ಕಾರು ಹರಿದು ಆಡುತ್ತಿದ್ದ ಮಗು ಸಾವು

KannadaprabhaNewsNetwork |  
Published : Dec 17, 2023, 01:45 AM ISTUpdated : Dec 17, 2023, 01:46 AM IST
Bellanduru | Kannada Prabha

ಸಾರಾಂಶ

ಆಟವಾಡುತ್ತಿದ್ದ ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಕಾರಿನ ಚಕ್ರ ಹರಿದು ಸಾವು

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಪಾರ್ಟ್‌ಮೆಂಟ್‌ ಎದುರು ಆಟವಾಡುತ್ತಿದ್ದ ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಕಾರಿನ ಚಕ್ರ ಹರಿದು ಆಂತರಿಕ ರಕ್ತಸ್ರಾವವಾಗಿ ಆ ಮಗು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಕಸವನಹಳ್ಳಿಯ ಸಮೃದ್ಧಿ ಅಪಾರ್ಟ್‌ಮೆಂಟ್‌ನ ಸೆಕ್ಯೂರಿಗಾರ್ಡ್‌ ಜೋಗ್ ಜತಾರ್‌ ಅವರ ಪುತ್ರಿ ಅರ್ಬಿನಾ(3) ಮೃತ ದುರ್ದೈವಿ. ಡಿ.9ರಂದು ಬೆಳಗ್ಗೆ 8.30ರ ಸುಮಾರಿಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ಮಗುವಿನ ತಂದೆ ನೀಡಿದ ದೂರಿನ ಮೇರೆಗೆ ಕಾರು ಚಾಲಕ ಸುಮನ್‌ ಸಿ.ಕೇಶವದಾಸ್‌ ವಿರುದ್ಧ ಬೆಳ್ಳಂದೂರು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವಿವರ:

ನೇಪಾಳ ಮೂಲದ ಜೋಗ್ ಜತಾರ್‌ ಕಸವನಹಳ್ಳಿಯ ಸಮೃದ್ದಿ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ದಂಪತಿಗೆ ಉಳಿದುಕೊಳ್ಳಲು ಅಪಾರ್ಟ್‌ಮೆಂಟ್‌ನ ನೆಲಮಹಡಿಯಲ್ಲೇ ಕೊಠಡಿ ನೀಡಲಾಗಿತ್ತು. ಡಿ.9ರಂದು ಬೆಳಗ್ಗೆ 8.30ರ ಸುಮಾರಿಗೆ ಜೋಗ್‌ ಜತಾರ್‌ ಪುತ್ರಿ ಅರ್ಬಿನಾ ಅಪಾರ್ಟ್‌ಮೆಂಟ್‌ನ ಎದುರಿನ ಪಾದಾಚಾರಿ ಮಾರ್ಗದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್‌ನಿಂದ ಕಾರೊಂದು ಹೊರಗೆ ಬಂದಿದ್ದು, ಪಾದಾಚಾರಿ ಮಾರ್ಗದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆಯೇ ಹರಿಸಿಕೊಂಡು ಹೋಗಿದೆ. ಇದರಿಂದ ಮಗುವಿನ ಬಲಭುಜ ಹಾಗೂ ಕೈ-ಕಾಲುಗಳಿಗೆ ಗಾಯಗಳಾಗಿ ಜೋರಾಗಿ ಅಳಲು ಆರಂಭಿಸಿದೆ. ಮಗು ಗೇಟಿಗೆ ಸಿಲುಕಿ ಗಾಯಗೊಂಡಿರಬಹುದು ಎಂದು ತಂದೆ ಭಾವಿಸಿದ್ದಾರೆ. ನಿಮ್ಹಾನ್ಸ್‌ಗೆ ಕರೆದೊಯ್ದಾಗ ಮಗು ಮೃತಪಟ್ಟಿರುವುದು ಖಚಿತವಾಗಿದೆ.

ಸೇಂಟ್ ಜಾನ್ಸ್‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಮಗುವಿನ ದೇಹದೊಳಗೆ ತೀವ್ರ ರಕ್ತಸ್ರಾವವಾಗಿರುವುದು ಕಂಡು ಬಂದಿದೆ. ಈ ಸಾವಿನ ಬಗ್ಗೆ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳ್ಳಂದೂರು ಠಾಣೆ ಪೊಲೀಸರು, ಅಪಾರ್ಟ್‌ಮೆಂಟ್‌ ಬಳಿ ತೆರಳಿ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಆಟವಾಡುತ್ತಿದ್ದ ಮಗುವಿನ ಮೇಲೆ ವ್ಯಕ್ತಿಯೊಬ್ಬ ಕಾರು ಹತ್ತಿಸಿಕೊಂಡು ಹೋಗಿರುವುದು ಕಂಡು ಬಂದಿದೆ.

ಚಿತ್ರ: ಅಪಾರ್ಟ್‌ಮೆಂಟ್‌ ಎದುರು ಆಟವಾಡುತ್ತಿದ್ದ ಮಗುವಿಗೆ ಕಾರು ಡಿಕ್ಕಿ ಹೊಡೆಯುತ್ತಿರುವುದು.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!