ಸರ್ಕಾರದ ಕಪಾಟಿನಲ್ಲಿ ದೂಳು ತಿನ್ನುತ್ತಿವೆ ಜೈಲು ಸುಧಾರಣೆಗಾಗಿ ಸಲ್ಲಿಸಿದ 4 ವರದಿಗಳು

KannadaprabhaNewsNetwork |  
Published : Nov 11, 2025, 04:15 AM IST
Jail

ಸಾರಾಂಶ

ಕಳೆದ ಹತ್ತು ವರ್ಷಗಳಲ್ಲಿ ರಾಜ್ಯದ ಬಂದೀಖಾನೆಗಳ ಸುಧಾರಣೆಗೆ ಉನ್ನತ ಮಟ್ಟದ ಸಮಿತಿಗಳಿಂದ ಸಲ್ಲಿಕೆಯಾದ ನಾಲ್ಕು ವರದಿಗಳು ಸರ್ಕಾರದ ಕಪಾಟಿನಲ್ಲಿ ಧೂಳು ತಿನ್ನುತ್ತಿವೆ. ಈಗ ಎಡಿಜಿಪಿ ಆರ್‌.ಹಿತೇಂದ್ರ ನೇತೃತ್ವದಲ್ಲಿ ಮತ್ತೊಂದು ಸುಧಾರಣೆಗೆ ಉನ್ನತ ಮಟ್ಟದ ಸಮಿತಿ ರಚನೆಯಾಗಿದೆ.

 ಬೆಂಗಳೂರು :  ಕಳೆದ ಹತ್ತು ವರ್ಷಗಳಲ್ಲಿ ರಾಜ್ಯದ ಬಂದೀಖಾನೆಗಳ ಸುಧಾರಣೆಗೆ ಉನ್ನತ ಮಟ್ಟದ ಸಮಿತಿಗಳಿಂದ ಸಲ್ಲಿಕೆಯಾದ ನಾಲ್ಕು ವರದಿಗಳು ಸರ್ಕಾರದ ಕಪಾಟಿನಲ್ಲಿ ಧೂಳು ತಿನ್ನುತ್ತಿವೆ. ಈಗ ಎಡಿಜಿಪಿ ಆರ್‌.ಹಿತೇಂದ್ರ ನೇತೃತ್ವದಲ್ಲಿ ಮತ್ತೊಂದು ಸುಧಾರಣೆಗೆ ಉನ್ನತ ಮಟ್ಟದ ಸಮಿತಿ ರಚನೆಯಾಗಿದೆ.

ಈ ಸಮಿತಿಗಳ ವರದಿಗಳ ಕುರಿತ ವಿವರ ಹೀಗಿದೆ.

ಬಿಪಿಎನ್ ಗೋಪಾಲಕೃಷ್ಣ ಸಮಿತಿ:

2104ರಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಕುಖ್ಯಾತ ಅತ್ಯಾಚಾರಿ ಜೈಶಂಕರ್‌ ಪರಾರಿಯಾಗಿದ್ದ. ಅಂದು ಕಾರಾಗೃಹದ ಭದ್ರತಾ ಲೋಪ ಕುರಿತು ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಯಿತು. ಆಗ ಕಾರಾಗೃಹಗಳ ಸುಧಾರಣೆಗೆ ಪರಿಶೀಲಿಸಿ ವರದಿ ನೀಡುವಂತೆ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಡಿಜಿಪಿ ಆಗಿದ್ದ ಬಿಪಿನ್ ಗೋಪಾಲಕೃಷ್ಣ ನೇತೃತ್ವದಲ್ಲಿ ಉನ್ನತ ಸಮಿತಿ ರಚಿಸಿತು. ಸರ್ಕಾರಕ್ಕೆ ಸಮಿತಿ ವರದಿ ಸಲ್ಲಿಸಿತು. ಆನಂತರ ವರದಿ ಶಿಫಾರಸುಗಳು ಕಾರ್ಯರೂಪಕ್ಕೆ ಬಂದ ಬಗ್ಗೆ ಮಾಹಿತಿಯೇ ಇಲ್ಲ.

ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಸಮಿತಿ:

2017ರಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ತಮಿಳುನಾಡಿನ ರಾಜಕಾರಣಿ ಶಶಿಕಲಾ ನಟರಾಜನ್ ಅವರಿಗೆ ವಿಐಪಿ ಸೌಲಭ್ಯ ನೀಡಲಾಗಿದೆ ಎಂದ ವಿವಾದ ಬೆಳಕಿಗೆ ಬಂದಿತ್ತು. ಆಗಲೂ ಸಹ ಮತ್ತೆ ಜೈಲಿನ ಆಡಳಿತ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು. ಅಂದು ರಾಜ್ಯ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿನಯ್ ಕುಮಾರ್ ನೇತೃತ್ವದ ಸಮಿತಿ ರಚಿಸಲಾಯಿತು. ಆ ಸಮಿತಿ ವರದಿ ನೀಡಿ ಎಂಟು ವರ್ಷಗಳು ಕಳೆದರೂ ಆ ವರದಿ ಗುಂಟು ಸಹ ಬಿಚ್ಚಿಲ್ಲ ಎನ್ನಲಾಗಿದೆ.

ಎಡಿಜಿಪಿ ಎಸ್‌.ಮುರುಗನ್ ಸಮಿತಿ ವರದಿ:

2022ರಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಂಕಿತ ಉಗ್ರರು ಹಾಗೂ ಕೈದಿಗಳು ಮೊಬೈಲ್ ಬಳಕೆ ಬಗ್ಗೆ ವಿಡಿಯೋಗಳು ಬಯಲಾಗಿದ್ದವು. ಆಗ ಕಾರಾಗೃಹ ಭದ್ರತಾ ವ್ಯವಸ್ಥೆಗೆ ಬಲವರ್ಧನೆಗೆ ಎಡಿಜಿಪಿ ಎಸ್‌.ಮುರುಗನ್ ನೇತೃತ್ವದಲ್ಲಿ ಸಮಿತಿಯನ್ನು ಸರ್ಕಾರ ರಚಿಸಿತು. ಜೈಲಿನ ಸುರಕ್ಷತೆ ಕುರಿತು ಪರಿಶೀಲಿಸಿ ಸಮಿತಿ ವರದಿ ನೀಡಿತ್ತು. ಈ ವರದಿ ಆಧರಿಸಿ ಕೆಲ ಅಧಿಕಾರಿಗಳ ವರ್ಗಾವಣೆ ಮಾಡಿದ್ದು ಬಿಟ್ಟರೆ ಮತ್ಯಾವುದು ಶಿಫಾರಸುಗಳು ಕಾರ್ಯರೂಪಕ್ಕೆ ಬರಲಿಲ್ಲ.

2024 ಐಜಿಪಿ ಚಂದ್ರಗುಪ್ತ ಸಮಿತಿ:

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿದ್ದ ನಟ ದರ್ಶನ್ ಹಾಗೂ ಅವರ ಸಹಚರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜ್ಯಾಥ್ಯ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ ಇದಕ್ಕೆ ಪೂರಕವಾಗಿ ವಿಡಿಯೋ ಹಾಗೂ ಪೋಟೋಗಳು ಬಹಿರಂಗವಾಗಿ ಸಾರ್ವಜನಿಕ ವಲಯದಲ್ಲಿ ವೈರಲ್ ಆಗಿದ್ದವು. ಆಗ ಕಾರಾಗೃಹಗಳ ಸುಧಾರಣೆಗೆ ಅಂದು ಸಿಸಿಬಿ ಮುಖ್ಯಸ್ಥರಾಗಿದ್ದ ಐಜಿಪಿ ಡಾ.ಚಂದ್ರಗುಪ್ತ ನೇತೃತ್ವದ ಸಮಿತಿಯನ್ನು ಇದೇ ಕಾಂಗ್ರೆಸ್ ಸರ್ಕಾರ ರಚಿಸಿತ್ತು. ಜೈಲುಗಳಿಗೆ ಭೇಟಿ ನೀಡಿ ಸುದೀರ್ಘವಾಗಿ ಅವಲೋಕಿಸಿ ಚಂದ್ರಗುಪ್ತ ಅವರು ವರದಿ ಸಿದ್ದಪಡಿಸಿದ್ದರು. 

ನಾಲ್ಕು ತಿಂಗಳ ಹಿಂದೆ ಸರ್ಕಾರಕ್ಕೆ ಅವರು ವರದಿ ಸಲ್ಲಿಸಿದರು. ಈ ವರದಿಯಲ್ಲಿ ನಾಡಿನ ಸೆರೆಮನೆಗಳ ಅಕ್ರಮ ಚಟುವಟಿಕೆಗಳ ಬಗ್ಗೆ ಬೆಳಕು ಚೆಲ್ಲಿದ್ದರು. ಕಾರಾಗೃಹದ ಅಧಿಕಾರಿ-ಸಿಬ್ಬಂದಿಗೆ ವರ್ಗಾವಣೆ ನೀತಿ ಬದಲಾವಣೆ ಹಾಗೂ ಮನಶಾಸ್ತ್ರಜ್ಞರಿಂದ ಕೌನ್ಸೆಲಿಂಗ್ ಸೇರಿದಂತೆ ಹಲವು ಕ್ರಮಗಳ ಬಗ್ಗೆ ಅವರು ಶಿಫಾರಸು ಮಾಡಿದ್ದರು. ಆದರೆ ಆ ಸಮಿತಿ ಸ್ವೀಕರಿಸಿದ್ದು ಬಿಟ್ಟರೆ ಮುಂದಿನ ಹಂತಕ್ಕೂ ವರದಿ ಹೋಗದೆ ಕಪಾಟು ಸೇರಿತು.

PREV
Read more Articles on

Recommended Stories

ಜೈಲು ವಿಡಿಯೋಗೆ 2 ತಲೆದಂಡ, ಸುಧಾರಣೆಗೆ ಉನ್ನತ ತಂಡ
ತನಿಖೆ ಲೋಪದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ನಾಲ್ವರು ಆರೋಪಿಗಳಿಗೆ ಬಿಡುಗಡೆ ಭಾಗ್ಯ !