ಕನ್ನಡಪ್ರಭ ವಾರ್ತೆ ಪಾಂಡವಪುರ
ಕಾರೊಂದು ವಿಶ್ವೇಶ್ವರಯ್ಯ ನಾಲೆಗೆ ಉರುಳಿಬಿದ್ದ ಪರಿಣಾಮ ಐವರು ಜಲ ಸಮಾಧಿಯಾಗಿರುವ ಘಟನೆ ತಾಲೂಕಿನ ಬನಘಟ್ಟ ಗ್ರಾಮದ ಹಳೆ ಸೇತುವೆ ಕ್ರಾಸ್ ಬಳಿ ಮಂಗಳ ವಾರ ಸಂಜೆ ನಡೆದಿದೆ.ಪಾಂಡವಪುರ ಕಡೆಯಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆ ಇಲ್ಲದ ನಾಲೆಗೆ ಉರುಳಿದ್ದರಿಂದ ಕಾರು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದೆ. ಕಾರಿನೊಳಗಿದ್ದವರು ಹೊರಬರಲಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸತತ ನಾಲ್ಕು ಗಂಟೆಗಳ ಕಾಲ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನಾಲೆ ಯಿಂದ ಕಾರನ್ನು ಹೊರತೆಗೆದಿದ್ದಾರೆ. ಕಾರಿನೊಳಗೆ ಐವರು ಪುರುಷರು ಸಾವನ್ನಪ್ಪಿರುವುದು ಈ ವೇಳೆ ಕಂಡು ಬಂದಿದೆ.
ಮೃತಪಟ್ಟವರು ತುಮಕೂರು ಜಿಲ್ಲೆಯ ತಿಪಟೂರಿನವರೆಂದು ತಿಳಿದು ಬಂದಿದೆ. ದೇವಸ್ಥಾನಕ್ಕೆ ತೆರಳಿ ಪೂಜೆ ಮುಗಿಸಿಕೊಂಡು ಹಿಂತಿರುಗುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಕಾರಿನೊಳಗೆ ಹೂವು, ಹಣ್ಣು, ಕಾಯಿ ಸೇರಿದಂತೆ ಇನ್ನಿತರ ಪೂಜಾ ಸಾಮಗ್ರಿಗಳು ದೊರೆತಿವೆ.ಸಂಜೆ 4:45ರ ಸಮಯಕ್ಕೆ ಕಾರು ನಾಲೆಗೆ ಉರುಳಿ ಬಿದ್ದಿದ್ದು, ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಬಳಿಕ ಅಗ್ನಿಶಾಮಕ ಸಿಬ್ಬಂದಿ ಸತತ ಮೂರು-ನಾಲ್ಕು ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿ ರಾತ್ರಿ 8:15ರ ಸಮಯಕ್ಕೆ ನಾಲೆಯಿಂದ ಕಾರನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾದರು.
ನಾಲೆಗೆ ತಡೆಗೋಡೆ ಇಲ್ಲ: ಬನಘಟ್ಟ ಬಳಿ ಇರುವ ವಿಶ್ವೇಶ್ವರಯ್ಯ ನಾಲೆ ಆಳವಾದ ಸ್ಥಳದಲ್ಲಿದ್ದು, ಪಾಂಡವಪುರ ಕಡೆಯಿಂದ ಬರುವಾಗ ಇಳಿಜಾರಿನಿಂದ ಕೂಡಿದೆ. ಈ ಸ್ಥಳದಲ್ಲಿ ನಾಲೆಗೆ ಅಡ್ಡವಾಗಿ ಯಾವುದೇ ತಡೆಗೋಡೆಯನ್ನು ನಿರ್ಮಿಸಿಲ್ಲ. ಈ ಹಿಂದೆಯೂ ಅನೇಕ ವಾಹನಗಳು ನಾಲೆಗೆ ಉರುಳಿರುವ ನಿದರ್ಶನಗಳಿವೆ.