ಮಂಡ್ಯ : ವರದಕ್ಷಿಣೆ ತಾರದ ಪತ್ನಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆಗೈದಿದ್ದ ಪತಿಗೆ ಇಲ್ಲಿನ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ೫೦ ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದೆ.
ತಾಲೂಕಿನ ಆಲಕೆರೆ ಗ್ರಾಮದ ಪ್ರತೀಶ ಎಂಬಾತನೇ ಶಿಕ್ಷೆಗೊಳಗಾದ ವ್ಯಕ್ತಿ. ರಂಜಿನಿ ಹತ್ಯೆಯಾದ ಮಹಿಳೆ. ಏಳು ವರ್ಷದ ಹಿಂದೆ ಪತಿ ನಡೆಸಿದ್ದ ಕೃತ್ಯ ಸಾಬೀತಾಗಿದ್ದರಿಂದ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಆಲಕೆರೆ ಗ್ರಾಮದ ಪ್ರತೀಶ ಅದೇ ಗ್ರಾಮದ ಮಹದೇವು ಅವರ ಪುತ್ರಿ ರಂಜಿನಿಯನ್ನು ೨೦೧೪ರ ಏಪ್ರಿಲ್ ೩೦ರಂದು ವಿವಾಹವಾಗಿದ್ದನು. ಪ್ರಾರಂಭದಲ್ಲಿ ದಂಪತಿ ಅನ್ಯೋನ್ಯವಾಗಿದ್ದರು. ನಂತರದ ದಿನಗಳಲ್ಲಿ ಪ್ರತೀಶ ತನ್ನ ಪತ್ನಿ ರಂಜಿನಿಗೆ ತಂದೆ ಮನೆಯಿಂದ 50 ಸಾವಿರ ರು. ವರದಕ್ಷಿಣೆ ತರುವಂತೆ ಕಿರುಕುಳ ನೀಡಲಾರಂಭಿಸಿದ್ದನು.
ಮಗಳು ಹಣ ಕೇಳಿದ್ದ ಕಾರಣ ಸ್ತ್ರೀಶಕ್ತಿ ಸ್ವಹಾಯ ಸಂಘದಲ್ಲಿ 50 ಸಾವಿರ ರು. ಪಡೆದು ಪ್ರತೀಶನಿಗೆ ಕೊಟ್ಟಿದ್ದರು. ಜೊತೆಗೆ ಸ್ತ್ರೀಶಕ್ತಿ ಸಂಘದಲ್ಲಿ ರಂಜಿನಿ ಕೂಡ ೫೦ ಸಾವಿರ ರು. ಸಾಲ ಪಡೆದು ಗಂಡನಿಗೆ ಕೊಟ್ಟಿದ್ದಳು. ಒಂದೇ ಒಂದು ಕಂತು ಕಟ್ಟಿದ ನಂತರ ಹಣ ಕಟ್ಟುವುದನ್ನು ಬಿಟ್ಟಿದ್ದ. ಈ ಮಧ್ಯೆ ರಂಜಿನಿಗೆ ಒಂದು ಗಂಡು ಮಗು ಜನನವಾಗಿತ್ತು. ಆದರೆ, ತವರು ಮನೆಯವರು ಬಾಣಂತನಕ್ಕೆ ಕರೆದೊಯ್ಯಲಿಲ್ಲ ಎಂಬ ಕಾರಣಕ್ಕೆ ನಿನ್ನ ತಂದೆಯಿಂದ ಅರ್ಧ ಆಸ್ತಿ ಬರೆಸಿಕೊಡುವಂತೆ ಪೀಡಿಸುತ್ತಿದ್ದನು.
ನಿತ್ಯ ವರದಕ್ಷಿಣೆಗಾಗಿ ರಂಜಿನಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದನು. ಮತ್ತೊಂದು ಮಗುವಿಗೆ ಜನ್ಮ ನೀಡಿದಾಗ ತಂದೆ ಮನೆಯಲ್ಲಿ ಬಾಣಂತನಕ್ಕೆ ಹೋಗಿದ್ದಳು. ಮೂರು ತಿಂಗಳ ಬಳಿಕ ಕರೆತಂದ ಪ್ರತೀಶ್ ಆಕೆಯನ್ನು ಹಳೇ ಮನೆಯಲ್ಲಿಟ್ಟು, ಮತ್ತೆ ೫೦ ಸಾವಿರ ರು. ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ಆರಂಭಿಸಿದ್ದ. ತಾನು ತಂದೆ ಮನೆಯಿಂದ ಯಾವುದೇ ಕಾರಣಕ್ಕೂ ಹಣ ತಂದು ಕೊಡುವುದಿಲ್ಲ ಎಂದು ಹೇಳಿದಾಗ ಮತ್ತಷ್ಟು ಉದ್ರಿಕ್ತನಾದ ಪ್ರತೀಶ್ ಆಕೆಯ ಮೇಲೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುವುದನ್ನು ಮುಂದುವರೆಸಿದ್ದನು.
2018ರ ಜನವರಿ 4 ರಂದು ಬೆಳಗ್ಗೆ 5.30ರಲ್ಲಿ ಆಸ್ತಿಯಲ್ಲಿ ಪಾಲು ಬರೆಸಿಕೊಂಡು ಬಾ, ಇಲ್ಲದಿದ್ದರೆ 50 ಸಾವಿರ ರು. ವರದಕ್ಷಿಣೆ ಹಣ ತಂದುಕೊಡುವಂತೆ ಪೀಡಿಸಿ ಗಲಾಟೆ ಮಾಡಿದ್ದ. ಇದಕ್ಕೆ ರಂಜಿನಿ ಒಪ್ಪದಿದ್ದಾಗ ಅಂದು ಬೆಳಗ್ಗೆ 6 ಗಂಟೆ ಸಮಯದಲ್ಲಿ ಪತ್ನಿ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದನು. ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ತಂದೆ ಮಹದೇವು ಮತ್ತು ಇತರರು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ರಂಜಿನಿ ಜ.10ರಂದು ಕೆ.ಆರ್.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.
ಕೆರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ತನಿಖೆ ಕೈಗೊಂಡ ಅಂದಿನ ಡಿವೈಎಸ್ಪಿ ಎಸ್.ಇ. ಗಂಗಾಧರಸ್ವಾಮಿ ಆರೋಪಿಗಳಾದ ಪ್ರತೀಶ್ ಆತನ ತಂದೆ, ತಾಯಿ ಮತ್ತಿತರರ ಮೇಲೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಎರಡನೇ ಅಧಿಕ ಜಿಲ್ಲಾ ಮತ್ತ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಯ್ಯುದುನಿಶಾ ಅವರು ವಿಚಾರಣೆ ನಡೆಸಿ ಆರೋಪಿ ಪ್ರತೀಶನ ಆರೋಪ ಸಾಬೀತಾದ ಕಾರಣ ಅಪರಾಧಿಗೆ ಜೀವಾವಧಿ ಸಜೆ ಮತ್ತು ೫೦ ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಆತನ ತಂದೆ, ತಾಯಿ ಇತರರನ್ನು ಖುಲಾಸೆಗೊಳಿಸಿದ್ದಾರೆ.
ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕಿ ಎನ್.ಬಿ.ವಿಜಯಲಕ್ಷ್ಮೀ ವಾದ ಮಂಡಿಸಿದ್ದರು.