ಬೆಂಗಳೂರು : 2020ರ ಆ.11ರಂದು ದೇಶಾದ್ಯಂತ ಸದ್ದು ಮಾಡಿದ್ದ ಬೆಂಗಳೂರಿನ ಕೆ.ಜಿ.ಹಳ್ಳಿ-ಡಿ.ಜೆ.ಹಳ್ಳಿ ಗಲಭೆ ಪ್ರಕರಣ ಸಂಬಂಧ ತಪ್ಪೊಪ್ಪಿಗೆ ಹೇಳಿಕೆ ನೀಡಿದ ಮೂವರು ಆರೋಪಿಗಳಿಗೆ ಏಳು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ತಲಾ 36 ಸಾವಿರ ರು. ದಂಡ ವಿಧಿಸಿ ನಗರದ ಎನ್‌ಐಎ ವಿಶೇಷ ನ್ಯಾಯಾಲಯವು ಮಂಗಳವಾರ ತೀರ್ಪು ಪ್ರಕಟಿಸಿದೆ. ಈ ಮೂಲಕ ಪ್ರಕರಣದಲ್ಲಿ ಮೊದಲ ಬಾರಿಗೆ ಮೂವರಿಗೆ ಶಿಕ್ಷೆಯಾದಂತಾಗಿದೆ.
ಕೆ.ಜಿ.ಹಳ್ಳಿ ನಿವಾಸಿಗಳಾದ ಪ್ರಕರಣದ 14ನೇ ಆರೋಪಿ ಸೈಯದ್ ಇಕ್ರಮುದ್ದೀನ್ ಅಲಿಯಾಸ್ ಸೈಯದ್ ನವೀದ್(44), 16ನೇ ಆರೋಪಿ ಸೈಯದ್ ಆಸೀಫ್(46) ಮತ್ತು 18ನೇ ಆರೋಪಿ ಮೊಹಮ್ಮದ್ ಅತೀಫ್ (26) ಶಿಕ್ಷೆಗೆ ಗುರಿಯಾದವರು.
ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಈ ಮೂವರು ಆರೋಪಿಗಳನ್ನು ಎನ್‌ಐಎ ತನಿಖಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮುಖಾಂತರ ನ್ಯಾಯಾಲಯದ ವಿಚಾರಣೆಗೆ ಹಾಜರುಪಡಿಸಿದ್ದರು. ವಿಚಾರಣೆ ಮಾಡಿದ ನ್ಯಾಯಾಲಯ ಮೂವರು ಆರೋಪಿಗಳಿಗೂ ಶಿಕ್ಷೆ ವಿಧಿಸಿ ಆದೇಶಿಸಿದೆ. ಈ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್ ಎನ್‌ಐಎ ಪರ ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ:
ಪುಲಿಕೇಶಿನಗರದ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಸಂಬಂಧಿ ನವೀನ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ಮಹಮ್ಮದ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ. ಹೀಗಾಗಿ 2020ರ ಆ.11ರಂದು ರಾತ್ರಿ ಸುಮಾರು 8.45ಕ್ಕೆ ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ಬಳಿ ಜಮಾಯಿಸಿದ್ದ ಸುಮಾರು 25-30 ಮಂದಿ ನವೀನ್‌ನನ್ನು ಬಂಧಿಸುವಂತೆ ಆಗ್ರಹಿಸಿದ್ದರು. ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರಕರಣದ 14ನೇ ಆರೋಪಿ ಸೈಯದ್ ಇಕ್ರಂಮುದ್ದೀನ್ ನೇತೃತ್ವದಲ್ಲಿ ಕೆಲವರು ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗೆ ನುಗ್ಗಿ ನವೀನ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದರು. ಬಳಿಕ ಪೊಲೀಸರು ದೂರು ಸ್ವೀಕರಿಸಿ ಎನ್‌ಸಿಆರ್ ದಾಖಲಿಸಿದ್ದರು. ಈ ಸಂಬಂಧ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಅಷ್ಟರಲ್ಲಿ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗಳ ಬಳಿಯೂ ಭಾರೀ ಸಂಖ್ಯೆಯಲ್ಲಿ ಜನ ಗುಂಪು ಗೂಡಿದ್ದರು.
ರಾತ್ರಿ 9 ಗಂಟೆ ವೇಳೆ ಎರಡೂ ಪೊಲೀಸ್ ಠಾಣೆಗಳ ಬಳಿ ಹೆಚ್ಚಿನ ಜನ ಸೇರಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಗರ ಪೊಲೀಸ್ ಆಯುಕ್ತರು ಎರಡೂ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಿ ಆದೇಶಿಸಿದರು. ಕರ್ಫ್ಯೂ ಜಾರಿ ಬಗ್ಗೆ ಮೈಕ್‌ನಲ್ಲಿ ಮಾಹಿತಿ ನೀಡಿ ಜನ ಗುಂಪು ಗೂಡದಂತೆ ಮನವಿ ಮಾಡಿದ್ದರು. ಇದ್ಯಾವುದನ್ನೂ ಲೆಕ್ಕಿಸದೆ ಉದ್ರಿಕ್ತರ ಗುಂಪು ಪೊಲೀಸ್ ಠಾಣೆಗಳ ಬಳಿ ವಿವಿಧ ಘೋಷಣೆ ಕೂಗುವುದನ್ನು ಮುಂದುವರೆಸಿದ್ದರು. ನವೀನ್‌ನನ್ನು ವಶಕ್ಕೆ ನೀಡುವಂತೆ ಆಗ್ರಹಿಸಿದ್ದರು.
ವಾಹನಗಳು-ಠಾಣೆಗೆ ಬೆಂಕಿ ಹಚ್ಚಿ ದಾಂಧಲೆ:
ಬಳಿಕ ಪರಿಸ್ಥಿತಿ ಕೈ ಮೀರಿ ಹಿಂಸಾಚಾರಕ್ಕೆ ತಿರುಗಿತ್ತು. ಬಳಿಕ ಏಕಾಏಕಿ ಪೊಲೀಸ್ ಠಾಣೆಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಕಬ್ಬಿಣದ ರಾಡ್‌ನಿಂದ ಪೊಲೀಸ್ ಠಾಣೆಗಳನ್ನು ಧ್ವಂಸಗೊಳಿಸಿದರು. ಪೊಲೀಸ್ ಠಾಣೆ ಆವರಣ ಹಾಗೂ ಸುತ್ತಮುತ್ತ ನಿಲುಗಡೆ ಮಾಡಿದ್ದ ಪೊಲೀಸ್ ವಾಹನಗಳು ಸೇರಿ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿದರು. ಪೆಟ್ರೋಲ್ ಬಾಂಬ್ ಎಸೆದು ದಾಂಧಲೆ ನಡೆಸಿದ್ದರು. ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಿದರು. ಪರಿಸ್ಥಿತಿ ನಿಯಂತ್ರಿಸಲು ಮುಂದಾದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದರು.
ಪರಿಸ್ಥಿತಿ ನಿಯಂತ್ರಿಸಲು ಅನ್ಯ ಮಾರ್ಗ ಇಲ್ಲದೆ ಹಾಗೂ ತಮ್ಮ ಆತ್ಮ ರಕ್ಷಣೆಗಾಗಿ ಉದ್ರಿಕ್ತ ಗುಂಪಿನತ್ತ ಸರ್ವಿಸ್ ಪಿಸ್ತೂಲ್‌ನಿಂದ ಗುಂಡು ಹಾರಿಸಿದರು. ಈ ವೇಳೆ ಹಲವರು ಗಾಯಗೊಂಡರು. ಬಳಿಕ ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ಬಳಿಯಿಂದ ಗುಂಪು ನಿಧಾನಕ್ಕೆ ಕರಗಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಂತು. ಈ ಗಲಭೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ವಾಹನಗಳು ಸೇರಿ ಒಟ್ಟು 12 ವಾಹನಗಳು ಸುಟ್ಟು ಹೋಗಿದ್ದವು. 5 ದ್ವಿಚಕ್ರವಾಹನ, 1 ಇನೋವಾ ಕಾರು, 5 ಇತರೆ ವಾಹನಗಳಿಗೆ ಸುಟ್ಟು ಭಸ್ಮವಾಗಿದ್ದವು.
