ಜೆಟ್‌ಲ್ಯಾಗ್ ಪಬ್‌ನಲ್ಲಿ ‘ಕಾಟೇರ’ ಚಿತ್ರ ತಂಡ ಅವಧಿ ಮೀರಿ ಪಾರ್ಟಿ ಮಾಡಿದ ಪ್ರಕರಣ ಸಂಬಂಧ ಘಟನೆ ದಿನ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಎರಡು ಬಾರಿ ಪಬ್‌ಗೆ ತೆರಳಿ ಮುಚ್ಚುವಂತೆ ಸೂಚನೆ ನೀಡಿರುವುದಕ್ಕೆ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳು ಲಭ್ಯವಾಗಿವೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಜೆಟ್‌ಲ್ಯಾಗ್ ಪಬ್‌ನಲ್ಲಿ ‘ಕಾಟೇರ’ ಚಿತ್ರ ತಂಡ ಅವಧಿ ಮೀರಿ ಪಾರ್ಟಿ ಮಾಡಿದ ಪ್ರಕರಣ ಸಂಬಂಧ ಘಟನೆ ದಿನ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಎರಡು ಬಾರಿ ಪಬ್‌ಗೆ ತೆರಳಿ ಮುಚ್ಚುವಂತೆ ಸೂಚನೆ ನೀಡಿರುವುದಕ್ಕೆ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳು ಲಭ್ಯವಾಗಿವೆ.
ಜ.3ರಂದು ಮಧ್ಯರಾತ್ರಿ ಜೆಟ್‌ಲ್ಯಾಗ್ ಪಬ್‌ನಲ್ಲಿ ಕಾಟೇರ ಚಿತ್ರತಂಡ ಪಾರ್ಟಿ ಮಾಡಿದೆ ಎನ್ನಲಾಗಿದೆ. ಈ ಸಂಬಂಧ ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿದಂತೆ 8 ಮಂದಿ ಸೆಲಿಬ್ರಿಟಿಗಳಿಗೆ ಸುಬ್ರಹ್ಮಣ್ಯನಗರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಅದರಂತೆ ಶುಕ್ರವಾರ ಎಲ್ಲಾ ಸೆಲಿಬ್ರಿಟಿಗಳು ವಿಚಾರಣೆ ಎದುರಿಸಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಅಂದು ನಾವು ಪಾರ್ಟಿ ಮಾಡಲು ಪಬ್‌ಗೆ ಹೋಗಿರಲಿಲ್ಲ. ಊಟ ಮಾಡಲು ಹೋಗಿದ್ದೆವು. ಅಡುಗೆಯವರು ಊಟ ಸಿದ್ಧಪಡಿಸಿ ನೀಡುವುದು ವಿಳಂಬವಾದ ಹಿನ್ನೆಲೆಯಲ್ಲಿ ಕೊಂಚ ತಡವಾಗಿ ಉಟ ಮಾಡಿ ಹೊರಟ್ಟಿದ್ದೆವು.
ಈ ಸಮಯದಲ್ಲಿ ಪೊಲೀಸರು ಪಬ್‌ಗೆ ಬಂದಿರಲಿಲ್ಲ ಎಂದು ಗಟ್ಟಿಯಾಗಿ ಹೇಳಿದ್ದರು. ಆದರೆ, ಅಂದು ತಡರಾತ್ರಿ ಮತ್ತು ಮುಂಜಾನೆ ಎರಡು ಬಾರಿ ಪೊಲೀಸರು ಪಬ್‌ಗೆ ತೆರಳಿ ಪಬ್ ಮುಚ್ಚುವಂತೆ ಸೂಚಿಸಿರುವುದಕ್ಕೆ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಸಿಕ್ಕಿವೆ.
ಪೊಲೀಸರ ಎಫ್‌ಐಆರ್‌ನಲ್ಲಿ ಏನಿದೆ?
ಜ.3ರಂದು ತಡರಾತ್ರಿ 12.49ಕ್ಕೆ ಪಬ್‌ಗೆ ತೆರಳಿದ್ದ ಪೊಲೀಸರು, ಗ್ರಾಹಕರನ್ನು ಹೊರಗೆ ಕಳುಹಿಸಿ ಪಬ್ ಮುಚ್ಚಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಚಿತ್ರತಂಡದ ಬಗ್ಗೆ ಪ್ರಶ್ನಿಸಿದಾಗ, ‘ಸಿನಿಮಾ ಮೀಟಿಂಗ್ ನಡೆಸುತ್ತಿದ್ದಾರೆ.
20 ನಿಮಿಷದಲ್ಲಿ ಎಲ್ಲರೂ ಹೊರಡಲಿದ್ದಾರೆ. ಈಗಾಗಲೇ ಬಾರ್ ಕೌಂಟರ್ ಮುಚ್ಚಲಾಗಿದೆ’ ಎಂದು ಪಬ್ ಸಿಬ್ಬಂದಿ ಹೇಳಿದ್ದಾರೆ. ಬಳಿಕ ಪೊಲೀಸರು ಪಬ್ ಗೇಟ್ ಮುಚ್ಚಿಸಿ ಗಸ್ತು ಕರ್ತವ್ಯಕ್ಕೆ ತೆರಳಿದ್ದಾರೆ.
ಬಳಿಕ ಮುಂಜಾನೆ 2.51ರ ಸುಮಾರಿಗೆ ಪೊಲೀಸರು ಮತ್ತೆ ಪಬ್ ಬಳಿ ಬಂದಾಗ ಹೊರಗಡೆ ಜನ ಗುಂಪು ಗೂಡಿರುವುದು ಕಂಡು ಬಂದಿದೆ. ಬಳಿಕ ಎಲ್ಲರನ್ನೂ ಕಳುಹಿಸಿ ಪಬ್ ಪ್ರವೇಶಿಸಿದ್ದಾರೆ.
ಬಳಿಕ ಪಬ್ ಮುಚ್ಚಿಸಿ, ಪೊಲೀಸ್ ನಿಯಮ ಮತ್ತು ಅಬಕಾರಿ ಕಾಯ್ದೆ ಉಲ್ಲಂಘಿಸಿದ ಆರೋಪದಡಿ ಪಬ್‌ನ ಮಾಲೀಕರಾದ ಶಶಿರೇಖಾ ಹಾಗೂ ವ್ಯವಸ್ಥಾಪಕ ಪ್ರಶಾಂತ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.