ಬೆಂಗಳೂರು : ತಾಯಿ ಬೈಕ್‌ ಕೊಡಿಸಲಿಲ್ಲ ಎಂದು ಬೇಸರಗೊಂಡು ಬಿಎಸ್ಸಿ ವಿದ್ಯಾರ್ಥಿ ನೇಣಿಗೆ ಶರಣು

KannadaprabhaNewsNetwork | Updated : Sep 13 2024, 06:09 AM IST

ಸಾರಾಂಶ

ತಾಯಿ ಬೈಕ್‌ ಕೊಡಿಸಲಿಲ್ಲ ಎಂದು ಬೇಸರಗೊಂಡು ಪುತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 ಬೆಂಗಳೂರು :  ತಾಯಿ ಬೈಕ್‌ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡ ಪುತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಣ್ಣೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹೆಣ್ಣೂರಿನ ಥಣಿಸಂದ್ರ ನಿವಾಸಿ ಬಿ.ಎಸ್‌.ಅಯ್ಯಪ್ಪ(20) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ತಮಿಳುನಾಡು ಮೂಲದ ಅಯ್ಯಪ್ಪ ಕೆಲ ವರ್ಷಗಳಿಂದ ತಾಯಿ ಜತೆಗೆ ಥಣಿಸಂಸ್ರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. 4 ವರ್ಷದ ಹಿಂದೆ ತಂದೆ ಮೃತಪಟ್ಟಿದ್ದರು. ಅಕ್ಕನಿಗೆ ಮದುವೆಯಾಗಿದೆ. ಅಯ್ಯಪ್ಪ ಬಾಗಲೂರಿನ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ತಾಯಿ ಖಾಸಗಿ ಕಂಪನಿಯಲ್ಲಿ ಹೌಸ್‌ ಕೀಪಿಂಗ್‌ ಕೆಲಸ ಮಾಡುತ್ತಿದ್ದರು.

ಅಯ್ಯಪ್ಪ ದ್ವಿಚಕ್ರ ವಾಹನ ಕೊಡಿಸುವಂತೆ ತಾಯಿಗೆ ಕಳೆದ ಎರಡು ತಿಂಗಳಿಂದ ಕೇಳುತ್ತಿದ್ದ. ಹಣ ಹೊಂದಿಸಿಕೊಂಡು ಮುಂದಿನ ದಿನಗಳಲ್ಲಿ ದ್ವಿಚಕ್ರ ವಾಹನ ಕೊಡಿಸುವುದಾಗಿ ತಾಯಿ ಹೇಳುತ್ತಿದ್ದರು. ಆದರೂ ಅಯ್ಯಪ್ಪ ದ್ವಿಚಕ್ರ ವಾಹನ ಬೇಕೇಬೇಕು ಎಂದು ಹಠ ಮಾಡುತ್ತಿದ್ದ. 

ತಾಯಿ ಕೆಲಸಕ್ಕೆ ಹೋದಾಗ ಆತ್ಮಹತ್ಯೆ

ಬುಧವಾರ ಬೆಳಗ್ಗೆ ಸಹ ಅಯ್ಯಪ್ಪ ದ್ವಿಚಕ್ರ ವಾಹನ ಕೊಡಿಸುವಂತೆ ಹಠ ಹಿಡಿದಿದ್ದ. ದ್ವಿಚಕ್ರ ವಾಹನ ಕೊಡಿಸದಿದ್ದಲ್ಲಿ ಕಾಲೇಜಿಗೆ ಹೋಗುವುದಿಲ್ಲ ಎಂದು ಜಗಳ ಮಾಡಿದ್ದಾನೆ. ಈ ವೇಳೆ ತಾಯಿ, ಅಳಿಯನ ಬಳಿ ಮಾತನಾಡಿ ದ್ವಿಚಕ್ರ ವಾಹನ ಕೊಡಿಸಲು ವ್ಯವಸ್ಥೆ ಮಾಡುವುದಾಗಿ ಸಮಾಧಾನಪಡಿಸಿ, ಎಂದಿನಂತೆ ಕೆಲಸಕ್ಕೆ ತೆರಳಿದ್ದಾರೆ. ಸಂಜೆ 4.30ಕ್ಕೆ ಕೆಲಸದಿಂದ ವಾಪಾಸ್‌ ಮನೆಗೆ ಬಂದಾಗ, ಅಯ್ಯಪ್ಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ.

ಬೈಕ್‌ ಕೊಡಿಸಲು ತಾಯಿ ಪ್ರಯತ್ನ

ಘಟನಾ ಸ್ಥಳದಲ್ಲಿ ಯಾವುದೇ ಮರಣಪತ್ರ ಸಿಕ್ಕಿಲ್ಲ. ಸಾಲ ಮಾಡಿಯಾದರೂ ದ್ವಿಚಕ್ರ ವಾಹನ ಕೊಡಿಸಲು ತಾಯಿ ಪ್ರಯತ್ನಿಸುತ್ತಿದ್ದರು. ಈ ವಿಚಾರ ಅಯ್ಯಪ್ಪನಿಗೆ ಗೊತ್ತಿರಲಿಲ್ಲ. ಈ ನಡುವೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಹೆಣ್ಣೂರು ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

Share this article