ಮದ್ದೂರು: ಬೈಕ್‌ ಸ್ಕೂಟರ್ ಡಿಕ್ಕಿ, ಗಾಯಗೊಂಡಿದ್ದ ಚಾಲಕ ಸಾವು

KannadaprabhaNewsNetwork | Updated : Jan 15 2024, 01:16 PM IST

ಸಾರಾಂಶ

ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಬಳಿ ಕಳೆದ ಜ7ರಂದು ಬೈಕ್ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿತ್ತು. ತಾಲೂಕಿನ ಎಚ್.ಕೋಡಿಹಳ್ಳಿಯ ನಾಗರಾಜು ಪುತ್ರ ಸ್ಕೂಟರ್ ಚಾಲಕ ಹೇಮಂತ್ (21) ತೀವ್ರವಾಗಿ ಗಾಯಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಬಳಿ ಕಳೆದ ಜ7ರಂದು ಬೈಕ್ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿತ್ತು. ತಾಲೂಕಿನ ಎಚ್ ಕೋಡಿಹಳ್ಳಿಯ ನಾಗರಾಜು ಪುತ್ರ ಸ್ಕೂಟರ್ ಚಾಲಕ ಹೇಮಂತ್ (21) ತೀವ್ರವಾಗಿ ಗಾಯಗೊಂಡಿದ್ದರು.

ಹೇಮಂತ್ ತಮ್ಮ ಪತ್ನಿ ಲೀಲಾವತಿ ಹಾಗೂ ಮಗ ದೃವಿಕ ಜೊತೆ ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಇಂದಿನಿಂದ ಬಂದ ಮರಿಸ್ವಾಮಿ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು

ಅಪಘಾತದಲ್ಲಿ ಮರಿಸ್ವಾಮಿ ಮೃತಪಟ್ಟಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಹೇಮಂತ್ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನಂತರ ಮಂಡ್ಯ ಡಿ ಆರ್ ಎಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೇಮಂತ್ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮುಂಜಾನೆ 4.45 ರ ಸುಮಾರಿಗೆ ಅಸುನೀಗಿದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ನಿರ್ಜನ ಪ್ರದೇಶದಲ್ಲಿ ಮಹಿಳೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

ನಾಗಮಂಗಲ: ತಾಲೂಕಿನ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಹರ್ಷ ಗ್ರ್ಯಾಂಡ್ ಹೋಟೆಲ್ ಸಮೀಪದ ನಿರ್ಜನ ಪ್ರದೇಶದಲ್ಲಿ ಶನಿವಾರ ಸಂಜೆ ಅನುಮಾನಸ್ಪದ ರೀತಿಯಲ್ಲಿ ಮಹಿಳೆ ಮೃತದೇಹ ಅರೆಬರೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ತಿರುಮಲಾಪುರ ಗ್ರಾಮದ ಮಂಗಮ್ಮನ ಪುತ್ರಿ ಮುರುಗಮ್ಮ (30) ಎಂಬ ಬುದ್ಧಿಮಾಂದ್ಯ ಮಹಿಳೆ ಮೃತದೇಹವಾಗಿದೆ.

ಮನೆ ತೊರೆದು ರಸ್ತೆ ಬದಿಯಲ್ಲಿಯೇ ಓಡಾಡಿಕೊಂಡಿದ್ದ ಈಕೆಯನ್ನು ಯಾರೋ ಅತ್ಯಾಚಾರವೆಸಗಿ ಕೊಲೆ ಮಾಡಿರಬಹುದೆಂಬ ಅನುಮಾನದ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ಕೊಟ್ಟ ಬೆಳ್ಳೂರು ಠಾಣೆ ಪಿಎಸ್‌ಐ ಬಸವರಾಜ ಚಿಂಚೋಳಿ ಪರಿಶೀಲನೆ ನಡೆಸಿ ಕಳೆದ ನಾಲ್ಕೈದು ದಿನಗಳ ಹಿಂದೆಯೇ ಈ ಮಹಿಳೆ ಮೃತಪಟ್ಟಿರುವುದರಿಂದ ದೇಹ ಕೊಳೆತ ಸ್ಥಿತಿಯಲ್ಲಿದೆ.

ನಿರ್ಜನ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿರುವುದರಿಂದ ಹೇಗೆ ಸತ್ತಿರಬಹುದೆಂಬುದನ್ನು ನಿಖರವಾಗಿ ಹೇಳಲು ಸಾಧ್ಯಾಗುತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಮುರುಗಮ್ಮನ ಮೃತದೇಹವನ್ನು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದರು.

ಅನುಮಾನಾಸ್ಪದ ರೀತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಎಸ್ಪಿ ಎನ್.ಯತೀಶ್, ಎಎಸ್ಪಿ ತಿಮ್ಮಯ್ಯ, ಡಿವೈಎಸ್‌ಪಿ ಲಕ್ಷ್ಮೀನಾರಾಯಣಪ್ರಸಾದ್, ಸಿಪಿಐ ನಿರಂಜನ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. 

ಭಾನುವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮುರುಗಮ್ಮನ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಈ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article