ಹಳ್ಳಿಗಳಲ್ಲಿ ಕುರಿ-ಮೇಕೆ, ಹಸು ಕದಿಯುತ್ತಿದ್ದ ಗ್ಯಾಂಗ್‌ ಬಂಧನ

KannadaprabhaNewsNetwork |  
Published : Oct 17, 2024, 01:36 AM IST
amaresh | Kannada Prabha

ಸಾರಾಂಶ

ನಗರದ ಹೊರವಲಯದಲ್ಲಿ ಕುರಿ ಹಾಗೂ ಜಾನುವಾರುಗಳನ್ನು ಕದಿಯುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರ ಹೊರವಲಯದ ಹಳ್ಳಿಗಳಲ್ಲಿ ಕುರಿ-ಮೇಕೆ ಹಾಗೂ ಹಸುಗಳನ್ನು ಕಳವು ಮಾಡುತ್ತಿದ್ದ ಖದೀಮರ ಗ್ಯಾಂಗ್‌ವೊಂದನ್ನು ಚಿಕ್ಕಜಾಲ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ರುಕ್ಕುಪೇಟೆ ಗ್ರಾಮದ ಪರಶುರಾಮ, ಸಿಂಧನೂರು ತಾಲೂಕಿನ ಅಂಬರಮಠದ ಅಮರೇಶ ಅಲಿಯಾಸ್ ಗುನ್ನಾ, ಸೋಮಲಾಪುರದ ರಮೇಶ ಅಲಿಯಾಸ್ ಜೋಗಿ, ಹುಲುಗಪ್ಪ, ವೆಂಕಟೇಶ್‌ ಹಾಗೂ ಹುಬ್ಬಳ್ಳಿಯ ನೇಕಾರನಗರದ ಈರಣ್ಣ ಬಂಧಿತರು. 29 ಕುರಿ ಮತ್ತು ಮೇಕೆಗಳು, ₹2.5 ಲಕ್ಷ ರು ನಗದು ಹಾಗೂ ಬೋಲೆರೋ ಪಿಕ್ ಆಪ್‌ ಜೀಪು ಸೇರಿದಂತೆ ₹12 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಚಿಕ್ಕಜಾಲ ವ್ಯಾಪ್ತಿಯ ಗ್ರಾಮಗಳಲ್ಲಿ ರಾತ್ರಿ ವೇಳೆ ಕುರಿ-ಮೇಕೆ ಹಾಗೂ ದನಗಳು ಸರಣಿ ಕಳ್ಳತನವಾಗಿದ್ದವು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಚಿಕ್ಕಬಾಣವಾರ ಸಮೀಪ ಕುರಿ ಕಳ್ಳರ ಗ್ಯಾಂಗ್‌ನನ್ನು ಬಂಧಿಸಿದ್ದಾರೆ.

ಹೇರ್‌ ಪಿನ್ ಮಾರುವ ನೆಪದಲ್ಲಿ ಕುರಿ ಶೆಡ್‌ ಗುರುತು:

ಆರೋಪಿಗಳ ಪೈಕಿ ರಮೇಶ ಅಲಿಯಾಸ್ ಜೋಗಿ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣಗಳಿವೆ. ಈ ತಂಡ ರಾತ್ರಿ ಹಳ್ಳಿಗಳಲ್ಲಿ ರೈತರು ನಿದ್ರೆಯಲ್ಲಿದ್ದಾಗ ಕುರಿ, ಮೇಕೆ ಹಾಗೂ ಹಸುಗಳನ್ನು ಕದ್ದು ಮಾರಾಟ ಮಾಡುತ್ತಿತ್ತು. ಹಗಲು ಹೊತ್ತಿನಲ್ಲಿ ಹಳ್ಳಿಗಳಿಗೆ ಹೇರ್‌ ಪಿನ್‌ ಸೇರಿದಂತೆ ಸೌಂದರ್ಯವರ್ಧಕಗಳ ಮಾರಾಟ ನೆಪದಲ್ಲಿ ಜೋಗಿ ತೆರಳುತ್ತಿದ್ದ. ಆ ವೇಳೆ ಕುರಿ, ಮೇಕೆ ಸಾಕಿರುವ ರೈತರ ಮನೆಗಳನ್ನು ಗುರುತಿಸುತ್ತಿದ್ದ. ಊರ ಹೊರಗೆ ಕೊಟ್ಟಿಗೆಗಳನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸುತ್ತಿದ್ದರು.

