದೆ.

ತಾಲೂಕಿನ ದುಂಡನಹಳ್ಳಿಯ ನಿಂಬೆಹಣ್ಣು ವ್ಯಾಪಾರಿ ನಿಂಗಯ್ಯ (54) ಮೃತಪಟ್ಟ ಪ್ರಯಾಣಿಕ. ಆಟೋಗೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಆಟೋದಿಂದ ಉರುಳಿ ಕೆಳಗೆ ಬಿದ್ದ ಪರಿಣಾಮ ತಲೆಗೆ ತೀವ್ರವಾಗಿ ಬಿದ್ದ ಪೆಟ್ಟಿನಿಂದ ನಿಂಗಯ್ಯ ಸ್ಥಳದಲ್ಲೇ ಕೊನೆ ಉಸಿರೆಳೆದಿದ್ದಾನೆ.

ಆಟೋ ಚಾಲನೆ ಮಾಡುತ್ತಿದ್ದ ಹೆಮ್ಮನಹಳ್ಳಿಯ ಬೈರಲಿಂಗಯ್ಯ ತೀವ್ರವಾಗಿ ಗಾಯಗೊಂಡಿದ್ದು, ಈತನನ್ನು ಮದ್ದೂರು ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿದ ನಂತರ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಮದ್ದೂರು ಸಂಚಾರಿ ಠಾಣೆ ಪಿಎಸ್ಐ ಕಮಲಾಕ್ಷಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.