ಕನ್ನಡಪ್ರಭ ವಾರ್ತೆ ಮೈಸೂರು

ಕಳೆದ ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆದಿರುವ 24 ಅಪರಾಧ ಕೃತ್ಯಗಳನ್ನು ಪತ್ತೆ ಹಚ್ಚಿ, 29.97 ಲಕ್ಷ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೈಸೂರು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ಅಲ್ಲದೆ, ಎನ್‌ ಡಿಪಿಎಸ್ ಕಾಯ್ದೆಯಡಿ 55 ಪ್ರಕರಣ ದಾಖಲಿಸಿಕೊಂಡು 1 ಕೆ.ಜಿ 860 ಗ್ರಾಂ ತೂಕದ ಗಾಂಜಾ ಮತ್ತು 0.10 ಎಂಎಲ್ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಲಾಟರಿ ಕಾಯ್ದೆಯಡಿ 14 ಪ್ರಕರಣ ದಾಖಲಿಸಿಕೊಂಡು 2.26 ಲಕ್ಷ ರು. ಮೌಲ್ಯದ ಲಾಟರಿ ಟಿಕೆಟ್ ವಶಪಡಿಸಿಕೊಳ್ಳಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

9 ಪ್ರಕರಣಗಳಲ್ಲಿ 10.46 ಲಕ್ಷ ರು. ಮೌಲ್ಯದ 279 ಗ್ರಾಂ. ಚಿನ್ನಾಭರಣ, 5 ಪ್ರಕರಣಗಳಲ್ಲಿ 3.76 ಲಕ್ಷ ರು. ಹಣ, 6 ಪ್ರಕರಣಗಳಲ್ಲಿ 14.33 ಲಕ್ಷ ರು. ಮೌಲ್ಯದ 8 ವಾಹನ, 3 ಪ್ರಕರಣಗಳಲ್ಲಿ 82 ಸಾವಿರ ರು. ಮೌಲ್ಯದ ಹಾರ್ಡ್‌ ವೇರ್ ಮತ್ತು ಎಲೆಕ್ಟ್ರೀಕ್ ವಸ್ತುಗಳು ಮತ್ತು 1 ಪ್ರಕರಣದಲ್ಲಿ 58 ಸಾವಿರ ರು. ಮೌಲ್ಯದ 2 ಜಾನುವಾರು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಮಾದಕ ವಸ್ತು ಹಾವಳಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ವಿಶೇಷವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, 56 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ ಗಾಂಜಾ ಹೆಚ್ಚಾಗಿ ಪತ್ತೆಯಾಗಿದೆ ಎಂದರು.


ಜಿಲ್ಲೆಯ ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇನ್ಸ್‌ ಪೆಕ್ಟರ್, ಎಸ್‌ಐ ನೇತೃತ್ವದಲ್ಲಿ ಅಪರಾಧ ಪತ್ತೆಗಾಗಿ 4 ರಿಂದ 5 ಮಂದಿ ಸಿಬ್ಬಂದಿಯ ಪ್ರತ್ಯೇಕ ತಂಡ ರಚಿಸಲಾಗಿದ್ದು, ಜಿಲ್ಲೆಯಲ್ಲಿ ದಾಖಲಾದ ಪ್ರಕರಣಗಳ ಪತ್ತೆಗೆ ಈ ತಂಡ ಕಾರ್ಯಾಚರಣೆ ನಡೆಸುವ ಮೂಲಕ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದರು.

ಜೈಲಿನಲ್ಲಿದ್ದಾಗಲೇ ಕಳ್ಳತನಕ್ಕೆ ಸ್ಕೆಚ್:

ಹುಣಸೂರು ತಾಲೂಕಿನ ಬಿಳಿಕೆರೆ ಬಳಿ ಪೆಟ್ರೋಲ್ ಬಂಕ್ ನಲ್ಲಿ ನಡೆದಿದ್ದ ಸುಲಿಗೆ ಪ್ರಕರಣದಲ್ಲಿ 5 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಮೊದಲೇ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆಗೆ ಒಳಗಾಗಿದ್ದ ಆರೋಪಿಗಳು, ಜೈಲಿನಲ್ಲಿದ್ದುಕೊಂಡೇ ಕಳ್ಳತನಕ್ಕೆ ಸ್ಕೆಚ್ ಹಾಕಿ, ಹೊರ ಬಂದ ನಂತರ ಕಳ್ಳತನ ಮಾಡಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಎಸ್ಪಿ ತಿಳಿಸಿದರು.

ಹೆಚ್ಚುವರಿ ಎಸ್ಪಿಗಳಾದ ಎಲ್. ನಾಗೇಶ್, ಸಿ. ಮಲ್ಲಿಕ್, ಡಿವೈಎಸ್ಪಿ ರವಿ, ಬಿಳಿಕೆರೆ ಠಾಣೆ ಇನ್ಸ್ ಪೆಕ್ಟರ್ ಟಿ.ಎಂ. ಪುನೀತ್ ಇದ್ದರು.

ಹುಣಸೂರು ದರೋಡೆ- ಚಿನ್ನ ವಶ ಪಡೆಯುವುದೇ ಸವಾಲು

ಜಿಲ್ಲೆಯ ಹುಣಸೂರಿನ ಚಿನ್ನದಂಡಗಡಿಯಲ್ಲಿ ದರೋಡೆಯಾಗಿದ್ದ 8 ಕೆ.ಜಿ.ಚಿನ್ನವನ್ನು ವಶಪಡಿಸಿಕೊಳ್ಳುವುದು ಸವಾಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 11 ಆರೋಪಿಗಳು ಭಾಗಿಯಾಗಿರುವುದು ತಿಳಿದು ಬಂದಿದೆ. ಆರೋಪಿಗಳಲ್ಲಿ ಓರ್ವ ಆಂಧ್ರ ಮೂಲದವನು, ಉಳಿದವರು ಬಿಹಾರದವರು. ಈ ಪೈಕಿ ಚೋಟು ಸಿಂಗ್, ಪಂಕಜ್, ಮಹಮದ್ ಅರ್ಮನ್, ಸೋನು ಸಿಂಗ್ ಎಂಬುವರನ್ನು ಬಂಧಿಸಲಾಗಿದೆ. ಈವರೆಗೆ 60 ಗ್ರಾಂ ಚಿನ್ನವನ್ನಷ್ಟೇ ವಶಕ್ಕೆ ಪಡೆಯಲಾಗಿದೆ ಎಂದು ಮೈಸೂರು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ದರೋಡೆ ಮಾಡಿದ ಚಿನ್ನವನ್ನು ಇಬ್ಬರು ಆರೋಪಿಗಳು ಕೊಂಡೊಯ್ದಿದ್ದಾರೆ. ಅವರನ್ನು ಬಂಧಿಸಿದರೆ ಚಿನ್ನವನ್ನು ಏನು ಮಾಡಿದ್ದಾರೆಂದು ತಿಳಿಯುತ್ತದೆ. ಉಳಿದ ಚಿನ್ನವನ್ನು ವಶಕ್ಕೆ ಪಡೆಯುವುದು ಸದ್ಯಕ್ಕಂತೂ ಸವಾಲಾಗಿದ್ದು, ಆರೋಪಿಗಳು ಅಂತರ ರಾಜ್ಯ ಕಳ್ಳರಾಗಿದ್ದಾರೆ. ಹೀಗಾಗಿ, ಆಂಧ್ರ, ಬಿಹಾರ, ಒರಿಸ್ಸಾ ಮತ್ತು ಕರ್ನಾಟಕದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದರು.