ಕನ್ನಡಪ್ರಭ ವಾರ್ತೆ ಬೆಂಗಳೂರು
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಅತ್ತೆ-ಮಾವನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಆಟೋ ಚಾಲಕನನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮಹಾಲಕ್ಷ್ಮೀ ಲೇಔಟ್ ನಿವಾಸಿ ಪಾಂಡುರಂಗ ಅಲಿಯಾಸ್ ಚಂದು (32) ಬಂಧಿತ ಆರೋಪಿ. ಮಾ.6 ರಂದು ಮಧ್ಯಾಹ್ನ ತರಬನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಪಾಂಡುರಂಗನ ಪತ್ನಿ ಸುಮಲತಾ (27), ಈಕೆಯ ತಂದೆ ಶ್ರೀರಾಮ್ (48), ತಾಯಿ ಮಂಜುಳಾ (43) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಾಲಕ್ಷ್ಮೀ ಲೇಔಟ್ ನಿವಾಸಿ ಪಾಂಡುರಂಗ ಆಟೋ ಚಾಲಕ ವೃತ್ತಿ ಮಾಡುತ್ತಿದ್ದಾನೆ. ಕೌಟುಂಬಿಕ ಕಾರಣಕ್ಕೆ ನಾಲ್ಕು ವರ್ಷಗಳಿಂದ ಮೊದಲ ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸವಾಗಿದ್ದ ಸುಮಲತಾ, ಮೆಟ್ರೋದಲ್ಲಿ ಕೆಲಸ ಮಾಡುತ್ತಿದ್ದರು. ಮೂರು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪಾಂಡುರಂಗನಿಗೆ ಸುಮಲತಾಳ ಪರಿಚಯವಾಗಿತ್ತು. ಬಳಿಕ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಕೆಲ ತಿಂಗಳ ಹಿಂದೆ ಮದುವೆಯಾಗಿದ್ದು, ಮಹಾಲಕ್ಷ್ಮೀ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಇಬ್ಬರ ನಡುವೆ ಕೌಟುಂಬಿಕ ಕಾರಣಕ್ಕೆ ಜಗಳ ನಡೆದಿದೆ. ಅದರಿಂದ ಬೇಸತ್ತಿದ್ದ ಆಕೆ, ಕೆಲ ದಿನಗಳ ಹಿಂದೆ ಪತಿಯ ಮನೆಯಿಂದ ತರಬನಳ್ಳಿಯಲ್ಲಿರುವ ತವರು ಮನೆಗೆ ಬಂದು ವಾಸವಾಗಿದ್ದರು.ದ್ವಿಚಕ್ರ ವಾಹನ ಕೊಡದ್ದಕ್ಕೆ ಗಲಾಟೆ
ಮಾ.6 ರಂದು ಮಧ್ಯಾಹ್ನ ಪತ್ನಿಯ ತವರು ಮನೆಗೆ ಬಂದಿದ್ದ ಆರೋಪಿ, ತಾನು ಕೊಡಿಸಿರುವ ದ್ವಿಚಕ್ರ ವಾಹನವನ್ನು ವಾಪಸ್ ಕೊಡುವಂತೆ ಕೇಳಿದ್ದ. ಆಗ ಪತ್ನಿ ಹಾಗೂ ಆಕೆಯ ಮನೆಯವರು ಕೊಡಲು ಹಿಂದೇಟು ಹಾಕಿದ್ದರು. ಆಗ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಅದು ವಿಕೋಪಕ್ಕೆ ಹೋದಾಗ ಪೆಟ್ರೋಲ್ ತಂದು ಪತ್ನಿ ಮತ್ತು ಆಕೆಯ ಪಾಲಕರ ಮೇಲೆ ಎರಚಿ ಬೆಂಕಿ ಹಚ್ಚಿದ್ದ. ಸ್ಥಳೀಯರು ಕೂಡಲೇ ಮೂವರನ್ನು ರಕ್ಷಣೆ ಮಾಡಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಿವಿಂಗ್ ಟುಗೆದರ್ ನಂತರ ಮದುವೆ
ಮಹಾಲಕ್ಷ್ಮೀ ಲೇಔಟ್‌ನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ಪಾಂಡುರಂಗ ಮತ್ತು ಸುಮಲತಾ ಆರಂಭದಲ್ಲಿ ಲಿವಿಂಗ್ ಟುಗೆದರ್‌ನಲ್ಲಿದ್ದು, ಕಳೆದ ವರ್ಷ ಮದುವೆಯಾಗಿದ್ದರು ಎನ್ನಲಾಗಿದೆ. ಆದರೆ, ಆರೋಪಿ ಇತ್ತೀಚೆಗೆ ಬೇರೊಂದು ಯುವತಿ ಜತೆ ಓಡಾಡುತ್ತಿದ್ದ ವಿಚಾರ ತಿಳಿದು ಸುಮಲತಾ ಎರಡು ತಿಂಗಳ ಹಿಂದೆ ಆತನಿಂದಲೂ ದೂರವಾಗಿದ್ದಳು ಎಂದು ಹೇಳಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.