ಸ್ನಾನದ ಮನೆಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಬೆತ್ತಲೆ ಸ್ಥಿತಿಯಲ್ಲಿ ಸಾವು..!

KannadaprabhaNewsNetwork | Updated : Feb 02 2024, 05:45 PM IST

ಸಾರಾಂಶ

ಮೃತ ಗಂಗಾಧರ್ ಹಾಗೂ ಪತ್ನಿ ಭವ್ಯ ದಾಂಪತ್ಯದಲ್ಲಿ ಬಿರುಕು ಉಂಟಾಗಿ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಕೋರ್ಟ್ ರಾಜೀಸಂಧಾನ ಮೂಲಕ ದಂಪತಿ ಒಂದಾಗುವಂತೆ ಮಾಡಿದ್ದರು. ಕಳೆದ ಆರು ತಿಂಗಳಿಂದ ಪಟ್ಟಣದ ಶಾಂತಿನಗರದ ಬಾಡಿಗೆ ಮನೆಯಲ್ಲಿ ದಂಪತಿ ವಾಸವಾಗಿದ್ದರು.

ಕನ್ನಡಪ್ರಭ ವಾರ್ತೆ ಪಾಂಡವಪುರಸ್ನಾನದ ಮನೆಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಬೆತ್ತಲೆ ಸ್ಥಿತಿಯಲ್ಲಿ ಸಾವನ್ನಪ್ಪಿದ್ದು, ಮಗನ ಸಾವಿಗೆ ಪತ್ನಿ, ಕುಟುಂಬಸ್ಥರು ಕಾರಣ ಎಂದು ಮೃತನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪಟ್ಟಣದ ನಿವಾಸಿ ಲೇ.ಶಿವಣ್ಣರ ಪುತ್ರ ಪುತ್ರ ಟಿ.ಎಸ್.ಗಂಗಾಧರ್ (42) ಮೃತ ವ್ಯಕ್ತಿ. ತಮಿಳುನಾಡು ಮೂಲದ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಮೃತ ಗಂಗಾಧರ್ ಮೂಲತಃ ಪಾಂಡವಪುರ ತಾಲೂಕಿನ ಕೆರೆತೊಣ್ಣೂರು ಗ್ರಾಮದವರು. ಅದೇ ಗ್ರಾಮದ ನಿವಾಸಿ ಬಸವೇಗೌಡರ ಪುತ್ರಿ ಭವ್ಯರನ್ನು ವಿವಾಹವಾಗಿದ್ದರು. ದಂಪತಿಗೆ ಒಂದು ಹೆಣ್ಣು ಮಗುವಿದೆ.

ಮೃತ ಗಂಗಾಧರ್ ಹಾಗೂ ಪತ್ನಿ ಭವ್ಯ ದಾಂಪತ್ಯದಲ್ಲಿ ಬಿರುಕು ಉಂಟಾಗಿ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಕೋರ್ಟ್ ರಾಜೀಸಂಧಾನ ಮೂಲಕ ದಂಪತಿ ಒಂದಾಗುವಂತೆ ಮಾಡಿದ್ದರು. ಕಳೆದ ಆರು ತಿಂಗಳಿಂದ ಪಟ್ಟಣದ ಶಾಂತಿನಗರದ ಬಾಡಿಗೆ ಮನೆಯಲ್ಲಿ ದಂಪತಿ ವಾಸವಾಗಿದ್ದರು.

ಬುಧವಾರ ಮಧ್ಯಾಹ್ನ ಮೃತ ಗಂಗಾಧರ್ ಪತ್ನಿ ಭವ್ಯ ಮೃತರ ತಾಯಿ ಸರಸ್ವತಿಗೆ ದೂರವಾಣಿ ಕೆರೆ ಮಾಡಿ ನಿಮ್ಮ ಮಗ ಸ್ನಾನದ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ಬಾಗಿಲು ತೆಗೆಯುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಸರಸ್ವತಿ ಅವರು ಬಂದು ನೋಡಿದಾಗ ಬೆತ್ತಲೆ ಸ್ಥಿತಿಯಲ್ಲಿ ಗಂಗಾಧರ್ ಬಿದ್ದಿರುವುದು ಕಂಡುಬಂದಿದೆ.

