ಜಮೀನಿನಲ್ಲಿ ತುಂಡಾದ ವಿದ್ಯುತ್ ತಂತಿ ಸ್ಪರ್ಶಿಸಿ ರೈತ ಸ್ಥಳದಲ್ಲೇ ಸಾವು

KannadaprabhaNewsNetwork | Updated : Jun 28 2024, 04:30 AM IST

ಸಾರಾಂಶ

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ರೈತ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಪಾಂಡವಪುರ ತಾಲೂಕಿನ ಅಮೃತಿ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. 

 ಪಾಂಡವಪುರ : ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ರೈತ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಅಮೃತಿ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

ಗ್ರಾಮದ ಕುಮಾರ್ (40) ಮೃತ ರೈತ. ಕುಮಾರ್ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದ್ದಾನೆ. ವಿದ್ಯುತ್ ಸ್ಪರ್ಶಕ್ಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಜಮೀನಿನ ಬಳಿ ಅಕ್ಕಪಕ್ಕದ ರೈತರು ಹೋದಾಗ ಕುಮಾರ್ ಮೃತಪಟ್ಟಿರುವುದನ್ನು ಖಚಿತ ಪಡಿಸಿದ್ದಾರೆ. ಬಳಿಕ ಮೃತ ದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಬಳಿಗೆ ಆಗಮಿಸಿದ ಕೆಪಿಸಿಸಿ ಪ್ರಧಾನ ಕಾರ್‍ಯದರ್ಶಿ ಎಚ್.ತ್ಯಾಗರಾಜು ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮೃತ ರೈತ ಕುಮಾರ್ ಕುಟುಂಬಕ್ಕೆ ಸೆಸ್ಕ್ ಇಲಾಖೆಯಿಂದ ಸೂಕ್ತಪರಿಹಾರ ದೊರಕಿಸಿಕೊಡಬೇಕೆಂದು ಒತ್ತಾಯಿಸಿದ್ದರು.

ಮೃತ ಕುಮಾರ್ ಅವರಿಗೆ ಪತ್ನಿ ರೇಖಾ, ಇಬ್ಬರು ಮಕ್ಕಳಿದ್ದಾರೆ. ಘಟನೆ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾವೇರಿ ನದಿಯಲ್ಲಿ ಈಜಲು ಹೋಗಿ ಯುವಕ ಸಾವು

ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಯುವಕ ಮೃತಪಟ್ಟಿರುವ ಘಟನೆ ಪಟ್ಟಣ ಹೊರವಲಯದ ಕಾವೇರಿ ಕನ್ಯಾ ಗುರುಕುಲದ ಬಳಿ ನಡೆದಿದೆ. ಚಿಕ್ಕಮಗಳೂರು ನಿವಾಸಿ ಶಿವಮೂರ್ತಿ ಪುತ್ರ ಬಿ.ಎಸ್. ಸಂದೀಪ್‌ಕುಮಾರ್ (29) ಮೃತ ಯುವಕ. ಈತ ಚಿಕ್ಕಬಳ್ಳಾಪುರದ ಇಶಾ ಫೌಂಡೇಷನ್ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದನು. ತನ್ನ 20 ಸ್ವಯಂ ಸೇವಕ ಸ್ನೇಹಿತರೊಂದಿಗೆ ಕಳೆದ 2-3 ದಿನಗಳ ಹಿಂದೆ ಕಾವೇರಿ ಕನ್ಯಾಗುರುಕುಲಕ್ಕೆ ಆಗಮಿಸಿ ವಾಸ್ತವ್ಯ ಹೂಡಿದ್ದರು. ಗುರುವಾರ ಮಧ್ಯಾಹ್ನ ಐದಾರು ಸ್ನೇಹಿತರೊಂದಿಗೆ ಕಾವೇರಿ ನದಿಗಿಳಿದು ಈಜಾಡುತ್ತಿದ್ದ ವೇಳೆ ನೀರಲ್ಲಿ ಮುಳಗಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ಶವ ಪತ್ತೆ

ಮದ್ದೂರು:

ಪಟ್ಟಣದ ಮರಕಾಡದೊಡ್ಡಿ ಗೇಟ್ ಬಳಿ ಇರುವ ನವಕಾರ್ ಟೈಲ್ ಆಂಡ್ ಗ್ರಾನೈಟ್ ಅಂಗಡಿ ಮಳಿಗೆ ಮುಂಭಾಗ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಅಪರಿಚಿತ ವ್ಯಕ್ತಿಗೆ 40 ರಿಂದ 45 ವರ್ಷ, 5.5 ಅಡಿ ಎತ್ತರ, ದುಂಡುಮುಖ, ಎಣ್ಣೆಗೆಂಪು ಬಣ್ಣ, ಧೃಢಕಾಯ ಶರೀರ, ಬಿಳಿ ತಲೆ ಕೂದಲು, ಎದೆಯ ಗೂಡಿನ ಬಳಿ ಒಂದು ಕಪ್ಪು ಕಾರಳ್ಳು, ಹಣೆಯ ಮಧ್ಯೆ ಒಂದು ಗಂಟು ಇದ್ದು ಕೆಂಪು ಬಣ್ಣದ ಟೀ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್, ಸೊಂಟದಲ್ಲಿ 2 ಎಳೆ ಕಪ್ಪು ಉಡುದಾರವಿದೆ. ವಾರಸುದಾರರಿದ್ದಲ್ಲಿ ದೂ-08232-232170/468245, ಮೊ-9480804869 ನ್ನು ಸಂಪರ್ಕಿಸುವಂತೆ ಮದ್ದೂರು ಪೊಲೀಸ್ ಠಾಣಾಧಿಕಾರಿಗಳು ತಿಳಿಸಿದ್ದಾರೆ.

Share this article