ಕನ್ನಡಪ್ರಭ ವಾರ್ತೆ ಬೆಂಗಳೂರು
ಮೊಬೈಲ್ ವಿಚಾರವಾಗಿ ಜಗಳವಾಡುತ್ತಿದ್ದ ಅಕ್ಕ-ತಂಗಿಯರ ಮಧ್ಯೆ ಪ್ರವೇಶಿಸಿದ ಸಂಬಂಧಿ, ಸಿಟ್ಟಿಗೆದ್ದು ಅಕ್ಕನ ತಲೆಗೆ ದೊಣ್ಣೆಯಿಂದ ಹೊಡೆದು ಹತ್ಯೆಗೈದಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಿಂಗಸಂದ್ರದ ನಿವಾಸಿ ಗೂಡಿಯಾ ದೇವಿ (42) ಮೃತ ದುರ್ದೈವಿ. ಈ ಹತ್ಯೆ ಸಂಬಂಧ ಮೃತಳ ಸಂಬಂಧಿ ರಾಜೇಶ್ ಕುಮಾರ್‌ನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮನೆಯಲ್ಲಿ ಭಾನುವಾರ ದೇವಿ ಹಾಗೂ ಆಕೆಯ ತಂಗಿ ನಡೆದ ಜಗಳದಲ್ಲಿ ಮಧ್ಯೆ ಪ್ರವೇಶಿಸಿ ಅವರ ಸಂಬಂಧಿ ರಾಜೇಶ್ ಈ ಕೃತ್ಯ ಎಸಗಿದ್ದಾನೆ.
ಮೃತ ದೇವಿ ಹಾಗೂ ಸಂಬಂಧಿ ರಾಜೇಶ್ ಮೂಲತಃ ಬಿಹಾರ ರಾಜ್ಯದವರಾಗಿದ್ದು, ನಾಲ್ಕು ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದರು. ಬಳಿಕ ಗಾರ್ಮೆಂಟ್ಸ್‌ನಲ್ಲಿ ದೇವಿ ಸೋದರಿಯರು ಕೆಲಸಕ್ಕೆ ಸೇರಿದರೆ, ಸ್ವಿಗ್ಗಿ ಡೆಲವರಿ ಬಾಯ್ ಆಗಿ ರಾಜೇಶ್ ದುಡಿಯುತ್ತಿದ್ದ.
ಈ ಮೂವರು ಸಿಂಗಸಂದ್ರದ ಬಾಡಿಗೆ ಮನೆಯಲ್ಲಿ ಒಟ್ಟಿಗೆ ನೆಲೆಸಿದ್ದರು. ಮನೆಯಲ್ಲಿ ಸಣ್ಣಪುಟ್ಟ ವಿಚಾರವಾಗಿ ದೇವಿ ಸೋದರರು ಕಿತ್ತಾಡುತ್ತಿದ್ದರು.
ಅಂತೆಯೇ ಭಾನುವಾರ ಮಧ್ಯಾಹ್ನ ಮೊಬೈಲ್ ವಿಷಯವಾಗಿ ಅವರಿಬ್ಬರು ಜಗಳವಾಡುತ್ತಿದ್ದರು. ಆಗ ಸಿಟ್ಟಿಗೆದ್ದ ರಾಜೇಶ್, ‘ಯಾವಾಗಲೂ ಯಾಕೆ ಜಗಳವಾಡುತ್ತೀರಾ’ ಎಂದು ಬೈದಿದ್ದಾನೆ.
ಈ ಮಾತಿಗೆ ದೇವಿ ಆಕ್ಷೇಪಿಸಿದಾಗ ಕೆರಳಿದ ಆತ, ದೇವಿ ತಲೆಗೆ ದೊಣ್ಣೆಯಿಂದ ಬಾರಿಸಿದ್ದಾನೆ. ಆಗ ಕೆಳಗೆ ಆಕೆಯ ಕುತ್ತಿಗೆಯನ್ನು ಹಿಸುಕಿ ಉಸಿರುಗಟ್ಟಿಸಿ ಕೊಂದು ಪರಾರಿ ಆಗಿದ್ದಾನೆ.
ಕೂಡಲೇ ಈ ಘಟನೆ ಬಗ್ಗೆ ಪೊಲೀಸರಿಗೆ ಮೃತಳ ಸೋದರಿ ಮಾಹಿತಿ ನೀಡಿದ್ದಾಳೆ. ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಕೃತ್ಯ ಎಸಗಿದ ಬಳಿಕ ತಪ್ಪಿಸಿಕೊಂಡಿದ್ದ ರಾಜೇಶ್‌ನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಆಟೋ ನಿಲ್ಲಿಸುವ ವಿಚಾರಕ್ಕೆ ಚಾಲಕರ ನಡುವೆ ಹೊಡೆದಾಟ: ಮೂವರ ಬಂಧನ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಪ್ರಗತಿಪುರದಲ್ಲಿ ಪಾರ್ಕಿಂಗ್ ವಿಚಾರವಾಗಿ ಆಟೋ ಚಾಲಕನ ಮೇಲೆ ಹಲ್ಲೆ ಪ್ರಕರಣ ಸಂಬಂಧ ತಂದೆ-ಮಗ ಸೇರಿದಂತೆ ಮೂವರನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರಗತಿಪುರದ ನಿವಾಸಿಗಳಾದ ಕರೀಂ, ಆತನ ಪುತ್ರ ಸೈಯದ್ ತಾಹಾ ಹಾಗೂ ಸಂಬಂಧಿ ಆಫ್ರಿದ್ ಪಾಷ ಬಂಧಿತರಾಗಿದ್ದು, ಸ್ಥಳೀಯ ನಿವಾಸಿ ಶಿವಕುಮಾರ್ ಮೇಲೆ ಆರೋಪಿಗಳು ಹಲ್ಲೆ ನಡೆಸಿದ ಆರೋಪ ಬಂದಿದೆ.