ತಕ್ಷಣ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಆಸ್ಪತ್ರೆಯಲ್ಲಿ ವೈದ್ಯರು ಗಂಗಾಧರ್ ಮೃತಪಟ್ಟಿರುವುದನ್ನು ಧೃಡಪಡಿಸಿದ್ದಾರೆ. ಬಳಿಕ ಮೃತದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮೃತರ ತಾಯಿ ಸರಸ್ವತಿ ಅವರು ನನ್ನ ಮಗ ಗಂಗಾಧರ್ ನನ್ನು ಆತನ ಪತ್ನಿ ಭವ್ಯ, ತಂದೆ ಬಸವೇಗೌಡ, ಜಯಲಕ್ಷ್ಮಿ, ಸೋದರ ನವೀನ, ನವೀನನ ಹೆಂಡತಿ ಸೇರಿ ಕೊಲೆ ಮಾಡಿರುವ ಸಂಶಯವಿದೆ. ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಕೊಲೆ ಸಂಶಯದ ದೂರು ದಾಖಲಾಗಿದೆ.

ಪ್ರಕರಣ ಮುಚ್ಚಿ ಹಾಕಲು ಯತ್ನ:

ಗಂಗಾಧರ್‌ನನ್ನು ಆತನ ಪತ್ನಿ ಮತ್ತು ಕುಟುಂಬಸ್ಥರು ಕೊಲೆ ಮಾಡಿದ್ದರೂ ಸಹ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಕೊಲೆ ಪ್ರಕರಣ ದಾಖಲಿಸದೆ ಕೊಲೆ ಮಾಡಿದವರನ್ನು ಬಂಧಿಸದೆ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮೃತ ಗಂಗಾಧರ್ ಅವರ ತಾಯಿ ಮತ್ತು ಕುಟುಂಬಸ್ಥರು ಶವ ಪರೀಕ್ಷೆ ನಡೆಸಲು ಅವಕಾಶ ನೀಡಲಿಲ್ಲ.

ಮೃತರ ಮಾವ ಹಾಗೂ ಸಚಿವ ಚಲುವರಾಯಸ್ವಾಮಿ ಸೇಹಿತರಾಗಿದ್ದು, ಸಚಿವರು ಪ್ರಕರಣವನ್ನು ಮುಚ್ಚಿಹಾಕಲು ಪೊಲೀಸರಿಗೆ ಸೂಚಿಸಿದ್ದಾರೆ. ಇದರಿಂದ ಪೊಲೀಸರು ಕೊಲೆ ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಸಚಿವರು ಕೊಲೆ ಮಾಡಿದವರ ಪರವಾಗಿ ನಿಂತಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದರು.

ಈ ವೇಳೆ ಗಂಗಾಧರ್ ಶವ ಪರೀಕ್ಷೆ ನಡೆಸಲು ಮೃತ ಪೋಷಕರನ್ನು ಪೊಲೀಸರು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರು. ಇದಕ್ಕೆ ಅವಕಾಶ ನೀಡಲಿಲ್ಲ. ಬಳಿಕ ಪೊಲೀಸರು ಶವ ಪರೀಕ್ಷೆ ವರದಿಯಲ್ಲಿ ಕೊಲೆ ಎಂದು ಬಂದರೆ ಆರೋಪಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ ಮೇರೆಗೆ ಶವ ಪರೀಕ್ಷೆ ನಡೆಸಲು ಅವಕಾಶ ನೀಡಿದರು.

ಈ ವಿಷಯ ತಿಳಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸಾರ್ವಜನಿಕ ಆಸ್ಪತ್ರೆ ಶವಗಾರದ ಬಳಿ ಆಗಮಿಸಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

Share this article