ಬೆಂಗಳೂರು : ತಡರಾತ್ರಿ ಸ್ನೇಹಿತರ ಭೇಟಿಗೆ ಕಾದಿದ್ದವಳ ಕರೆದೊಯ್ದು ಗ್ಯಾಂಗ್‌ ರೇಪ್‌

KannadaprabhaNewsNetwork | Updated : Feb 22 2025, 04:16 AM IST

ಸಾರಾಂಶ

ತಡರಾತ್ರಿ ಸ್ನೇಹಿತರ ಭೇಟಿಗೆ ಬಂದಿದ್ದ ಮಹಿಳೆಯನ್ನು ಕರೆದೊಯ್ದು ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿರುವ ಪೈಶಾಚಿಕ ಘಟನೆ ಕೋರಮಂಗಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ತಡರಾತ್ರಿ ಸ್ನೇಹಿತರ ಭೇಟಿಗೆ ಬಂದಿದ್ದ ಮಹಿಳೆಯನ್ನು ಕರೆದೊಯ್ದು ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿರುವ ಪೈಶಾಚಿಕ ಘಟನೆ ಕೋರಮಂಗಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೋರಮಂಗಲದ ಹೋಟೆಲ್‌ವೊಂದರ ಮಹಡಿಯಲ್ಲಿ ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದೆ. ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿರುವ 33 ವರ್ಷದ ಸಂತ್ರಸ್ತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಕೆ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಗಳಾದ ಪಶ್ಚಿಮ ಬಂಗಾಳ ಮತ್ತು ಉತ್ತರಖಂಡ್‌ ಮೂಲದ ಅಜಿತ್‌, ವಿಶ್ವ, ಶಿಭುಲ್‌, ಶೋಭನ್‌ ಎಂಬುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?

ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿರುವ ಸಂತ್ರಸ್ತೆ ದೆಹಲಿ ಮೂಲದವರು. ಆದರೆ, ನಗರದ ವ್ಯಕ್ತಿಯನ್ನು ಮದುವೆಯಾಗಿ ಹಲವು ವರ್ಷಗಳಿಂದ ನಗರದಲ್ಲೇ ನೆಲೆಸಿದ್ದಾರೆ. ಮದುವೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಕೇಟರಿಂಗ್‌ನಲ್ಲಿ ಊಟ ಬಡಿಸುವ ಕೆಲಸ ಮಾಡುತ್ತಿದ್ದರು. ಗುರುವಾರ ತಡರಾತ್ರಿ ಸ್ನೇಹಿತರ ಭೇಟಿಯಾಗಲು ಕೋರಮಂಗಲದ ಜ್ಯೋತಿ ನಿವಾಸ ಕಾಲೇಜು ಜಂಕ್ಷನ್‌ನಲ್ಲಿ ಕಾಯುತ್ತಿದ್ದರು. ಈ ವೇಳೆ ನಾಲ್ವರು ಆರೋಪಿಗಳು ಅಲ್ಲಿಗೆ ಬಂದಿದ್ದು, ಆತ್ಮೀಯವಾಗಿ ಮಾತನಾಡಿಸಿದ್ದಾರೆ. ಬಳಿಕ ಹೋಟೆಲ್‌ವೊಂದರ ಮಹಡಿಗೆ ಕರೆದೊಯ್ದು ಒಟ್ಟಿಗೆ ಊಟ ಮಾಡಿದ್ದಾರೆ.

ಸಾಮೂಹಿಕ ಅತ್ಯಾಚಾರ:

ಬಳಿಕ ನಾಲ್ವರು ಆರೋಪಿಗಳು ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಬಳಿಕ ಆಕೆಯ ಪ್ರತಿರೋಧದ ನಡುವೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ. ಮುಂಜಾನೆ 6 ಗಂಟೆ ವರೆಗೂ ತಮ್ಮ ವಶದಲ್ಲೇ ಇರಿಸಿಕೊಂಡು ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಸಿ ಬಿಟ್ಟು ಕಳುಹಿಸಿದ್ದಾರೆ. ಬಳಿಕ ಸಾವರಿಸಿಕೊಂಡು ಮನೆಗೆ ಬಂದ ಸಂತ್ರಸ್ತೆ, ನಡೆದ ಘಟನೆ ಬಗ್ಗೆ ಪತಿಗೆ ಹೇಳಿದ್ದಾರೆ. ಬಳಿಕ 112 ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಸಂತ್ರಸ್ತೆಯನ್ನು ಸಂಪರ್ಕಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ನಂತರ ಸಂತ್ರಸ್ತೆಯ ಹೇಳಿಕೆ ಪಡೆದು ಕ್ಷಿಪ್ರ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ನಾಲ್ವರು ಆರೋಪಿಗಳೂ ಹೊರರಾಜ್ಯದವರು. ಕೋರಮಂಗಲದ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆ ಮಾಡಿಸಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಈ ಸಂಬಂಧ ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಸಂತ್ರಸ್ತೆ ತಮ್ಮ ಸ್ನೇಹಿತರ ಭೇಟಿಗಾಗಿ ಕಾಯುವಾಗ ಆರೋಪಿಗಳು ಆಕೆಯನ್ನು ಹೋಟೆಲ್‌ವೊಂದರ ಟೆರಸ್‌ಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಶುಕ್ರವಾರ ಬೆಳಗ್ಗೆ ಘಟನೆ ಬಗ್ಗೆ ನಮಗೆ ಗೊತ್ತಾಯಿತು. ತಕ್ಷಣ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಸದ್ಯ ಸಂತ್ರಸ್ತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಆಕೆಯ ಆರೋಗ್ಯ ಸ್ಥಿರವಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

- ಸಾರಾ ಫಾತಿಮಾ, ಆಗ್ನೇಯ ವಿಭಾಗದ ಡಿಸಿಪಿ.

Share this article