138 ಮಂದಿ ದೋಷಾರೋಪ ಪಟ್ಟಿ ಸಲ್ಲಿಕೆ:
ಈ ಸಂಬಂಧ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐಪಿಸಿಯ ವಿವಿಧ ಸೆಕ್ಷನ್‌ಗಳು, ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪೊಲೀಸರು ಹಲವರನ್ನು ಬಂಧಿಸಿದ್ದರು. ಬಳಿಕ ಈ ಗಲಭೆ ಪ್ರಕರಣವು ಎನ್‌ಐಎ ತನಿಖೆಗೆ ವರ್ಗಾವಣೆಯಾಗಿತ್ತು. ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಎನ್‌ಐಎ ಅಧಿಕಾರಿಗಳು ಈ ಪ್ರಕರಣ ಸಂಬಂಧ 187 ಮಂದಿಯನ್ನು ಬಂಧಿಸಿದ್ದರು. 4 ಮಂದಿ ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿದ್ದರು. ಬಳಿಕ ತನಿಖೆ ನಡೆಸಿದ ಎನ್‌ಐಎ ಅಧಿಕಾರಿಗಳು 138 ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಈ ಪೈಕಿ ಈ ಮೂವರು ಆರೋಪಿಗಳ ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಹೀಗಾಗಿ ನ್ಯಾಯಾಲಯವು ಮೂವರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದೆ.
ನ್ಯಾಯ ವ್ಯವಸ್ಥೆಯಲ್ಲಿ ಈಗ ವಿಶ್ವಾಸ
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಪೊಲೀಸರ ಮೇಲೆ ದಾಳಿ ನಡೆದಾಗ ಪೊಲೀಸರ ದಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಕುಸಿಯವ ಸಾಧ್ಯತೆ ಇರುತ್ತದೆ. ಕೆ.ಜಿ.ಹಳ್ಳಿ-ಡಿ.ಜೆ.ಹಳ್ಳಿ ಗಲಭೆ ಪ್ರಕರಣ ಕುರಿತು ನ್ಯಾಯಾಲಯವು ನೀಡಿದ ತೀರ್ಪು ಪೊಲೀಸ್ ಪಡೆ ಮೇಲೆ ಸಾರ್ವಜನಿಕರ ವಿಶ್ವಾಸ ಹೆಚ್ಚಿಸಿದೆ. ಪಿಎಫ್‌ಐ ಕಾನೂನು ಬಾಹಿರ ಸಂಘಟನೆ ಎಂದು ಕೇಂದ್ರ ಸರ್ಕಾರ ಘೋಷಿಸಿದ ಕ್ರಮವನ್ನು ಸಮರ್ಥಿಸಿದೆ.
- ಪಿ.ಪ್ರಸನ್ನ ಕುಮಾರ್, ಎನ್‌ಐಎ ಪರ ವಕೀಲ
ಏನಿದು ಪ್ರಕರಣ?
ಬೆಂಗಳೂರಿನ ಪುಲಿಕೇಶಿನಗರದ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದ ಅಖಂಡ ಶ್ರೀನಿವಾಸ್ ಮೂರ್ತಿ ಸಂಬಂಧಿ ನವೀನ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ಮಹಮ್ಮದ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ. ಇದನ್ನು ಖಂಡಿಸಿ 2020ರ ಆ.11ರಂದು ರಾತ್ರಿ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದ ಉದ್ರಿಕ್ತರ ಗುಂಪು ಕಲ್ಲು ತೂರಾಟ ನಡೆಸಿತ್ತು. ನಂತರ ಸಿಕ್ಕಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿತ್ತು. ಈ ಸಂಬಂಧ 138 ಮಂದಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ಬಳಿಕ ಈ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಒಪ್ಪಿಸಲಾಗಿತ್ತು.
ದೇಶದಲ್ಲಿ ಸದ್ದು ಮಾಡಿದ್ದ ಗಲಭೆ
- ದೇಶಾದ್ಯಂತ ಸದ್ದು ಮಾಡಿದ್ದ ಬೆಂಗಳೂರಿನ ಡಿಜೆ ಹಳ್ಳಿ-ಕೆಜೆ ಹಳ್ಳಿ ಗಲಭೆ ಪ್ರಕರಣ
- ಶಾಸಕ ಅಖಂಡ ಬಂಧುವಿನಿಂದ ಪ್ರವಾದಿ ವಿರುದ್ಧ ಪೋಸ್ಟ್ ಖಂಡಿಸಿ ಗಲಭೆ ನಡೆದಿತ್ತು
-138 ಮಂದಿ ವಿರುದ್ಧ ಚಾರ್ಜ್‌ಶೀಟ್ ದಾಖಲು. ಈಗ ಮೂವರಿಗೆ ಸಜೆ, 36000 ರು. ದಂಡ