ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನಾಲ್ಕು ವರ್ಷದ ಪುತ್ರಿ ಕೊಂದು ಗ್ರಾ.ಪಂ. ಅಧ್ಯಕ್ಷೆ ಆತ್ಮಹತ್ಯೆ

KannadaprabhaNewsNetwork |  
Published : Feb 18, 2025, 01:45 AM ISTUpdated : Feb 18, 2025, 04:14 AM IST
deadbody

ಸಾರಾಂಶ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ 4 ವರ್ಷದ ಮಗಳನ್ನು ಕೊಂದು ಬಳಿಕ ಗ್ರಾಮ ಪಂಚಾಯಿತಿ ಅಧ್ಯಕ್ಷೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಹೊರವಲಯದ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ 4 ವರ್ಷದ ಮಗಳನ್ನು ಕೊಂದು ಬಳಿಕ ಗ್ರಾಮ ಪಂಚಾಯಿತಿ ಅಧ್ಯಕ್ಷೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಹೊರವಲಯದ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಾಗಸಂದ್ರದ ಎಂ.ಎಸ್‌.ರಾಮಯ್ಯ ಲೇಔಟ್ ನಿವಾಸಿ, ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಗುಂಡಾರನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಜಿ.ಕೆ.ಶೃತಿ (34) ಹಾಗೂ ಆಕೆಯ ಪುತ್ರಿ ರೋಷಣಿ (4) ಮೃತ ದುರ್ದೈವಿಗಳು. ಈ ಘಟನೆ ಸಂಬಂಧ ಮೃತಳ ಪತಿ ಗೋಪಾಲಕೃಷ್ಣ ಹಾಗೂ ಆತನ ಗೆಳತಿ ಸಾಯಿ ಸುಮಾ ವಿರುದ್ಧ ಪ್ರಕರಣ ದಾಖಲಾಗಿದೆ. ಮನೆಯಲ್ಲಿ ಮಗಳನ್ನು ಭಾನುವಾರ ಸಂಜೆ ನೇಣು ಬಿಗಿದು ಕೊಂದ ತಾಯಿ ಬಳಿಕ ತಾನು ಸಹ ನೇಣಿಗೆ ಕೊರಳೊಡ್ಡಿದ್ದಾಳೆ. ಕೆಲ ಹೊತ್ತಿನ ಬಳಿಕ ಮೃತಳ ಮನೆಯಲ್ಲಿ ಆಕೆಯ ಪುತ್ರನ ಅಳಲು ಕೇಳಿ ನೆರೆಹೊರೆಯರು ಜಮಾಯಿಸಿದಾಗ ಈ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶೃತಿ ಹಾಗೂ ಖಾಸಗಿ ಲೆಕ್ಕಪರಿಶೋಧಕ ಗೋಪಾಲಕೃಷ್ಣ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಬೆಂಗಳೂರು ಹಾಗೂ ತುಮಕೂರಿನಲ್ಲಿ ಅಡಿಟರ್‌ ಕೆಲಸ ಮಾಡಿಕೊಂಡಿದ್ದ ಗೋಪಾಲ, ತನ್ನೂರಿನ ಕಡೆ ರಾಜಕೀಯವಾಗಿ ಸಕ್ರಿಯವಾಗಿದ್ದು, ಗ್ರಾಪಂ ಚುನಾವಣೆಯಲ್ಲಿ ಪತ್ನಿ ಶೃತಿ ಅವರನ್ನು ಗೆಲ್ಲಿಸಿ ಅಧ್ಯಕ್ಷೆಯನ್ನಾಗಿ ಕೂಡ ಮಾಡಿದ್ದರು.

ಕೆಲ ದಿನಗಳಿಂದ ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪ ಮೂಡಿದ್ದು, ಆಗಾಗ್ಗೆ ಮನೆಯಲ್ಲಿ ಜಗಳವಾಗುತ್ತಿದ್ದರು. ತನ್ನ ಪತಿಗೆ ಪರಸ್ತ್ರೀ ಜತೆ ಅನೈತಿಕ ಸಂಬಂಧವಿದೆ ಎಂದು ಶೃತಿ ಆರೋಪಿಸಿದ್ದಳು. ಕೊನೆಗೆ 2 ಕುಟುಂಬಗಳ ಹಿರಿಯರು ಮಧ್ಯ ಪ್ರವೇಶಿಸಿ ಸತಿ-ಪತಿ ನಡುವೆ ರಾಜಿ ಸಂಧಾನಕ್ಕೂ ಯತ್ನಿಸಿ ವಿಫಲವಾಗಿದ್ದರು. ಪತಿ ಜತೆಗೆ ಮುನಿಸಿಕೊಂಡಿದ್ದಳು.

