ಆಕ್ಸಿಡೆಂಟ್‌ಗೆ ಗೆಳೆಯ ಬಲಿ ಆಗಿದ್ದನ್ನುಕಂಡು ಫ್ಲೈಓವರಿಂದ ಜಿಗಿದ ಸ್ನೇಹಿತ

KannadaprabhaNewsNetwork | Updated : Jan 15 2024, 11:49 AM IST

ಸಾರಾಂಶ

ರಸ್ತೆ ಅಪಘಾತದಲ್ಲಿ ಸ್ನೇಹಿತರ ಮೃತಪಟ್ಟಿದ್ದನ್ನು ಕಣ್ಣಾರೆ ಕಂಡ ಮತ್ತೊಬ್ಬ, ಮೇಲ್ಸೇತುವೆಯಿಂದ ಹಾರಿ ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರಿನ ಮಾಳಗಾಳದಲ್ಲಿ ನಡೆದಿದೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೈಕ್‌ ಅಪಘಾತದಲ್ಲಿ ಸ್ನೇಹಿತ ಸ್ಥಳದಲ್ಲಿ ಮೃತಪಟ್ಟಿದ್ದನ್ನು ಕಣ್ಣಾರೆ ನೋಡಿ ನೋವಿನಿಂದ ಮತ್ತೊಬ್ಬ ಸ್ನೇಹಿತ ಮೇಲ್ಸೇತುವೆಯಿಂದ ಕೆಳಗೆ ಜಿಗಿದು ಗಂಭೀರವಾಗಿ ಗಾಯಗೊಂಡ ಘಟನೆ ನಗರದಲ್ಲಿ ನಡೆದಿದೆ.

ಉತ್ತರಾಖಂಡ ಮೂಲದ ದಿನೇಶ್‌ ಭಟ್‌ (34) ಮೃತ ಹಿಂಬದಿ ಸವಾರ. ಸವಾರ ಟೀಕರಾಜ ಭಟ್‌ (33) ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಾಯಂಡಹಳ್ಳಿ ಜಂಕ್ಷನ್‌ ಕಡೆಯಿಂದ ರಿಂಗ್‌ ರಸ್ತೆಯಲ್ಲಿ ತುಮಕೂರು ರಸ್ತೆ ಕಡೆಗೆ ತೆರಳುವಾಗ ಮಾರ್ಗ ಮಧ್ಯೆ ಮಾಳಗಾಳ ಕೆಳ ಸೇತುವೆ ಮೇಲೆ ಸತ್ವ ಅಪಾರ್ಟ್‌ಮೆಂಟ್‌ ಎದುರು ಭಾನುವಾರ ಮುಂಜಾನೆ 2 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

ತಲೆ ಮೇಲೆ ಉರುಳಿದ ವಾಹನದ ಚಕ್ರ: ದಿನೇಶ್‌ ಭಟ್‌ ಮತ್ತು ಟೀಕರಾಜ ಭಟ್‌ ಇಬ್ಬರು ಬನಶಂಕರಿಯ ಖಾಸಗಿ ಕಾಲೇಜಿನ ಕ್ಯಾಂಟಿನ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಶನಿವಾರ ರಾತ್ರಿ ಇಬ್ಬರು ಮದ್ಯಪಾನ ಮಾಡಿದ್ದಾರೆ. 

ಬಳಿಕ ಮದ್ಯದ ನಶೆಯಲ್ಲಿ ಟೀಕರಾಜ ಭಟ್‌ ಹೋಂಡಾ ಆಕ್ವಿವಾ ಸ್ಕೂಟರ್‌ನಲ್ಲಿ ಸ್ನೇಹಿತ ದಿನೇಶ್‌ ಭಟ್‌ನನ್ನು ಕೂರಿಸಿಕೊಂಡು ರಿಂಗ್‌ ರಸ್ತೆಯಲ್ಲಿ ನಾಯಂಡಹಳ್ಳಿ ಜಂಕ್ಷನ್‌ ಕಡೆಯಿಂದ ತುಮಕೂರು ರಸ್ತೆಗೆ ಕಡೆಗೆ ಹೊರಟ್ಟಿದ್ದಾನೆ. 

ಮಾರ್ಗ ಮಧ್ಯೆ ಮಾಳಗಾಳ ಕೆಳಸೇತುವೆ ಮೇಲಿನ ರಸ್ತೆಯಲ್ಲಿ ದ್ವಿಚಕ್ರ ವಾಹನವು ನಿಯಂತ್ರಣ ತಪ್ಪಿದೆ. ಆಗ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಅಪರಿಚಿತ ವಾಹನವೊಂದರ ಚಕ್ರ ದಿನೇಶ್‌ ಭಟ್‌ನ ತಲೆ ಮೇಲೆ ಉರುಳಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೇಲ್ಸೇತುವೆಯಿಂದ ಜಿಗಿದ!
ಅಪಘಾತದ ವೇಳೆ ಸವಾರ ಟೀಕರಾಜ ಭಟ್‌ ಸಣ್ಣಪುಟ್ಟಗಳಾಗಿ ಪ್ರಾಣಪಾಯದಿಂದ ಪಾರಾಗಿದ್ದ. ಆದರೆ, ಕಣ್ಣೆದುರೇ ಸ್ನೇಹಿತ ದಿನೇಶ್‌ ಭಟ್‌ ದಾರುಣವಾಗಿ ಮೃತನಾದ ಹಿನ್ನೆಲೆಯಲ್ಲಿ ದುಃಖ ತಾಳಲಾರದೆ ಮೇಲ್ಸೇತುವೆಯಿಂದ ಸರ್ವಿಸ್‌ ರಸ್ತೆಗೆ ಜಿಗಿದಿದ್ದಾನೆ. 

ಈ ವೇಳೆ ಟೀಕರಾಜ ಭಟ್‌ನ ಬಲಗಾಲು ಮುರಿದು ಗಂಭೀರವಾಗಿ ಗಾಯಗೊಂಡಿದ್ದಾನೆ. ಬಳಿಕ ಸ್ಥಳೀಯರ ನೆರವಿನಿಂದ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸವಾರ ಟೀಕರಾಜ ಭಟ್‌ ಮದ್ಯದ ನಶೆಯಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ದ್ವಿಚಕ್ರ ವಾಹನ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. 

ರಸ್ತೆಗೆ ಬಿದ್ದಾಗ ಹಿಂಬದಿ ಸವಾರನ ತಲೆ ಮೇಲೆ ಚಕ್ರ ಹರಿಸಿಕೊಂಡು ಹೋಗಿರುವ ಅಪರಿಚಿತ ವಾಹನದ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article