ನಸುಕಿನಲ್ಲಿ ಬೊಲೆರೋ ವಾಹನದಲ್ಲಿ ತೆರಳಿ ರೈತರಿಗೆ ಗೊತ್ತಾಗದಂತೆ ಸಾಕು ಪ್ರಾಣಿಗಳನ್ನು ಕಳ‍ವು ಮಾಡುತ್ತಿದ್ದರು.

ಅದೇ ರೀತಿ ದೊಡ್ಡಜಾಲ ಗ್ರಾಮದಲ್ಲಿ ಸೆ.19 ರಂದು ರೈತರ ಮನೆಯಲ್ಲಿ 10 ಹಸುಗಳು ಹಾಗೂ 25 ಕುರಿ ಮತ್ತು ಮೇಕೆಗಳನ್ನು ರಾತ್ರೋರಾತ್ರಿ ಕಳವು ಮಾಡಿದ್ದರು. ಬೆಳಗ್ಗೆ ಎದ್ದು ಕೊಟ್ಟಿಗೆ ತೆರಳಿದ ರೈತನಿಗೆ ಆಘಾತವಾಯಿತು. ತಕ್ಷಣವೇ ಪಕ್ಕದ ಗ್ರಾಮಗಳಾದ ಬಿಲ್ಲಮಾರನಹಳ್ಳಿ ಮತ್ತು ಶೆಟ್ಟಿಗೆರೆಗೆ ತೆರಳಿ ಅವರು ವಿಚಾರಿಸಿದಾಗ ಆ ಹಳ್ಳಿಗಳಲ್ಲಿ ಕೂಡ ಕುರಿ, ಮೇಕೆ ಹಾಗೂ ಹಸುಗಳು ಕಳ್ಳತನವಾಗಿರುವ ಸಂಗತಿ ಗೊತ್ತಾಯಿತು. ಬಳಿಕ ಈ ಕಳ್ಳತನ ಕುರಿತು ಚಿಕ್ಕಜಾಲ ಠಾಣೆಗೆ ತೆರಳಿ ರೈತರು ದೂರು ಸಲ್ಲಿಸಿದ್ದರು. ತನಿಖೆಗಿಳಿದ ಪೊಲೀಸರು, ಆ ಹಳ್ಳಿಗಳ ವ್ಯಾಪ್ತಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕುರಿ-ಮೇಕೆ ತುಂಬಿಕೊಂಡು ಸಾಗಿಸುತ್ತಿದ್ದ ಬೋಲೆರೋ ಜೀಪಿನ ಸಂಚಾರದ ದೃಶ್ಯಾವಳಿ ಪತ್ತೆಯಾಗಿದೆ. ಈ ಸುಳಿವು ಬೆನ್ನಹತ್ತಿದ್ದಾಗ ಕೊನೆಗೆ ಚಿಕ್ಕಬಾಣವಾರದ ಪೈಪ್‌ಲೈನ್ ಬಳಿ ಕುರಿ-ಮೇಕೆಗಳಿದ್ದ ಬೋಲೆರೋ ಸಿಕ್ಕಿದೆ. ಕೂಡಲೇ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ 15 ಹಳ್ಳಿಗಳಲ್ಲಿ ನಡೆದಿದ್ದ ಕಳ್ಳತನ ಕೃತ್ಯಗಳು ಬಯಲಾಗಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ತಡೆಗೋಡೆಗೆ ಕಾರು ಡಿಕ್ಕಿ: ನವ ವಿವಾಹಿತೆ ಸಾವು
ಬೈರತಿಗೆ ಮಧ್ಯಂತರ ಬೇಲಿಲ್ಲ, ಸಿಐಡಿ ಶೋಧ