ನೀರಿನ ಸಂಪ್‌ಗೆ ಬಿದ್ದ ಮಗು ರಕ್ಷಿಸಿದ ಎಸ್‌ಐ

KannadaprabhaNewsNetwork |  
Published : Mar 07, 2024, 01:48 AM ISTUpdated : Mar 07, 2024, 03:15 PM IST
Sump PSI 1 | Kannada Prabha

ಸಾರಾಂಶ

10 ಅಡಿಯ ಸಂಪ್‌ಗೆ ಬಿದ್ದ ಮಗುವನ್ನು ಪಿಎಸ್‌ಐ ನಾಗರಾಜು ಅವರು ರಕ್ಷಿಸಿದ್ದಾರೆ. ಅವರ ಸಾಧನೆಯನ್ನು ಪೊಲೀಸ್‌ ಇಲಾಖೆ ಶ್ಲಾಘಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮನೆಯ ಆವರಣದಲ್ಲಿನ ನೀರಿನ ಸಂಪ್‌ಗೆ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಎರಡೂವರೆ ವರ್ಷದ ಗಂಡು ಮಗುವೊಂದನ್ನು ಬ್ಯಾಟರಾಯನಪುರ ಸಂಚಾರ ಠಾಣೆಯ ಪಿಎಸ್‌ಐ ಎ.ಆರ್‌.ನಾಗರಾಜು ರಕ್ಷಿಸಿದ್ದಾರೆ.

ಬ್ಯಾಡರಹಳ್ಳಿಯ ಬಿಇಎಲ್‌ ಲೇಔಟ್‌ನಲ್ಲಿ ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಈ ಘಟನೆ ನಡೆದಿದೆ. ಸದ್ಯ ಮಗು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದೆ. ಪಿಎಸ್‌ಐ ನಾಗರಾಜು ಅವರ ಉತ್ತಮ ಕಾರ್ಯವನ್ನು ಹಿರಿಯ ಅಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಏನಿದು ಘಟನೆ?
ಪಿಎಸ್‌ಐ ನಾಗರಾಜು ಅವರು ಬ್ಯಾಟರಾಯನಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಕರ್ತವ್ಯಕ್ಕೆ ಹಾಜರಾಗಲು ಮನೆಯಿಂದ ಪೊಲೀಸ್‌ ಠಾಣೆಗೆ ಕಡೆಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. 

ಈ ವೇಳೆ ಬ್ಯಾಡರಹಳ್ಳಿಯ ಬಿಇಎಲ್‌ ಲೇಔಟ್‌ನ ಮನೆಯೊಂದರ ಬಳಿ ಹಲವು ಮಹಿಳೆಯರು ಗುಂಪುಗೂಡಿದ್ದಾರೆ. ಮಗು ಸಂಪ್‌ ಒಳಗೆ ಬಿದ್ದಿದೆ. ಕಾಪಾಡಿ ಎಂದು ಕೂಗುತ್ತಿರುವುದನ್ನು ನಾಗರಾಜು ಗಮನಿಸಿದ್ದಾರೆ.

ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿ, ಮಹಿಳೆಯರು ಗುಂಪುಗೂಡಿದ್ದ ಕಡೆಗೆ ತೆರಳಿ ನೋಡಿದಾಗ ಸುಮಾರು 10 ಅಡಿ ಆಳದ ಸಂಪ್‌ಗೆ ಮಗುವೊಂದು ಬಿದ್ದು ನೀರಿನಲ್ಲಿ ಮುಳುಗಿ ಒದ್ದಾಡುತ್ತಿರುವುದು ಕಂಡು ಬಂದಿದೆ. 

ಕ್ಷಣವೂ ಯೋಚಿಸದೆ ಸಂಪ್‌ನೊಳಗೆ ಇಳಿದು ಆ ಮಗುವನ್ನು ರಕ್ಷಿಸಿ ಮೇಲಕ್ಕೆ ತಂದಿದ್ದಾರೆ. ಬಳಿಕ ಸಮೀಪ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ. ಸಕಾಲಕ್ಕೆ ನೀರಿನಿಂದ ಮೇಲೆ ತೆಗೆದು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ ಹಿನ್ನೆಲೆಯಲ್ಲಿ ಮಗು ಪ್ರಾಣಾಪಾಯದಿಂದ ಪಾರಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಿಎಸ್‌ಐ ನಾಗರಾಜು ಅವರ ಧೈರ್ಯ ಹಾಗೂ ಕಾರ್ಯಕ್ಕೆ ಸ್ಥಳೀಯರು ಜನರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಾಣಾಪಾಯದಲ್ಲಿದ್ದ ಮಗುವನ್ನು ರಕ್ಷಿಸುವ ಮುಖಾಂತರ ಬ್ಯಾಟರಾಯನಪುರ ಸಂಚಾರ ಪೊಲೀಸ್‌ ಠಾಣೆಯ ಪಿಎಸ್‌ಐ ನಾಗರಾಜು ಅವರು ಪೊಲೀಸ್‌ ಇಲಾಖೆ ಹೆಮ್ಮೆ ತರುವಂತಹ ಅತ್ಯುತ್ತಮ ಕೆಲಸ ಮಾಡಿದ್ದಾರೆ. -ಎಂ.ಎನ್‌.ಅನುಚೇತ್‌, ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ವೈಯಕ್ತಿಕ ಕಾರಣದಿಂದ ಬೇಸತ್ತು ಕಿರುತೆರೆ ಯುವ ನಟಿ ಆತ್ಮ*ತ್ಯೆ
ಪೊಲೀಸರಿಗೆ ಹಣಕ್ಕೆ ಬೇಡಿಕೆ ಇಟ್ಟ ಆರೋಪ : ಪತ್ರಕರ್ತ ವಶ