ಬೀದರ್‌ : ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿ ಕೊಲೆಯಲ್ಲಿ ಅಂತ್ಯ

KannadaprabhaNewsNetwork | Updated : Dec 03 2024, 06:34 AM IST

ಸಾರಾಂಶ

ಮದ್ಯ ಮಾರಾಟಕ್ಕೆ ಮಾತ್ರ ಅನುಮತಿ ಇದ್ದರೂ ಸ್ಥಳದಲ್ಲೇ ಮದ್ಯ ಸೇವಿಸಲು ಅವಕಾಶ ಕಲ್ಪಿಸಿರುವ ಮದ್ಯದಂಗಡಿ ಮಾಲೀಕನ ಪರವಾನಗಿ ರದ್ದುಪಡಿಸುವಂತೆ ಸಂಬಂಧಿಸಿದವರಿಗೆ ಪತ್ರ ಬರೆಯಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ತಿಳಿಸಿದರು.

  ಬೀದರ್‌ : ನಗರದ ಗಣೇಶ ಮೈದಾನದ ಬಳಿ ವ್ಯಕ್ತಿಯೊಬ್ಬರ ಕೊಲೆಗೆ ಸಂಬಂಧಿಸಿದ ಪ್ರಕರಣದ ಆರೋಪಿಗಳಿಬ್ಬರನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ತಿಳಿಸಿದರು.

ಅವರು ನಗರದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಟೋ ಚಾಲಕನಾಗಿದ್ದ ಅಂಬರೀಶ ವಿಠಲ್‌ ಕೋಳಿ ಎಂಬಾತ ನ.29ರ ರಾತ್ರಿ 9ರ ಸುಮಾರಿಗೆ ನಗರದ ಗಣೇಶ ಮೈದಾನದ ಬಳಿಯ ಮದ್ಯದ ಅಂಗಡಿಯೊಂದರಲ್ಲಿ ಮದ್ಯ ಸೇವಿಸುತ್ತಿದ್ದ , ಈ ಸಂದರ್ಭ ರಾಜಕುಮಾರ ಹಾಗೂ ಅನೀಲ ಎಂಬಿಬ್ಬರ ಜೊತೆ ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿ ಕೊಲೆಯಲ್ಲಿ ಅಂತ್ಯವಾಗಿದೆ.ಮದ್ಯ ಮಾರಾಟಕ್ಕೆ ಮಾತ್ರ ಅನುಮತಿ ಇದ್ದರೂ ಸ್ಥಳದಲ್ಲೇ ಮದ್ಯ ಸೇವಿಸಲು ಅವಕಾಶ ಕಲ್ಪಿಸಿರುವ ಮದ್ಯದಂಗಡಿ ಮಾಲೀಕನ ಪರವಾನಗಿ ರದ್ದುಪಡಿಸುವಂತೆ ಸಂಬಂಧಿಸಿದವರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.ಪೊಲೀಸ್‌ ಕಾರ್ಯಕ್ಕೆ ಶ್ಲಾಘನೆ :

ನೂತನ ನಗರ ಠಾಣೆ ಪೊಲೀಸ್‌ ಇನ್ಸ್ಪೆಕ್ಟರ್‌ ವಿಜಯಕುಮಾರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ನವೀನ್‌, ನಿಂಗಪ್ಪ, ಭರತ್‌, ಪ್ರಕಾಶ, ಗಂಗಾಧರ ಹಾಗೂ ಸುಧಾಕರ ಇದ್ದರು. ಆರೋಪಿಗಳನ್ನು ಅತ್ಯಂತ ಶೀಘ್ರದಲ್ಲಿ ಪತ್ತೆ ಹಚ್ಚುವಲ್ಲಿ ಕಾರ್ಯನಿರ್ವಹಿಸಿದ ಪೊಲೀಸ್‌ ಅಧಿಕಾರಿ, ಸಿಬ್ಬಂದಿಗಳಿಗೆ ಶ್ಲಾಘಿಸಿದ್ದಾಗಿ ಎಸ್‌ಪಿ ಪ್ರದೀಪ ಗುಂಟಿ ತಿಳಿಸಿದರು.ಸುಳ್ಳು ಪತ್ತೆ ಪರೀಕ್ಷೆ:

ಔರಾದ್‌ ತಾಲೂಕಿನ ಚಿಂತಾಕಿ ಗ್ರಾಮದ ಬಳಿ ಅನೀಲ್‌ ರಾಠೋಡ ನಿಗೂಢ ಸಾವಿನ ಪ್ರಕರಣ ತನಿಖೆ ನಡೆಸಲಾಗಿದ್ದು, ಇಬ್ಬರು ಆರೋಪಿ ಗಳನ್ನು ವಿಚಾರಣೆಗೆ ಒಳಪಡಿಸಿದ್ದಷ್ಟೇ ಅಲ್ಲ ತಂತ್ರಜ್ಞಾನ ಆಧಾರಿತ ಸುಳ್ಳು ಪತ್ತೆ ಪರೀಕ್ಷೆಯಲ್ಲಿಯೂ ಆರೋಪಿಗಳು ಅಮಾಯಕರಾಗಿದ್ದಾರೆ ಎಂದು ತಾಂತ್ರಿಕ ಸಾಕ್ಷ್ಯಗಳ ವರದಿ ಬಂದಿದೆ, ಅನೀಲ್‌ ರಾಠೋಡ್‌ ನೀರಿನಲ್ಲಿ ಮುಳಗಿ ಉಸಿರುಗಟ್ಟಿ ಸಾವಿಗೀಡಾಗಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿಸಲಾಗಿದೆ ಎಂದು ತಿಳಿಸಿದರು.ಆರೋಪಿಗಳು ವಿಚಾರಣೆಗೆ ಹಾಜರಾಗುತ್ತಲಿದ್ದಾರೆ. ತನ್ನ ಮಗನನ್ನು ಕೊಲೆ ಮಾಡಲಾಗಿದೆ ಎಂದು ಮೃತ ಅನೀಲ್‌ ತಾಯಿ ದೂರು ನೀಡಿದ್ದರಿಂದ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಸ್ಪಷ್ಟಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಮಹೇಶ ಮೇಘಣ್ಣನವರ್‌ ಹಾಗೂ ಚಂದ್ರಕಾಂತ ಪೂಜಾರಿ, ಡಿವೈಎಸ್‌ಪಿ ಶಿವನಗೌಡ ಪಾಟೀಲ್‌, ಡಿಎಆರ್‌ ಡಿವೈಎಸ್‌ಪಿ ಶರಣಬಸಪ್ಪ ಕೂಡ್ಲಿ ಸೇರಿದಂತೆ ಮತ್ತಿತರ ಪೊಲೀಸ್‌ ಅಧಿಕಾರಿಗಳು ಇದ್ದರು.

ತಡರಾತ್ರಿಯೂ ವಹಿವಾಟು, ಜನ ಸಂಚಾರ

ನಗರದಲ್ಲಿ ರಾತ್ರಿ 10ರ ನಂತರ ವ್ಯಾಪಾರ ವಹಿವಾಟು, ಅನಗತ್ಯ ಜನ ಸಂಚಾರವನ್ನು ನಿಯಂತ್ರಿಸುವ ವ್ಯವಸ್ಥೆಯು ಎಂದಿನಂತೆ ಜಾರಿ ಯಲ್ಲಿದ್ದು, ಕೆಲವೆಡೆ ನಿಯಮಗಳ ಉಲ್ಲಂಘನೆ ಆಗುತ್ತಿರುವ ಕುರಿತಾದ ದೂರುಗಳಿಗೆ ಸಂಬಂಧಿಸಿದಂತೆ ನಗರಸಭೆಯೊಂದಿಗೆ ಮಾಹಿತಿ ಪಡೆದು ಶಿಸ್ತು ಕ್ರಮ ಕೈಗೊಳ್ಳಲಾಗುವದು ಎಂದು ಎಸ್‌ಪಿ ಪ್ರದೀಪ ಗುಂಟಿ ತಿಳಿಸಿದರು.ವಾಹನ ಸವಾರರಿಗೆ ಹೆಲ್ಮೆಟ್‌ ಹಾಗೂ ಸೀಟ್‌ ಬೆಲ್ಟ್‌ ಕಡ್ಡಾಯವಾಗಿದ್ದರೂ ಸಂಚಾರ ನಿಯಮ ಉಲ್ಲಂಘನೆ ಆಗುತ್ತಿವೆ. ನಿತ್ಯವೂ ಒಂದು ಲಕ್ಷ ರು.ಗಳವರೆಗೆ ದಂಡ ವಸೂಲಿ ಮಾಡಲಾಗುತ್ತಿದೆ. ಇನ್ಮುಂದೆ ತಪಾಸಣೆಯನ್ನು ಮತ್ತಷ್ಟು ಬಿಗಿಗೊಳಿಸಲಾಗುತ್ತದೆ. ಸಂಚಾರ ನಿಯಮ ಉಲ್ಲಂಘನೆಗೆ ಅವಕಾಶ ನೀಡದೇ ಅಪಘಾತರಹಿತ ವಾಹನ ಸಂಚಾರಕ್ಕೆ ಸಾರ್ವಜನಿಕರು ಮುಂದಾಗಲಿ ಎಂದು ಅವರು ತಿ‍ಳಿಸಿದರು.

Share this article