ಪತಿಗೆ ಆತ್ಮಹತ್ಯೆ ಕುರಿತು ನಿರಂತರ ಮೆಸೇಜ್:

ಕಳೆದೊಂದು ವಾರದಿಂದ ಗ್ರಾಪಂ ಅಧ್ಯಕ್ಷೆ ಶೃತಿ ದಂಪತಿ ಮಧ್ಯೆ ಕೌಟುಂಬಿಕ ಕಲಹ ವಿಪರೀತಕ್ಕೆ ಹೋಗಿದ್ದು, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತಿಗೆ ನಿರಂತರವಾಗಿ ಶೃತಿ ಮೆಸೇಜ್‌ ಕಳುಹಿಸಿದ್ದರು. ಮೊದ ಮೊದಲು ಗಂಭೀರವಾಗಿ ಪರಿಗಣಿಸಿ ಆಕೆಯನ್ನು ಸಂತೈಸಲು ಆತ ಪ್ರಯತ್ನಿಸಿದ್ದಾನೆ. ಆದರೆ ಇದೇ ರೀತಿ ಮೆಸೇಜ್ ಮುಂದುವರೆಸಿದಾಗ ಆ ಸಂದೇಶಗಳನ್ನು ಆತ ಲಘುವಾಗಿ ತೆಗೆದುಕೊಂಡಿದ್ದಾನೆ ಎನ್ನಲಾಗಿದೆ. ಕೆಲಸದ ನಿಮಿತ್ತ ಭಾನುವಾರ ತುಮಕೂರಿಗೆ ಗೋಪಾಲಕೃಷ್ಣ ತೆರಳಿದ್ದ. ಆಗ ಮನೆಯಲ್ಲಿ ಮಕ್ಕಳ ಜತೆ ಇದ್ದ ಶೃತಿ, ಸಂಜೆ 6 ಗಂಟೆ ಸುಮಾರಿಗೆ ಮಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ.

ಮನೆಯಯಿಂದ ಹೋರಗಿದ್ದ ಮಗ ಪಾರು:

ಮನೆಯಲ್ಲಿ ಮಗಳನ್ನು ಕೊಂದು ಶೃತಿ ಆತ್ಮಹತ್ಯೆ ಮಾಡಿಕೊಂಡ ವೇಳೆ ಮನೆಯಲ್ಲಿ ಆಕೆಯ ಪುತ್ರ ಸಹ ಇದ್ದ. ಪಕ್ಕದ ರೂಮ್‌ನಲ್ಲಿದ್ದ ಕಾರಣಕ್ಕೆ ಮಗ ಅಪಾಯದಿಂದ ಪಾರಾಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

ಮೃತ ಶೃತಿ ಸೋದರ ಶಶಿಧರ್ ದೂರು ಆಧರಿಸಿ ಆತ್ಮಹತ್ಯೆ ಯತ್ನ ಆರೋಪದಡಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಮ್ಮ ಪತಿ ಗೋಪಾಲಕೃಷ್ಣ ವಿರುದ್ಧ ಮೃತಳು ಅನೈತಿಕ ಸಂಬಂಧ ಬಗ್ಗೆ ಆರೋಪಿಸಿದ್ದಾರೆ. ಅಲ್ಲದೆ ಮರಣ ಪತ್ರ ಸಹ ಇದೇ ಎಂದು ಮೃತರ ಕುಟುಂಬದವರು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆದಿದೆ.

- ಸೈದುಲು ಅದಾವತ್, ಡಿಸಿಪಿ, ಉತ್ತರ ವಿಭಾಗ

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಉದ್ಯಾನಕ್ಕೆ ಮೀಸಲಿಟ್ಟ ಜಾಗದ ರಕ್ಷಣೆ ಡಿಸಿ, ಸ್ಥಳೀಯ ಸಂಸ್ಥೆ ಕರ್ತವ್ಯ: ಕೋರ್ಟ್‌
9 ಟನ್‌ ಮದ್ಯದ ಬಾಟಲ್‌, ಚಪ್ಪಲಿ ರಾಶಿ ತೆರವು - ಎಂ.ಜಿ.ರಸ್ತೆಯಲ್ಲಿ ಕಡಿವಾಣಕ್ಕೆ ಬೇಸರ