ಮನೆ ಬಳಿ ಆಟೋ ನಿಲ್ಲಿಸಿದ್ದಕ್ಕೆ ಭಾನುವಾರ ರಾತ್ರಿ ಶಿವಕುಮಾರ್ ಆಕ್ಷೇಪಿಸಿದ್ದಾರೆ. ಇದಕ್ಕೆ ಕೆರಳಿದ ಆರೋಪಿಗಳು, ಶಿವಕುಮಾರ್ ಕುಟುಂಬದ ಮೇಲೆ ದುಂಡಾವರ್ತನೆ ಮಾಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೈಯದ್ ತಾಹಾ ಹಾಗೂ ಶಿವಕುಮಾರ್ ಆಟೋ ಚಾಲಕರಾಗಿದ್ದು, ಹಲವು ವರ್ಷಗಳಿಂದ ಪ್ರಗತಿಪುರದಲ್ಲಿ ಇಬ್ಬರು ವಾಸವಾಗಿದ್ದಾರೆ. ಶಿವಕುಮಾರ್ ಮನೆ ಬಳಿ ಭಾನುವಾರ ರಾತ್ರಿ 8.30ರ ಸುಮಾರಿಗೆ ಆಟೋ ನಿಲ್ಲಿಸಲು ಸೈಯದ್ ತಾಹಾ ತೆರಳಿದ್ದಾನೆ.
ಆಗ ತಮ್ಮ ಆಟೋ ನಿಲ್ಲಿಸುವ ಜಾಗದಲ್ಲಿ ನೀನು ಯಾಕೆ ಆಟೋ ನಿಲ್ಲಿಸುತ್ತೀಯಾ ಎಂದು ಶಿವಕುಮಾರ್ ಕುಟುಂಬದವರು ಪ್ರಸ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಈ ಹಂತದಲ್ಲಿ ಕೆರಳಿದ ಶಿವಕುಮಾರ್, ತಾಹಾನಿಗೆ ಬಾರಿಸಿದ್ದಾನೆ. ಆಗ ತಿರುಗಿ ಬಿದ್ದ ತಾಹಾ ಹಾಗೂ ಆತನ ಕುಟುಂಬದವರು, ಶಿವಕುಮಾರ್ ಪರಿವಾರದ ಮೇಲೆ ಗಲಾಟೆ ಮಾಡಿದ್ದಾರೆ.
ಕೂಡಲೇ ಗಲಾಟೆ ಬಗ್ಗೆ ಮಾಹಿತಿ ಪಡೆದು ಪೊಲೀಸರು, ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಶಿವಕುಮಾರ್ ದೂರು ಆಧರಿಸಿ ಸೈಯದ್ ತಾಹಾ ಹಾಗೂ ತಂದೆ ಕರೀಂ ಸೇರಿ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಟ್ವಿಟ್ ಡಿಲೀಟ್ ಮಾಡಿದ ಸಿಂಹ
ತಮ್ಮ ಎಕ್ಸ್ ಖಾತೆಯಲ್ಲಿ ಈ ಗಲಾಟೆಯ ದೃಶ್ಯಾವಳಿಯನ್ನು ಹಂಚಿಕೊಂಡು ಹಿಂದೂಗಳನ್ನು ರಕ್ಷಿಸುವಂತೆ ಭಾನುವಾರ ರಾತ್ರಿ ಪೋಸ್ಟ್ ಮಾಡಿ ಕೆಲ ಹೊತ್ತಿನ ಬಳಿಕ ಆ ವಿಡಿಯೋವನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ಡಿಲೀಟ್ ಮಾಡಿದ್ದಾರೆ. ಆದರೆ ಅಷ್ಟರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಗಲಭೆ ಎಂದು ಸುದ್ದಿ ಹರಡಿತ್ತು.
ಈ ಹಿನ್ನಲೆಯಲ್ಲಿ ತಕ್ಷಣವೇ ಎಚ್ಚೆತ್ತ ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜ್ ಅವರು, ಪ್ರಗತಿಪುರದಲ್ಲಿ ಪಾರ್ಕಿಂಗ್ ವಿಷಯವಾಗಿ ಗಲಾಟೆ ನಡೆದಿದೆ ಹೊರತು ಕೋಮು ಸಂಘರ್ಷವಲ್ಲ ಎಂದು ಸ್ಪಷ್ಟಪಡಿಸಿದರು. ಬಳಿಕ ಪರಿಸ್ಥಿತಿ ಶಾಂತವಾಯಿತು.