ಕನ್ನಡಪ್ರಭ ವಾರ್ತೆ ಮಂಡ್ಯ
ಮಳವಳ್ಳಿ ತಾಲೂಕಿನ ಯತ್ತಂಬಾಡಿ ಗ್ರಾಮದ ಶ್ರೀಕಾಳೇಶ್ವರಸ್ವಾಮಿ ದೇವಾಲಯಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ ಅವರಿಗೆ ನೀಡಿರುವ ಎಲ್ಲಾ ದೂರುಗಳಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮದ ಬಗ್ಗೆ ಕಚೇರಿಯ ಟಿಪ್ಪಣಿ ಸಹಿತ ಎಲ್ಲಾ ಪ್ರತಿಗಳನ್ನು ದೃಢೀಕರಿಸಿಕೊಡುವಂತೆ ಕೋರಿ ಗ್ರಾಮದ ಪ್ರವೀಣ್ ಎಂಬುವರು ಅರ್ಜಿ ಸಲ್ಲಿಸಿದ್ದರು.
ಅದೇ ರೀತಿ ಮಳವಳ್ಳಿ ತಾಲೂಕಿನ ಯತ್ತಂಬಾಡಿ ಗ್ರಾಮದ ಕೆಂಪಸಿದ್ದೇಗೌಡ ಎಂಬುವರು ಮಂಡ್ಯ ಜಿಲ್ಲಾಧಿಕಾರಿ ಪತ್ರ ಸಂಖ್ಯೆ ಎಂಡಿಸಿ-ಡಿಇವಿಒಇಜೆಎ /೧೯/೨೦೨೪-ಡಿಇವಿ.ಎಸ್‌ಸಿ, ಡಿಸಿ, ಮಂಡ್ಯರವರ ದಿನಾಂಕ: ೧೩.೮.೨೦೨೪ ಪತ್ರ ತೆಗೆದುಕೊಂಡಿರುವ ಕ್ರಮದ ಬಗ್ಗೆ ಕಡತದಲ್ಲಿರುವ ಕಚೇರಿ ಟಿಪ್ಪಣಿ ಸಹಿತ ಎಲ್ಲಾ ಪ್ರತಿಗಳನ್ನು ಯಥಾವತ್ತಾಗಿ ನೀಡಲು ಕೋರಿದ್ದರು.ಈ ಎರಡೂ ಪ್ರಕರಣಗಳಲ್ಲಿ ಮಾಹಿತಿದಾರರು ಕೋರಿದ ಮಾಹಿತಿಯನ್ನು ೨೦೦೫ರ ಕಲಂ ೭(೬) ರನ್ವಯ ಒಂದು ವಾರದೊಳಗೆ ಉಚಿತವಾಗಿ ನೋಂದಾಯಿತ ಅಂಚೆ ಸ್ವೀಕೃತಿ ಮುಖಾಂತರ ಒದಗಿಸಬೇಕೆಂದು ಹಾಗೂ ಮಾಹಿತಿ ಲಭ್ಯವಿಲ್ಲದಿದ್ದರೆ ಸೂಕ್ತ ಹಿಂಬರಹವನ್ನು ನೀಡುವಂತೆ ಮಾಹಿತಿ ಆಯೋಗದ ಆಯುಕ್ತರು ತಿಳಿಸಿದ್ದರೂ ನಿಗದಿತ ಅವಧಿಯೊಳಗೆ ಮಾಹಿತಿದಾರರಿಗೆ ಕೋರಿರುವ ಮಾಹಿತಿಯನ್ನು ಒದಗಿಸದ ಹಿನ್ನೆಲೆಯಲ್ಲಿ ತಲಾ ೨೫ ಸಾವಿರ ರು. ದಂಡ ವಿಧಿಸಿ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಆದೇಶ ಹೊರಡಿಸಿದ್ದಾರೆ.