ಮನೆ ಎದುರು ನಿಲುಗಡೆ ಮಾಡಿದ ಬೈಕ್‌ಗಳ ಹ್ಯಾಂಡಲ್‌ ಲಾಕ್‌ ಮುರಿದು ಕಳವು ಮಾಡುತ್ತಿದ್ದ ಆರೋಪಿ ಜೈಲಿಗೆ

KannadaprabhaNewsNetwork | Updated : Sep 28 2024, 04:49 AM IST

ಸಾರಾಂಶ

ಮನೆ ಎದುರು ನಿಲುಗಡೆ ಮಾಡಿದ ಬೈಕ್‌ಗಳ ಹ್ಯಾಂಡಲ್‌ ಲಾಕ್‌ ಮುರಿದು ಕಳವು ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಮನೆ ಎದುರು ನಿಲುಗಡೆ ಮಾಡಿದ ಬೈಕ್‌ಗಳ ಹ್ಯಾಂಡಲ್‌ ಲಾಕ್‌ ಮುರಿದು ಕಳವು ಮಾಡುತ್ತಿದ್ದ ಆರೋಪಿಯನ್ನು ಕೆ.ಆರ್‌.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸುಂಕದಕಟ್ಟೆ ಮುದ್ದಿನಪಾಳ್ಯದ ಹನುಮೇಶ್‌ ಅಲಿಯಾಸ್‌ ಚಿನ್ನ ಹನುಮಯ್ಯ(32) ಬಂಧಿತ. ಆರೋಪಿಯಿಂದ ₹22.50 ಲಕ್ಷ ಮೌಲ್ಯದ 30 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ಕೆ.ಆರ್.ಪುರ ಸಮೀಪದ ಕೌದೇನಹಳ್ಳಿ ಮನೆಯೊಂದರ ಬಳಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಇನ್‌ಸ್ಪೆಕ್ಟರ್‌ ಬಿ.ರಾಮಮೂರ್ತಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಸಂಬಂಧ ಆರೋಪಿ ಪತ್ತೆಗೆ ತನಿಖೆಗಿಳಿದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ವೇಳೆ ಸಿಕ್ಕ ಸುಳಿವು ಹಾಗೂ ಬಾತ್ಮೀದಾರರು ನೀಡಿದ ಖಚಿತ ಮಾಹಿತಿ ಮೇರೆಗೆ ಮುದ್ದಿನಪಾಳ್ಯದಲ್ಲಿ ದ್ವಿಚಕ್ರ ವಾಹನ ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆರೋಪಿಯು ದ್ವಿಚಕ್ರ ವಾಹನ ಕಳ್ಳತನ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವಿವಿಧೆಡೆ ದ್ವಿಚಕ್ರ ವಾಹನ ಕಳವು ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ.

ಆಂಧ್ರದಲ್ಲಿ ಮಾರಾಟಕ್ಕೆ ಯತ್ನ

ಆರೋಪಿ ಹನುಮೇಶ್‌ ನೀಡಿದ ಮಾಹಿತಿ ಮೇರೆಗೆ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ಕಂದಕೂರು ಗ್ರಾಮದ ಖಾಲಿ ಜಾಗದಲ್ಲಿ ನಿಲುಗಡೆ ಮಾಡಿದ್ದ 8 ದ್ವಿಚಕ್ರ ವಾಹನಗಳು, ಕೆ.ಆರ್‌.ಪುರದ ಖಾಲಿ ಜಾಗದಲ್ಲಿ ನಿಲುಗಡೆ ಮಾಡಿದ್ದ 10 ದ್ವಿಚಕ್ರ ವಾಹನಗಳು ಹಾಗೂ ಯಲಹಂಕದ ವೆಂಕಟಾಲ ಬಳಿ ಬಿಎಸ್‌ಎಫ್‌ ಕಾಂಪೌಂಡ್‌ ಸಮೀಪದ ನೀಲಗಿರಿ ತೋಪಿನಲ್ಲಿ ನಿಲುಗಡೆ ಮಾಡಿದ್ದ 11 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ರಾತ್ರಿ ವೇಳೆ ಹ್ಯಾಂಡಲ್‌ ಲಾಕ್‌ ಮುರಿದು ಕಳವು

ಆರೋಪಿಯು ರಾತ್ರಿ ವೇಳೆ ನಗರದ ವಿವಿಧೆಡೆ ಸುತ್ತಾಡಿ ಮನೆ ಎದುರು ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳ ಹ್ಯಾಂಡಲ್‌ ಲಾಕ್‌ ಮುರಿದು ಕಳವು ಮಾಡುತ್ತಿದ್ದ. ಕದ್ದ ದ್ವಿಚಕ್ರ ವಾಹನಗಳನ್ನು ಖಾಲಿ ಜಾಗದಲ್ಲಿ ನಿಲುಗಡೆ ಮಾಡಿ, ಗಿರಾಕಿಗಳನ್ನು ಹುಡುಕಿ ಮಾರಾಟ ಮಾಡಿ ಹಣ ಪಡೆಯುತ್ತಿದ್ದ. ಕೆಲವು ದ್ವಿಚಕ್ರ ವಾಹನಗಳನ್ನು ಆಂಧ್ರಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಪ್ರಯತ್ನಿಸಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.  

ಎಂಟು ಪ್ರಕರಣ ಪತ್ತೆ

ಈತನ ಬಂಧನದಿಂದ ಕೆ.ಆರ್‌.ಪುರ ಮೂರು, ಎಚ್‌ಎಎಲ್‌, ಮಹದೇವಪುರ, ಪರಪ್ಪನ ಅಗ್ರಹಾರ, ಬ್ಯಾಡರಹಳ್ಳಿ, ಹೆಬ್ಬಗೋಡಿ ಠಾಣೆ ತಲಾ ಒಂದು ಸೇರಿದಂತೆ ಒಟ್ಟು 8 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ. ಉಳಿದ ದ್ವಿಚಕ್ರ ವಾಹನಗಳ ವಾರಸುದಾರರ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article